ಮಂಡ್ಯ: ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ (Trinayani Serial) ಜನಪ್ರಿಯರಾಗಿದ್ದ ಕನ್ನಡತಿ ಪವಿತ್ರ ಜಯರಾಮ್ (Pavithra Jayaram) ಅವರು ಅಪಘಾತದಲ್ಲಿ ಮೃತಪಟ್ಟ ಬೆನ್ನಲ್ಲೇ ನಟ ಚಂದ್ರಕಾಂತ್ (Chandrakanth) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಬಗ್ಗೆ ಮಂಡ್ಯದ ಉಮ್ಮಡಹಳ್ಳಿಯಲ್ಲಿ ಪವಿತ್ರಾ ಅವರ ಮಗಳು ಪ್ರತೀಕ್ಷಾ ಅವರು ʻʻಅಮ್ಮ ಹಾಗೂ ಚಂದ್ರಕಾಂತ್ ಉತ್ತಮ ಸ್ನೇಹಿತರಾಗಿದ್ದರು. ಬೇರೆ ಯಾವುದೇ ರೀತಿಯ ಸಂಬಂಧ ಇರಲಿಲ್ಲʼʼ ಎಂದು ವಿಸ್ತಾರ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ.
ಪವಿತ್ರಾ ಜಯರಾಮ್ ಅವರ ನಿಧನದ ಬಳಿಕ ಖಿನ್ನತೆಗೊಳಗಾಗಿ ಚಂದ್ರಕಾಂತ್ ಅವರು ನೇಣಿಗೆ ಶರಣಾಗಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಪವಿತ್ರಾ ಅವರ ಮಗಳು ಪ್ರತೀಕ್ಷಾ ಮಾತನಾಡಿ ʻ ಚಂದ್ರಕಾಂತ್ ಅವರ ಸಾವಿನ ಸುದ್ದಿ ನಮಗೆ ಟಿವಿಯಲ್ಲಿ ನೋಡಿ ಗೊತ್ತಾಯ್ತು. ಚಂದ್ರಕಾಂತ್ ಮತ್ತು ನಮ್ಮಮ್ಮ ಉತ್ತಮ ಸ್ನೇಹಿತರಾಗಿದ್ದರು. ಅವರ ಸಂಬಂಧದ ಬಗ್ಗೆ ಟಿವಿಯಲ್ಲಿ ಏನೇನೋ ಮಾತಾಡ್ತಿದ್ದಾರೆ. ಅಮ್ಮನ ಅಂತ್ಯಕ್ರಿಯೆ ಆಗೋವವರೆಗೂ ಚಂದ್ರಕಾಂತ್ ಇದ್ದು ಹೋಗಿದ್ದರು. ಚಂದ್ರಕಾಂತ್ ಅವರು ಹೈದರಾಬಾದ್‌ಗೆ ಹೋದ ನಂತರವೂ ನನಗೆ ಪೋನ್ ಮಾಡಿ ಮಾತನಾಡುತ್ತಿದ್ದರು. ಆರೋಗ್ಯ ಚೆನ್ನಾಗಿ ನೋಡ್ಕೊ, ಪರೀಕ್ಷೆ ಇದೆ ತಯಾರಿ ಮಾಡ್ಕೊ ಎಂದೆಲ್ಲಾ ಧೈರ್ಯ ಹೇಳ್ತಿದ್ದರು. ಆದರೆ ಈಗ ಹೀಗಾಗಿದೆ. ಅಮ್ಮ ಮತ್ತು ಚಂದ್ರಕಾಂತ್ ಉತ್ತಮ ಸ್ನೇಹಿತರಾಗಿದ್ದರು. ಅಮ್ಮ ಹೈದರಾಬಾದ್‌ಗೆ ತೆರಳಿ ಆರು ವರ್ಷ ಆಯ್ತು. ಆಗನಿಂದಲೂ ಚಂದ್ರಕಾಂತ್ ಅಮ್ಮನಿಗೆ ಪರಿಚಯ. ಒಂದೇ ಸಿರೀಯಲ್ ನಲ್ಲಿ ನಟನೆ ಮಾಡುವ ಸಹ ನಟರ ಜತೆಗಿನ ಸಂಬಂಧ ಹೇಗಿರೋತ್ತೊ ಅಮ್ಮ ಮತ್ತು ಚಂದ್ರಕಾಂತ್ ಅವರ ಸಂಬಂಧವೂ ಹಾಗೆ ಇತ್ತುʼʼಎಂದರು.
ಮಾತು ಮುಂದುವರಿಸಿ ʻʻನನ್ನ ಅಮ್ಮ ಮತ್ತು ಅಪ್ಪ ಅವರ ಸಂಬಂಧ ಕೂಡ ಚೆನ್ನಾಗಿಯೇ ಇತ್ತು. ನಾನು , ಅಣ್ಣ ಇಬ್ಬರೂ ಕಳೆದ ಎರಡು ವರ್ಷಗಳಿಂದ ಅಮ್ಮನ ಜತೆಗೆ ಹೈದರಾಬಾದ್‌ನಲ್ಲಿ ನೆಲೆಸಿದ್ದೆವು. ಈಗ ನಾವು ನಮ್ಮ ಅಮ್ಮನನ್ನು ಕಳೆದುಕೊಂಡಿದ್ದೇವೆ. ಅವರು ನಮ್ಮ ಕುಟುಂಬದ ದೊಡ್ಡ ಪಿಲ್ಲರ್. ನಾವಿನ್ನ ಚಿಕ್ಕವರು. ನಮಗೂ ಭವಿಷ್ಯವಿದೆ. ಯಾರೂ ಅಮ್ಮನ ಸಂಬಂಧ ಬಗೆಗೆ ತಪ್ಪಾಗಿ ಮಾತಾಡಬೇಡಿ. ನಮ್ಮಷ್ಟಕ್ಕೆ ನಮ್ಮನ್ನು ಬದುಕಲು ಬಿಡಿʼʼಎಂದಿದ್ದಾರೆ ಪ್ರತೀಕ್ಷಾ.
ಇದನ್ನೂ ಓದಿ: Actor Darshan: ಪವಿತ್ರಾ ಗೌಡ ಕೈ ಮೇಲೆ `777′ ಟ್ಯಾಟೂ ಹಾಕಿದ ನೀತು: ದರ್ಶನ್‌ಗೆ ಏನಾದ್ರು ಲಿಂಕ್ ಇದ್ಯಾ?
ದುರಂತ ಸಾವು
ಆಂಧ್ರಪ್ರದೇಶದ ಕರ್ನೂಲು ಬಳಿ ಮೇ 12ರಂದು ಬೆಳಗ್ಗೆ ಅಪಘಾತ ಸಂಭವಿಸಿತ್ತು. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು. ಚಂದ್ರಕಾಂತ್ ಕೂಡ ನಟರಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿಶ್ಚಯಿಸಿದ್ದರು ಎಂದು ವರದಿಯಾಗಿತ್ತು. ಆದರೆ, ಒಂದೇ ವಾರದಲ್ಲಿ ಇಬ್ಬರೂ ದುರಂತ ಸಾವು ಕಂಡಿದ್ದಾರೆ.