ಬೆಂಗಳೂರು: ಹೊಸ ಅಲೆಯ ವಿನೂತನ ಧಾರಾವಾಹಿಗಳನ್ನು (Lakshmi Tiffin Room) ಕನ್ನಡಿಗರಿಗೆ ನೀಡುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ “ಲಕ್ಷ್ಮಿ ಟಿಫನ್ ರೂಮ್” ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ.
ಕಥಾ ನಾಯಕಿ ವರಲಕ್ಷ್ಮಿ ನೇರ ನುಡಿಯನ್ನು ಹೊಂದಿರುವವಳು. ಎಂತಹ ಸಂದರ್ಭದಲ್ಲೂ ಈಕೆ ನ್ಯಾಯದ ಪರ ನಿಲ್ಲುವ ಗಟ್ಟಿಗಿತ್ತಿ. ಐಎಎಸ್ ಮಾಡಬೇಕೆಂಬ ಕನಸನ್ನು ಕಂಡಿರುತ್ತಾಳೆ. ಆದರೆ ಪರಿಸ್ಥಿತಿಯ ಕೈಗೊಂಬೆಯಾಗಿ, ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತ ಎಂಬ ಮನಸ್ಥಿತಿಯಿರುವ ಮನೆತನಕ್ಕೆ ಸೊಸೆಯಾಗಿ ಹೋಗುತ್ತಾಳೆ. ಆ ಮನೆಯ ರೀತಿ ರಿವಾಜುಗಳು, ಕಟ್ಟುಪಾಡುಗಳನ್ನು ಭೇಧಿಸಿ ತನ್ನ ಗಂಡನ ಮನೆಯಲ್ಲಿರುವ ಎಲ್ಲಾ ಸವಾಲುಗಳನ್ನು ಎದುರಿಸಿ, ವರಲಕ್ಷ್ಮಿ ತನ್ನ ಐಎಎಸ್ ಕನಸನ್ನು ನನಸಾಗಿಸುತ್ತಾಳಾ ? ಈ ಮೂರುಗಂಟಿನ ಬಂಧ, ವರು ಕನಸುಗಳನ್ನು ಕಟ್ಟಿಹಾಕುತ್ತಾ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.
ಹೆಣ್ಣೊಬ್ಬಳು ಕೂಡು ಕುಟುಂಬಕ್ಕೆ ಸೊಸೆಯಾಗಿ ಹೋದಾಗ ತನ್ನ ಕನಸನ್ನು ನನಸಾಗಿಸಲು ಏನೆಲ್ಲಾ ಕಷ್ಟಗಳನ್ನು ಎದುರಿಸಬೇಕಾಗುತ್ತೆ ಎಂಬುದನ್ನು ಈ ಕಥೆಯಲ್ಲಿ ಅತ್ಯದ್ಭುತವಾಗಿ ತೋರಿಸಲಾಗಿದೆ.
ಇದನ್ನೂ ಓದಿ: Blast in Bangalore: ಯುವಕನ ಪ್ರಾಣ ಉಳಿಸಿದ ತಾಯಿಯ ಕರೆ; ರಾಮೇಶ್ವರಂ ಕೆಫೆ ಸ್ಫೋಟದ ಕರಾಳ ಅನುಭವ ಬಿಚ್ಚಿಟ್ಟ ಟೆಕ್ಕಿ
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ವಿಶೇಷ ಪಾತ್ರದಲ್ಲಿ ಕಿರುತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜೊತೆಗೆ ಸುನೇತ್ರ ಪಂಡಿತ್, ಅನಂತವೇಲು, ವಚನ್, ಮಧುಮಿತಾ, ವಿಜಯಲತಾ, ಕಾವ್ಯ, ಪ್ರೀತಮ್ ಮಕ್ಕಿಹಾಳಿ, ಭಗತ್ ಸೇರಿದಂತೆ ಇನ್ನು ಅನೇಕ ಕಲಾವಿದರು ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ವರಲಕ್ಷ್ಮಿಯ ಕಥೆ “ಲಕ್ಷ್ಮಿ ಟಿಫನ್ ರೂಮ್” ಇದೇ ಸೋಮವಾರದಿಂದ ಸಂಜೆ 6.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.