ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥರಾಗಿದ್ದ ಪರಮೇಶ್ವರ್ ಗುಂಡ್ಕಲ್ (Parameshwar Gundkal) ರಾಜೀನಾಮೆ ನೀಡಿದ್ದು, ಜಿಯೋ ಸ್ಟುಡಿಯೋಸ್ (Jio Studios)ಕನ್ನಡ ಬ್ಯುಸಿನೆಸ್ ಹೆಡ್ ಆಗಿ ಕೆಲಸ ಆರಂಭಿಸಿದ್ದಾರೆ. ಇದೀಗ ಪರಮೇಶ್ವರ್ ಗುಂಡ್ಕಲ್ ಅವರು ಈ ಬಗ್ಗೆ ಭಾವುಕರಾಗಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಪರಮೇಶ್ವರ್ ಗುಂಡ್ಕಲ್ ಕಲರ್ಸ್ ಕನ್ನಡದಲ್ಲಿ ಬ್ಯುಸಿನೆಸ್ ಹೆಡ್ ಆಗಿದ್ದರೂ ಪರಮ್ ಹಲವು ಕಾರ್ಯಕ್ರಮಗಳಿಗೆ ನಿರ್ದೇಶನ ಮಾಡುತ್ತಿದ್ದರು. ಕನ್ನಡ ಕೋಟ್ಯಧಿಪತಿ, ಬಿಗ್ ಬಾಸ್ ಸೇರಿದಂತೆ ಹಲವು ಕಾರ್ಯಕ್ರಮಗಳ ಹಿಂದೆ ಇವರೇ ಕೆಲಸ ಮಾಡಿದ್ದರು.
ಕಲರ್ಸ್ ಕನ್ನಡ ಬಿಟ್ಟಿರುವ ಪರಮೇಶ್ವರ್ ಗುಂಡ್ಕಲ್ ಅವರು ಮುಂದೆ ಜಿಯೋ ಕನ್ನಡ ಸಿನಿಮಾ ಹೆಡ್ ಆಗಿ ಹೋಗಲಿದ್ದಾರೆ. ಜಿಯೋ ಸಿನಿಮಾ ಕನ್ನಡದಲ್ಲಿ ಶುರುವಾಗಲಿದೆ. ಅದಕ್ಕೆ ಹೆಡ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಮೊದಲ ಬಾರಿಗೆ ಜಿಯೋ ಸ್ಟುಡಿಯೋಸ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಲಿದ್ದು, ಸಿನಿಮಾ ನಿರ್ಮಾಣ, ವೆಬ್ ಸಿರೀಸ್ ತಯಾರಿಕೆ ಸೇರಿದಂತೆ ಮನರಂಜನೆಯ ನಾನಾ ವಿಭಾಗಗಳಲ್ಲಿ ಕೆಲಸ ಮಾಡಲಿದೆ ಎಂದು ವರದಿಯಾಗಿದೆ. ಈ ವರ್ಷದಿಂದಲೇ ಸಿನಿಮಾ ನಿರ್ಮಾಣಕ್ಕೂ ಅದು ಕೈ ಹಾಕಲಿದೆ.
ಪರಮೇಶ್ವರ್ ಗುಂಡ್ಕಲ್ ಪೋಸ್ಟ್
ಪರಮೇಶ್ವರ್ ಗುಂಡ್ಕಲ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ʻʻನಮ್ಮ ಕಡೆ ಮನೆಗಳಿಗೆ ಹೊಸದಾಗಿ ಒಂದೊಂದೇ ಟೆಲಿವಿಷನ್ ಬರುತ್ತಿರುವಾಗ ನಮ್ಮನೆಗೆ ಕರೆಂಟೂ ಬಂದಿರಲಿಲ್ಲ. ಮೊದಲನೇ ಸಲ ಕರೆಂಟ್ ಬಂದ ಒಂದು ಮಳೆಗಾಲದ ಸಂಜೆ ಅಕ್ಕನ ಜತೆ ಸೇರಿ ಬರೀ ಸ್ವಿಚ್ ಒತ್ತಿ ಲೈಟ್ ಆನ್ ಮಾಡುವುದು ಮತ್ತು ಆಫ್ ಮಾಡುವುದನ್ನೇ ಮಾಡುತ್ತ ಗಂಟೆಗಟ್ಟಲೇ ಕುಣಿದಾಡಿದ್ದು ನಿನ್ನೆ ಮೊನ್ನೆ ಆದ ಹಾಗೆ ನೆನಪಿದೆ. ಕಾರಣವಿಲ್ಲದೇ ಲೈಟ್ ಆನ್ ಮತ್ತು ಆಫ್ ಮಾಡುವುದೇ ನಮಗೆ ಸುಮಾರು ದಿನಗಳ ಕಾಲ ಎಂಟರಟೇನ್ಮೆಂಟ್ ಆಗಿತ್ತು.
ಈ ಟೀವಿಯಂಥ ವಾಹಿನಿಗಳು ಕನ್ನಡದಲ್ಲಿ ಕತೆಗಳನ್ನು ಹೇಳತೊಡಗಿದಾಗ ನಮ್ಮನೆಗೆ ಕಲರ್ ಟೀವಿ ಬಿಡಿ, ಇನ್ನೂ ಟೀವಿಯೇ ಬಂದಿರಲಿಲ್ಲ. ಗದ್ದೆ, ತೋಟಗಳಲ್ಲಿ ಕೆಲಸ ಮಾಡುತ್ತ, ದನ, ಕರು ಮೇಯಿಸುತ್ತಾ ಅಲೆದಾಡುತ್ತಿರುವಾಗ ನಾಲ್ಕು ಬ್ಯಾಂಡಿನ ರೆಡಿಯೋದಲ್ಲಿ ಧ್ವನಿ ಕೇಳಿಸಿಕೊಳ್ಳುತ್ತಾ ಕಲರ್ ಕಲರ್ ಚಿತ್ರಗಳನ್ನು ಕಣ್ಮುಂದೆ ತಂದುಕೊಳ್ಳುತ್ತಾ ಯಾವತ್ತಾದರೂ ಒಂದು ದಿನ ಕತೆ ಹೇಳಬೇಕೆಂದು ಕಾತರಿಸುತ್ತಿದ್ದ ಟೈಮ್ ಅದು. ಆ ಅವಕಾಶ ಮೊದಲು ಸಿಕ್ಕಿದ್ದು ಕನ್ನಡ ಪತ್ರಿಕೆಗಳಲ್ಲಿ. ನಂತರ ಸಿಕ್ಕಿದ್ದು ಟೀವಿಯಲ್ಲಿ. ಟೆಲಿವಿಷನ್ ಸೇರಿಕೊಂಡ ಮೊದಮೊದಲು ತುಂಬಾ ಬೆರಗು ಹುಟ್ಟಿಸಿದ್ದ ಕಂಪನಿ ವಯಾಕಾಮ್ 18. ಸರಿಯಾದ ಟೈಮಲ್ಲಿ ಸರಿಯಾದ ಜಾಗದಲ್ಲಿ ಇದ್ದಿದ್ದರಿಂದಲೋ ಏನೋ. ಒಂದು ದಿನ ಅದೇ ಕಂಪನಿಯ ಕಲರ್ಸ್ ಚಾನೆಲ್ಲನ್ನು ಕನ್ನಡದಲ್ಲಿ ರೂಪಿಸುವ ಅವಕಾಶ ಸಿಕ್ಕಿಬಿಟ್ಟದ್ದು ಮಾತ್ರ ಬಹುಶಃ ಅದೃಷ್ಟ. ಅಷ್ಟೇ ಅನಿರೀಕ್ಷಿತ.
ಒಟ್ಟಾರೆ ಹತ್ತೂವರೆ ವರ್ಷ! ಅಗ್ನಿಸಾಕ್ಷಿ, ಲಕ್ಷ್ಮೀ ಬಾರಮ್ಮ, ರಾಧಾರಮಣ, ಕನ್ನಡತಿ ತರದ ಕತೆಗಳು, ಬಿಗ್ ಬಾಸ್, ಡಾನ್ಸಿಂಗ್ ಸ್ಟಾರ್, ಸೂಪರ್ ಮಿನಿಟ್, ಕನ್ನಡದ ಕೋಟ್ಯಧಿಪತಿ, ಅನುಬಂಧ ತರದ ಒಂದಿಷ್ಟು ಶೋಗಳು. ರಿಬ್ರ್ಯಾಂಡಿಂಗ್, ಎಚ್ ಡಿ ಚಾನೆಲ್, ಎರಡನೇ ಚಾನೆಲ್, ಸಿನಿಮಾ ಚಾನೆಲ್, ವೂಟ್ ಹೀಗೆ ಒಂದೊಂದೂ ಕಲರ್ ಕಲರ್ ಅನುಭವ. ಗೆದ್ದ ಖುಷಿ, ಸೋತ ನೋವು, ತಪ್ಪು ಮಾಡಿ ಕಲಿತ ಪಾಠ, ಅಕಾರಣವಾಗಿ ಸಿಕ್ಕಿದ ಮೆಚ್ಚುಗೆ, ಸಕಾರಣವಾಗಿ ಆದ ಟೀಕೆ ಮತ್ತು ಅವಮಾನ, ಕತೆ ಹುಟ್ಟಿ ಸಂಭ್ರಮಿಸಿದ ದಿನಗಳು, ಕತೆ ಹುಟ್ಟದೇ ಗೊಂದಲಗೊಂಡ ಕ್ಷಣಗಳು, ದಾರಿಯಲ್ಲಿ ಸಿಕ್ಕಿದ ನಕ್ಷತ್ರಗಳು, ಹೆಕ್ಕಿಕೊಂಡ ಭಾವನೆಗಳೆಲ್ಲ ಸೇರಿ ತಿರುಗಿ ನೋಡಿದಾಗ ಸಿಕ್ಕಾಪಟ್ಟೆ ಸಮಾಧಾನ. ಸಂತೃಪ್ತಿ. ಹತ್ತೂವರೆ ವರ್ಷಗಳಲ್ಲಿ ಏನೇನೋ ಆಯಿತು. ಆಗಿದ್ದೆಲ್ಲಾ ಒಳ್ಳೆಯದಕ್ಕೇ ಆಯಿತು!
ತೀವ್ರವಾಗಿ ಮತ್ತು ಪ್ರಾಮಾಣಿಕವಾಗಿ ಕನಸು ಕಂಡರೆ ಸಾಕು. ಸ್ವಲ್ಪ ಮನಸ್ಸಿಟ್ಟು ಚೂರು ಪಾರು ಇಷ್ಟಪಟ್ಟು ಕೆಲಸ ಮಾಡಿದರೆ ಸಾಕು. ಯಾವ ನಕ್ಷತ್ರವಾದರೂ ಸಿಕ್ಕುತ್ತದೆ! ಮಿಲ್ಲರ್ಸ್ ರೋಡಿನ ಐದನೇ ಫ್ಲೋರಿನ ಆಫೀಸಿನಲ್ಲಿ ಕುಡಿದ ಚಹಾ ಕಪ್ಪುಗಳ ಲೆಕ್ಕ ಗೊತ್ತಿಲ್ಲ. ಅಷ್ಟೆಲ್ಲಾ ಚಹಾ ಕುಡಿದರೂ ಇನ್ನಷ್ಟು ಕುಡಿಯುವ ಆಸೆ ಇದ್ದೇ ಇದೆ. ಸಿಕ್ಕಿದ ಒಬ್ಬಬ್ಬ ವ್ಯಕ್ತಿಯನ್ನೂ ಇನ್ನೊಂದು ಸಲ ಮಾತಾಡಿಸುವ ಮನಸ್ಸಾಗುತ್ತದೆ. ಹೇಳಿದ ಕತೆಗಳನ್ನು ಇನ್ನೊಂದು ಸಲ ಚೂರು ಸರಿಮಾಡಿಕೊಂಡು ಹೇಳಿಬಿಡೋಣ ಎಂಬ ಕನಸು ಬೀಳುತ್ತದೆ.
ಇದನ್ನೂ ಓದಿ: Summer Nail Colours Trend: ಸಮ್ಮರ್ ಸೀಸನ್‌ನಲ್ಲಿ ಬದಲಾಯ್ತು ನೇಲ್ ಕಲರ್ಸ್ ಟ್ರೆಂಡ್
ಇವತ್ತು ಬೆಳಗ್ಗೆಯಿಂದ ಟಿವಿ ಕೆಲಸ ಇಲ್ಲ ಎಂದು ಯೋಚಿಸಿ ಮನಸ್ಸು ಒದ್ದೆಯಾಗಿದೆ. ಒಳ್ಳೇದು ಮಾತ್ರ ಆಗಲಿ ಅಂತ ಹಾರೈಸಬೇಡಿ. ಒಳ್ಳೆಯದು, ಕೆಟ್ಟದ್ದು, ಖುಷಿ, ದುಃಖ, ಗೆಲುವು, ಸೋಲು, ಅಸೂಯೆ, ಸಂಕಟ, ಪ್ರೀತಿ, ಆಘಾತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಲಿಕೆ ಹೀಗೆ ಎಲ್ಲವೂ ಆಗಲಿ ಎಂದು ಹೇಳಿ. ಜೀವನವೇ ಆಗಲಿ ಎಂದು ಹಾರೈಸಿ. ಥ್ಯಾಂಕ್ಯೂ ವಯಾಕಾಮ್ 18. ಥ್ಯಾಂಕ್ಯೂ ಕಲರ್ಸ್ ಕನ್ನಡ. ಹೋಗಿ ಬರುವೆ. ನಮಸ್ಕಾರ!ʼʼಎಂದು ಬರೆದುಕೊಂಡಿದ್ದಾರೆ.