1988ರಿಂದ 1990ರವರೆಗೆ ದೂರದರ್ಶನದಲ್ಲಿ ಬರುತ್ತಿದ್ದ ಬಿ ಆರ್ ಚೋಪ್ರಾ ಅವರ ಧಾರಾವಾಹಿ ಮಹಾಭಾರತದಲ್ಲಿ ʻಶಕುನಿ ಮಾಮಾʼ ಆಗಿ ಕಾಣಿಸಿಕೊಂಡಿರುವ ಹಿರಿಯ ನಟ ಗುಫಿ ಪೈಂಟಲ್ (Gufi Paintal) ಹೃದಯ ಮತ್ತು ಮೂತ್ರಪಿಂಡದ ಸಂಬಂಧಿತ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಳ್ಳಗಿನ ದೇಹ, ಒಂದು ಕಣ್ಣನ್ನು ಸಣ್ಣಗೆ ಮಾಡಿಕೊಂಡು ಕುಂಟುತ್ತಾ ಬರುವ ಆ ಪಾತ್ರವನ್ನು ಮರೆಯುವುದು ಅಸಾಧ್ಯವೆಂದೇ ಹೇಳಬೇಕು. ಇದೀಗ ಗುಫಿ ಪೈಂಟಲ್ ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡಿದೆ ಎಂದು ವರದಿಯಾಗಿದೆ.
ಈಗ ಅವರಿಗೆ 78 ವರ್ಷ ವಯಸ್ಸು. ವಯೋ ಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟನ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮುಂಬೈನ ಅಂಧೇರಿ ಪಶ್ಚಿಮದ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟಿ ಟೀನಾ ಘಾಯ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಹಂಚಿಕೊಂಡ ನಂತರ ಗುಫಿ ಪೈಂಟಲ್ ಅವರ ಆರೋಗ್ಯದ ಬಗ್ಗೆ ಸುದ್ದಿ ಹೊರಬಿದ್ದಿದೆ.
ಗುಫಿ ಪೈಂಟಲ್ ಹಿಂದಿ ಚಲನಚಿತ್ರಗಳ ಹೊರತಾಗಿ, 1980ರ ದಶಕದಲ್ಲಿ ಕೆಲವು ಟಿವಿ ಧಾರಾವಾಹಿಗಳಲ್ಲಿ (Serials) ಕಾಣಿಸಿಕೊಂಡಿದ್ದರು. ನಟನೆಯ ಮೊದಲು ಎಂಜಿನಿಯರ್ ಆಗಿದ್ದರು. ಅವರು ತಮ್ಮ ವೃತ್ತಿಜೀವನವನ್ನು ಎಂಜಿನಿಯರಿಂಗ್‌ನಲ್ಲಿ ಮಾತ್ರ ಪ್ರಾರಂಭಿಸಿದರು.
1975ರ ʻರಫೂ ಚಕ್ಕರ್ʼ ಸಿನಿಮಾ ಮೂಲಕ ಸಿನಿರಂಗಕ್ಕೆ ಪ್ರವೇಶ ಮಾಡಿದರು. ಶ್ರೀ ಚೈತನ್ಯ ಮಹಾಪ್ರಭು ಎಂಬ ಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ. ಇದೇ ವೇಳೆ ಮಾಧ್ಯಮ ವರದಿಗಳ ಪ್ರಕಾರ, ಗುಫಿ ಪೈಂಟಲ್ ಅವರ ಕುಟುಂಬ ಸದಸ್ಯರು ಯಾರೊಂದಿಗೂ ಯಾವುದೇ ವಿವರಗಳನ್ನು ಹಂಚಿಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ನಟಿ ಟೀನಾ ಘಾಯ್ ತಿಳಿಸಿದ್ದಾರೆ.