ಬೆಂಗಳೂರು: ʻವೀಕೆಂಡ್ ವಿತ್ ರಮೇಶ್ʼ ಶೋದಲ್ಲಿ (Weekend With Ramesh) ಈ ವಾರ ನೆನಪುಗಳನ್ನು ಮೆಲುಕು ಹಾಕುವುದಕ್ಕೆ ನೆನಪಿರಲಿ ಪ್ರೇಮ್ ಅತಿಥಿಯಾಗಿ ಬರಲಿದ್ದಾರೆ. ಪ್ರತಿ ವಾರವು ಯಾರಾದರೂ ಒಬ್ಬರು ಅಥವಾ ಇಬ್ಬರು ಅತಿಥಿಗಳನ್ನು ಅಥವಾ ಸಾಧಕರನ್ನು ಗುರುತಿಸಿ ಕರೆತರುತ್ತಿದ್ದಾರೆ ವೀಕೆಂಡ್ ವಿತ್ ರಮೇಶ್ ತಂಡ. ಇ ಬಾರಿಯೂ ಸಾಧಕನ ಫೋಟೊವನ್ನು ತಮ್ಮ ಪೇಜ್‌ನಲ್ಲಿ ಪೋಸ್ಟ್ ಮಾಡಿ, ಮಸುಕಾಗಿರುವ ಪೋಟೊಗೆ ಯಾರು ಎಂಬುದು ಗೆಸ್ ಮಾಡಿ ಎಂದು ಬರೆದುಕೊಂಡಿದ್ದಾರೆ.
ನೆನಪಿರಲಿ ಪ್ರೇಮ್ , ಲವ್ಲಿ ಸ್ಟಾರ್ ಪ್ರೇಮ್ ಎಂದು ಪ್ರಸಿದ್ದಿಯಾಗಿದ್ದಾರೆ. ನೆನಪಿರಲಿ ಪ್ರೇಮ್ 2004ರಲ್ಲಿ ಪ್ರಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದರು. ಆರಂಭದಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ ಪ್ರೇಮ್ ಬರುಬರುತ್ತ ಚಿತ್ರರಂಗದಲ್ಲಿ ಸೋಲುಗಳನ್ನು ಅನುಭವಿಸಿದರು. 2005ರಲ್ಲಿ ಬಂದ ನೆನಪಿರಲಿ ಸಿನಿಮಾ ಪ್ರೇಮ್‌ಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಬಳಿಕ ಜೊತೆ ಜೊತೆಯಲಿ, ಪಲ್ಲಕ್ಕಿ, ಗುಣವಂತ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದರು. ಪ್ರೇಮ್ ಕೊನೆಯದಾಗಿ ಪ್ರೇಮಂ ಪೂಜ್ಯಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಅವರ ಮಗಳು ಕೂಡ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಟಗರು ಪಲ್ಯ’ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ (Nenapirali Prem) ಪುತ್ರಿ ಅಮೃತ ನಾಯಕಿಯಾಗಿದ್ದಾರೆ. ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತಾ ಅವರನ್ನು ಚಿತ್ರೋದ್ಯಮಕ್ಕೆ ಪರಿಚಯ ಮಾಡುತ್ತಿರುವುದು ಡಾಲಿ ಧನಂಜಯ್ ಎನ್ನುವುದು ವಿಶೇಷ. ಯೋಗರಾಜ್ ಭಟ್ ಸೇರಿದಂತೆ ಹಲವು ನಿರ್ದೇಶಕರ ಜತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಉಮೇಶ್ ಕೆ. ಕೃಪ ಅವರಿಗಿದೆ. ‘ಟಗರು ಪಲ್ಯ’ ಕಂಟೆಂಟ್ ಆಧಾರಿತ ಸಿನಿಮಾವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇದನ್ನೂ ಓದಿ: Weekend With Ramesh: ಶಂಕರ್ ನಾಗ್‌ಗೆ ಕರ್ನಾಟಕದ ಜನತೆಯ ಮೇಲಿದ್ದ ಕಾಳಜಿ ಬಗ್ಗೆ ವಿವರಿಸಿದ ಸಿಹಿ ಕಹಿ ಚಂದ್ರು
ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಈಗಾಗಲೇ ರಮ್ಯಾ, ಪ್ರಭುದೇವ, ವೈದ್ಯ ಮಂಜುನಾಥ್, ಡಾಲಿ ಧನಂಜಯ್, ದತ್ತಣ್ಣ, ಮಂಡ್ಯ ರಮೇಶ್, ಸಿಹಿ-ಕಹಿ ಚಂದ್ರು, ಗುರುರಾಜ ಕರಜಗಿ, ಅವಿನಾಶ್ ಅವರುಗಳು ಆಗಮಿಸಿ ಸಾಧಕರ ಕುರ್ಚಿಯ ಮೇಲೆ ಕುಳಿತಿದ್ದಾರೆ. ಇದೀಗ ನೆನಪಿರಲಿ ಪ್ರೇಮ್ ಸಾಧಕರ ಕುರ್ಚಿಯನ್ನು ಅಲಂಕರಿಸಲಿದ್ದಾರೆ. ಅವರ ವೃತ್ತಿ ಜೀವನ, ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಆದ ಬದಲಾವಣೆಗಳು ಹೀಗೆ ಯಾವೆಲ್ಲ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ.