Site icon Vistara News

ಮಗಳು ಜಾನಕಿ ಧಾರಾವಾಹಿ | ಮುಂದುವರಿದ ಅಧ್ಯಾಯ ಇನ್ನು ನಿಮ್ಮ ಅಂಗೈಯಲ್ಲೆ!

ಮಗಳು ಜಾನಕಿ ಧಾರವಾಹಿ

ಬೆಂಗಳೂರು : ದಶಕಗಳ ಹಿಂದೆಯೇ ಕಿರುತೆರೆಯಲ್ಲಿ ಧಾರಾವಾಹಿಗಳ ಮೂಲಕ ಸಂಚಲನ ಹುಟ್ಟುಹಾಕಿದವರು ಟಿ.ಎನ್‌. ಸೀತಾರಾಮ್‌. ‘ಮಾಯಾಮೃಗ’, ‘ಜ್ವಾಲಾಮುಖಿ’, ‘ಮನ್ವಂತರ’, ‘ಮಳೆಬಿಲ್ಲು’, ‘ಮುಕ್ತ’, ‘ಮುಕ್ತ ಮುಕ್ತ’, ‘ಮಹಾಪರ್ವ’ ಮುಂತಾದ ಧಾರಾವಾಹಿಗಳಿಂದ ಮನೆಮಾತಾಗಿರುವ ನಿರ್ದೇಶಕ. ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಟಿ.ಎನ್‌ ಸೀತಾರಾಮ್‌ (TN Seetharam) ನಿರ್ದೇಶನದ ಮಗಳು ಜಾನಕಿ (Magalu Janaki) ಧಾರಾವಾಹಿ ಪ್ರಸಾರವಾಗುತ್ತಿತ್ತು. ಆದರೆ ಕೋವಿಡ್‌ ಲಾಕ್‌ಡನ್‌ ಕಾರಣದಿಂದ ಮಗಳು ಜಾನಕಿ ಪ್ರಸಾರ ಸ್ಥಗಿತಗೊಂಡಿತ್ತು.

ಧಾರವಾಹಿ ಶೀರ್ಷಿಕೆ, ಶೀರ್ಷಿಕೆ ಗೀತೆ, ಸಂಭಾಷಣೆಯಲ್ಲಿ ಸಾಹಿತ್ಯದ ಸ್ಪರ್ಶವನ್ನು ನೀಡಿದವರು ಟಿ.ಎನ್‌ ಸೀತಾರಾಮ್‌. ವಕೀಲರಾಗಿ ಕಟಕಟೆಯಲ್ಲಿ ಗೋಪಾಲಕೃಷ್ಣ ಅಡಿಗರ, ಕುವೆಂಪು ಅವರ ಕವನದ ಸಾಲುಗಳನ್ನು ಕೋಟ್‌ ಮಾಡುತ್ತಿದ್ದವರು ಅವರು. ೨೦೦೫ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಆರ್ಯಭಟ ಪ್ರಶಸ್ತಿಗಳಲ್ಲಿ ʼಮುಕ್ತʼ ಧಾರಾವಾಹಿಯ ನಿರ್ದೇಶನಕ್ಕಾಗಿ ‘ಶ್ರೇಷ್ಠ ನಿರ್ದೇಶಕ’ ಪ್ರಶಸ್ತಿ ಪಡೆದುಕೊಂಡಿದ್ದರು.

ವೀಕ್ಷಕರ ಮನಗೆದ್ದಿದ್ದ ʼಮಗಳು ಜಾನಕಿʼ (Magalu Janaki) ಧಾರಾವಾಹಿ ಮುಂದುವರಿಸುವಂತೆ ವೀಕ್ಷಕರು ಟಿ.ಎನ್‌ ಸೀತಾರಾಮ್‌ ಅವರಿಗೆ ಮನವಿ ಮಾಡುತ್ತಲೇ ಇದ್ದರು. ಇದೀಗ ನಿರ್ದೇಶಕರು ಸಿಹಿ ಸುದ್ದಿ ನೀಡಿದ್ದಾರೆ. ಅರ್ಧಕ್ಕೆ ನಿಂತಿದ್ದ ಮಗಳು ಜಾನಕಿ ಧಾರಾವಾಹಿ ಇದೀಗ ಮುಂದುವರೆಯಲಿದೆ. ಮಗಳು ಜಾನಕಿ ಮುಂದುವರಿದ ಭಾಗವನ್ನು ಟಿ.ಎನ್‌.ಸೀತಾರಾಮ್ ನಿರ್ದೇಶಿಸಲಿದ್ದಾರೆ. ಇದೇ ತಿಂಗಳು ಮಗಳು ಜಾನಕಿ ಧಾರಾವಾಹಿ ಮುಂದುವರಿದ ಭಾಗದ ಚಿತ್ರೀಕರಣ ಆರಂಭವಾಗಲಿದೆ.

ಇದನ್ನೂ ಓದಿ | Prithviraj Trailer: ಸೂಪರ್ ಸ್ಟಾರ್ ಜತೆ ಅಭಿನಯಿಸಲಿದ್ದಾರೆ Miss World…

ಎಲ್ಲಿ ಪ್ರಸಾರವಾಗುತ್ತೆ ಮಗಳು ಜಾನಕಿ?

ಮಗಳು ಜಾನಕಿ ಧಾರಾವಾಹಿ ಮುಂದುವರಿದ ಭಾಗದ ಸಂಚಿಕೆಗಳು ಟಿವಿಯಲ್ಲಿ ಪ್ರಸಾರವಾಗುವುದಿಲ್ಲ. ಬದಲಾಗಿ ʼಭೂಮಿಕಾ ಟಾಕೀಸ್ʼ (Bhoomika Talkies) ಯೂಟ್ಯೂಬ್‌ ವಾಹಿನಿಯಲ್ಲಿ ಪ್ರಸಾರವಾಗಲಿವೆ. ಈ ಬಗ್ಗೆ ನಿರ್ದೇಶಕ ಟಿ.ಎನ್‌.ಸೀತಾರಾಮ್ ಮಾಹಿತಿ ನೀಡಿದ್ದಾರೆ.

ವೀಕ್ಷಣೆಗೆ ಹಣ ಕಟ್ಟಬೇಕು

“ಮಗಳು ಜಾನಕಿ ಧಾರಾವಾಹಿ ಮುಂದಿನ ಭಾಗದ ಸಂಚಿಕೆಗಳನ್ನು ಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಲು ಆಗುವುದಿಲ್ಲ. ಶೂಟಿಂಗ್ ಮಾಡಿ ನಿಮ್ಮ ಮುಂದೆ ತರಬೇಕಾಗಿರುವುದಿಂದ ಹಣ ವೆಚ್ಚವಾಗುತ್ತದೆ. ತಿಂಗಳಿಗೊಮ್ಮೆ ವೀಕ್ಷಕರು ಹಣ ಕಟ್ಟಬೇಕಾಗುತ್ತದೆʼ’ ಎಂದೂ ಟಿ.ಎನ್‌.ಸೀತಾರಾಮ್ ಹೇಳಿದ್ದಾರೆ. ರವಿ ಮಂಡ್ಯ, ರಶ್ಮಿ, ಸುಧಾ ಬೆಳವಾಡಿ, ಮೇಧಾ ವಿದ್ಯಾಭೂಷಣ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಅದೇ ತಾಂತ್ರಿಕ ತಂಡ ಮುಂದುವರಿಯಲಿರುವುದು ವಿಶೇಷ.

ಮರಳಿ ಬಂದ ಮನ್ವಂತರ

ಟಿ.ಎನ್‌. ಸೀತಾರಾಮ್‌ ನಿರ್ದೇಶನದ ಹೊಸ ಧಾರಾವಾಹಿ ‘ಮನ್ವಂತರ’ (Manvanthara) ಚಿತ್ರೀಕರಣ ಕಳೆದ ವರ್ಷ ಆಗಸ್ಟ್‌ನಲ್ಲಿ ಆರಂಭವಾಗಿತ್ತು. ಪ್ರಮುಖ ಪಾತ್ರದಲ್ಲಿ ಮಾಳವಿಕಾ ಅವಿನಾಶ್‌, ನಿರಂಜನ್‌ ದೇಶಪಾಂಡೆ, ಪ್ರಸಿದ್ಧ ಗಾಯಕ ವಿದ್ಯಾಭೂಷಣರ ಪುತ್ರಿ ಮೇಧಾ, ವೀಣಾ ಸುಂದರ್‌, ಮೇಘಾ ನಾಡಿಗೇರ್‌ ಅಭಿನಯಿಸಲಿದ್ದಾರೆ. ವಾಹಿನಿಯವರು ಒಪ್ಪಿಗೆ ಕೊಟ್ಟಮೇಲೆ ಒಂದೆರಡು ತಿಂಗಳ ನಂತರ ಪೂರ್ಣ ಪ್ರಮಾಣದಲ್ಲಿ ಚಿತ್ರೀಕರಣ ಶುರು ಮಾಡಲಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು.

ಮಾಯಾಮೃಗ

ಟಿ.ಎನ್.ಸೀತಾರಾಮ್ ಪ್ರಧಾನ ನಿರ್ದೇಶನದ, ಪಿ.ಶೇಷಾದ್ರಿ ಹಾಗೂ ನಾಗೇಂದ್ರ ಶಾ ನಿರ್ದೇಶನದ ‘ಮಾಯಾಮೃಗ’ (Mayamruga)ಧಾರಾವಾಹಿ ವೆಬ್ ಸರಣಿ ರೂಪದಲ್ಲಿ ಯೂಟ್ಯೂಬ್ ಮುಖಾಂತರ ಪ್ರಸಾರಗೊಳ್ಳುತ್ತಿದೆ. ‘ಮಾಯಾಮೃಗ’ ಧಾರಾವಾಹಿ ಮೊದಲು ಪ್ರಸಾರ ಕಂಡಿದ್ದು 1998ರಲ್ಲಿ ಡಿಡಿ ಚಂದನ ವಾಹಿನಿಯಲ್ಲಿ. ಕಿರುತೆರೆ ವೀಕ್ಷಕರ ಮನ ಗೆದ್ದಿದ್ದ ‘ಮಾಯಾಮೃಗ’ ಧಾರಾವಾಹಿ 2014ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮರು ಪ್ರಸಾರ ಕಂಡಿತ್ತು.

ಇದನ್ನೂ ಓದಿ | Fat Free Surgery: ಕಿರುತೆರೆ ನಟಿ ಚೇತನಾ ಅನುಮಾನಾಸ್ಪದ ಸಾವು

Exit mobile version