ಬೆಂಗಳೂರು: ಉದಯ ಟಿವಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ (Myna Serial Udaya TV) ಪ್ರಸಾರವಾಗುತ್ತಿರುವ ʻಮೈನಾʼ ಧಾರಾವಾಹಿಯಲ್ಲಿ 90ರ ದಶಕದ ಬಹುಬೇಡಿಕೆಯ ನಾಯಕಿ (bhavya actress), ಚಿತ್ರತಾರೆ ʻಭವ್ಯಾʼ ನಟಿಸುತ್ತಿದ್ದಾರೆ. ʻಪ್ರೇಮ ಪರ್ವʼ, ʻಪ್ರಳಯಾಂತಕʼ, ʻನೀ ಬರೆದ ಕಾದಂಬರಿʼ, ʻಕೃಷ್ಣ ನೀ ಬೇಗನೆ ಬಾರೋʼ, ʻಕರುಣಾಮಯಿʼ, ʻಹೃದಯಗೀತೆʼ, ʻಮತ್ತೆ ಹಾಡಿತು ಕೋಗಿಲೆʼ, ʻಸಾಂಗ್ಲಿಯಾನʼ ಇತ್ಯಾದಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ವಿಷ್ಣುವರ್ಧನ್, ಶಂಕರನಾಗ್, ಅಂಬರೀಶ್, ರವಿಚಂದ್ರನ್ ಮತ್ತಿತರ ದಿಗ್ಗಜ ಕಲಾವಿದರ ಜತೆ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಭವ್ಯಾ, ಟಿವಿ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಇದೇ ಮೊದಲು.
ಭವ್ಯಾ ಅವರದು ʻಮೈನಾʼ ಧಾರಾವಾಹಿಯಲ್ಲಿ ಮಹಿಳಾ ಹಾಸ್ಟೆಲ್ ಮುಖ್ಯಸ್ಥೆ ಅರುಂಧತಿಯ ಪಾತ್ರ. ಕಟ್ಟುನಿಟ್ಟಾದರೂ ತಾಯಿ ಹೃದಯಿ. ಊರು ಬಿಟ್ಟು ಪರವೂರಿಗೆ ಬಂದಿರುವ ಹೆಣ್ಣುಮಕ್ಕಳೇ ಹೆಚ್ಚಿರುವ ಜಾಗದಲ್ಲಿ ಎಲ್ಲರನ್ನೂ ನಿಯಂತ್ರಿಸುತ್ತ ಎಲ್ಲರ ಸಮಸ್ಯೆಗಳಿಗೂ ಸ್ಪಂದಿಸುತ್ತ ಎಲ್ಲರ ಭಾವನೆಗಳಿಗೂ ಬೆಲೆ ಕೊಡುವ ಅಪರೂಪದ ಪಾತ್ರ.
ಇದನ್ನೂ ಓದಿ: Uday Kiran: ದಿವಂಗತ ನಟ ಉದಯ್ ಕಿರಣ್ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ರಿ-ರಿಲೀಸ್!
ಮೈನಾ ಜೀವನದಲ್ಲಿ ಹಠಾತ್ತನೆ ಬರುವ ಅನಿರೀಕ್ಷಿತ ತಿರುವು ಕಂಗೆಡಿಸಿದಾಗ ಅವಳಿಗೆ ಆಸರೆಯಾಗಿ ನಿಲ್ಲುತ್ತಾಳೆ ಅರುಂಧತಿ. ಹಾಗೆಯೇ ಇವರ ಮಹಿಳಾ ಹಾಸ್ಟೆಲ್‌ನಲ್ಲಿರುವ ಇತರ ನಾಲ್ಕು ಹೆಣ್ಣುಮಕ್ಕಳೂ ʻಮೈನಾʼ ಧಾರಾವಾಹಿಯ ಮಹತ್ವದ ಪಾತ್ರಗಳಾಗಿ ಬರುತ್ತಾರೆ. ಮಹಿಳಾ ಹಾಸ್ಟೆಲ್ ಈ ಧಾರಾವಾಹಿಯಲ್ಲಿ ಒಂದು ಬಹುಮುಖ್ಯ ಅಂಗವೇ ಆಗಿದೆ.
ʻಮೈನಾʼ ಧಾರಾವಾಹಿ ಪ್ರತಿದಿನ (ಸೋಮವಾರದಿಂದ ಭಾನುವಾರ) ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.
ಉದಯ ಟಿವಿಯಲ್ಲಿ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ‘ಕನ್ಯಾದಾನ’, ‘ಗಂಗೆಗೌ’ರಿ, ‘ಅಣ್ಣತಂಗಿ’, ‘ಶಾಂಭವಿ’, ‘ಸೇವಂತಿ’, ‘ರಾಧಿಕಾ’, ‘ಜನನಿ’, ‘ಗೌರಿಪುರದ ಗಯ್ಯಾಳಿಗಳು’ ಹೀಗೆ ಸಾಕಷ್ಟು ವೈವಿಧ್ಯಮಯ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಇದಕ್ಕೆ ಈಗ ಹೊಸ ಧಾರಾವಾಹಿ ʼಮೈನಾʼ ಸೇರ್ಪಡೆ ಆಗಿದೆ.
ಮೈನಾ ಪಾತ್ರದಲ್ಲಿ ನಟಿ ವಿಜಯಲಕ್ಷ್ಮಿ ನಟಿಸುತ್ತಿದ್ದಾರೆ. ಈ ಹಿಂದೆ ಅವರು ‘ಲಕ್ಷಣ’ ಧಾರಾವಾಹಿಯಲ್ಲಿ ನಕ್ಷತ್ರಾ ಎನ್ನುವ ಪಾತ್ರ ಮಾಡಿದ್ದರು. ಟಿ ಎಸ್ ನಾಗಾಭರಣ, ಅಪೂರ್ವ, ಅಂಜಲಿ, ಮಾನಸಿ ಜೋಶಿ, ಸಚಿನ್, ಸಿದ್ದಾರ್ಥ್, ಪ್ರಭಂಜನ, ಸಾಗರ್, ಹರ್ಷಾರ್ಜುನ್, ಯಶಸ್ವಿನಿ, ಆಶಾ, ಅನುಷಾ ಕುಮಾರಿ, ಮಾಸ್ಟರ್ ಅರುಣ್, ಮಾಸ್ಟರ್ ರಣವೀರ್ ಮುಂತಾದವರು ನಟಿಸುತ್ತಿದ್ದಾರೆ.