Site icon Vistara News

Nanna Devaru Serial: ಕಿರುತೆರೆಗೆ ಕಮ್‌ಬ್ಯಾಕ್‌ ಮಾಡಿದ ಮಯೂರಿ;  ‘ನನ್ನ ದೇವ್ರು’ ಧಾರಾವಾಹಿಗೆ ನರಸಿಂಹರಾಜು ಮೊಮ್ಮಗ ಹೀರೊ!

Nanna Devaru Serial Mayuri And NarasimhaRaju Grand Son Acting

ಬೆಂಗಳೂರು: ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾದ ಕಲರ್ಸ್ ಕನ್ನಡ ಇದೀಗ ‘ನನ್ನ ದೇವ್ರು’ ಎಂಬ ಹೊಸ (Nanna Devaru Serial) ಕತೆಯನ್ನು ಹೊತ್ತು ತಂದಿದೆ. ಜುಲೈ 8ರಿಂದ ಪ್ರಸಾರ ಆರಂಭಿಸಲಿರುವ ಈ ಹೊಸ ಧಾರಾವಾಹಿಯನ್ನು ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ಸಂಜೆ 6.30ಕ್ಕೆ ಪ್ರಸಾರ ಕಾಣುತ್ತಿದೆ.

‘ನನ್ನ ದೇವ್ರು’ ಧಾರಾವಾಹಿಯ ವಿಶೇಷವೆಂದರೆ “ಅಶ್ವಿನಿ ನಕ್ಷತ್ರ’ದಿಂದ ಮನೆಮಾತಾಗಿದ್ದ ಮಯೂರಿ ಮತ್ತೆ ಕಿರುತೆರೆಗೆ ಮರಳಿರುವುದು. ಈ ಧಾರಾವಾಹಿಯಲ್ಲಿ ಮಯೂರಿಯದು ಸಣ್ಣ ಊರಿನ ಬಡ ನರ್ಸ್ ಪಾತ್ರ. ಊರೇ ಮೆಚ್ಚುವ ಉದ್ಯಮಿ ಸಚ್ಚಿದಾನಂದಗೆ ಸೇರಿದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಬಡ ಹುಡುಗಿ ಮಯೂರಿ. ಜನಾನುರಾಗಿ ಸಚ್ಚಿದಾನಂದನ ಇಪ್ಪತ್ತು ವರ್ಷದ ಮಗಳಿಗೆ ಅಪ್ಪನನ್ನು ಕಂಡರೆ ಇಷ್ಟವಿಲ್ಲ. ತನ್ನಿಂದ ದೂರಾಗಿ ಬದುಕುತ್ತಿರುವ ಮಗಳ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು ಹಲುಬುತ್ತಿರುವ ಸಚ್ಚಿದಾನಂದನ ಬದುಕಲ್ಲಿ ಮಯೂರಿಯ ಪ್ರವೇಶವಾಗುತ್ತದೆ. ತಾನು ಆರಾಧಿಸುವ ಸಚ್ಚಿದಾನಂದ್ ಬಾಳನ್ನು ಸರಿದಾರಿಗೆ ತರುವ ಹಾದಿಯಲ್ಲಿ ಮಯೂರಿ ಎದುರಿಸುವ ಸವಾಲುಗಳೇನು ಎಂಬುದೇ ಮುಂದಿನ ಕತೆ. ಸುತ್ತಲಿನವರ ಸಂಚುಗಳಿಂದ ಮಯೂರಿ ಹೇಗೆ ಸಚ್ಚಿದಾನಂದನನ್ನು ಕಾಪಾಡುತ್ತಾಳೆ ಎಂಬುದು ಕುತೂಹಲ.

‘ಅಶ್ವಿನಿ ನಕ್ಷತ್ರ’ದಿಂದ ಹೆಸರಾದ ಮಯೂರಿ ತುಂಬಾ ವರ್ಷಗಳ ನಂತರ ಟಿವಿಗೆ ಮರಳಿ ‘ನನ್ನ ದೇವ್ರು’ ನಾಯಕಿಯಾಗಿದ್ದಾರೆ. ನಾಯಕನಾಗಿ ನಟಿಸುತ್ತಿರುವ ಅವಿನಾಶ್ ದಿವಾಕರ್ ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಅನ್ನುವುದು ಇನ್ನೊಂದು ವಿಶೇಷ. ಇವರೊಟ್ಟಿಗೆ ಯುಕ್ತಾ ಮಲ್ನಾಡ್, ಸ್ವಾತಿ, ವಿ ಮನೋಹರ್, ರೇಖಾದಾಸ್, ನಿಶ್ಚಿತಾ ಗೌಡ, ಮಾಲತಿ ಸುಧೀರ್, ಯಮುನಾ ಶ್ರೀನಿಧಿ, ರವಿ ಬ್ರಹ್ಮ, ಅಭಿಷೇಕ್ ಶ್ರೀಕಾಂತ್ ಹೀಗೆ ‘ನನ್ನ ದೇವ್ರು’ ತಾರಾಗಣದಲ್ಲಿ ಜನಪ್ರಿಯ ನಟ ನಟಿಯರು ತುಂಬಾನೇ ಇದ್ದಾರೆ.

ಇದನ್ನೂ ಓದಿ: Kannada Serials TRP: ಟಾಪ್‌ 5ನಲ್ಲಿ ʻಲಕ್ಷ್ಮೀ ಬಾರಮ್ಮʼ; ಹೊಸ ಧಾರಾವಾಹಿಗಿಲ್ಲ ಬೇಡಿಕೆ!

ಈ ಮೊದಲು ‘ಒಲವಿನ ನಿಲ್ದಾಣ’ ಧಾರಾವಾಹಿಯನ್ನು ನಿರ್ಮಿಸಿದ್ದ ಶ್ರುತಿ ನಾಯ್ಡು, ‘ನನ್ನ ದೇವ್ರು’ ಧಾರಾವಾಹಿಯನ್ನು ನಿರ್ಮಿಸಿದ್ದಾರೆ. ಇತ್ತೀಚಿಗೆ ಬೆಳ್ಳಿತೆರೆಯ ಮೇಲೆ ಖಳನಟನಾಗಿ ಗಮನ ಸೆಳೆಯುತ್ತಿರುವ ರಮೇಶ್ ಇಂದಿರಾ ‘ನನ್ನ ದೇವ್ರು’ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

ಈ ಹೊಸ ಧಾರಾವಾಹಿ ಬಗ್ಗೆ ಉತ್ಸುಕತೆ ತೋರಿದ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, ‘ಸದಾ ಹೊಸತನಕ್ಕಾಗಿ ತುಡಿಯುವ ಕಲರ್ಸ್ ಕನ್ನಡ ಈ ಹೊಸ ಧಾರಾವಾಹಿಯ ಮುಖಾಂತರ ಮುಗ್ಧತೆ ಮತ್ತು ಪ್ರಾಮಾಣಿಕತೆ ತಂದೊಡ್ಡುವ ಸವಾಲುಗಳ ಕತೆಯೊಂದನ್ನು ವೀಕ್ಷಕರಿಗೆ ಉಣಬಡಿಸಲಿದೆ’ ಎಂದು ಹೇಳಿದರು.

ಕಲರ್ಸ್ ಕನ್ನಡದಲ್ಲಿ ಜುಲೈ 8ರ ಸಂಜೆ ಆರೂವರೆಗೆ ‘ನನ್ನ ದೇವ್ರು’ ಧಾರಾವಾಹಿಯ ಮೊದಲ ಕಂತು ಪ್ರಸಾರವಾಗಲಿದೆ. ಇದನ್ನು ಜಿಯೋ ಸಿನಿಮಾ ಮುಖಾಂತರ ಫೋನಿನಲ್ಲೂ ನೋಡಬಹುದಾಗಿದೆ.

Exit mobile version