ಬೆಂಗಳೂರು: ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ (Trinayani serial) ಜನಪ್ರಿಯರಾಗಿರುವ ಕನ್ನಡತಿ ಪವಿತ್ರ ಜಯರಾಂ (Pavithra Jayaram) ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಕರ್ನೂಲು ಸಮೀಪದಲ್ಲಿ ಇಂದು (ಮೇ.12) ಮುಂಜಾನೆ ಅಪಘಾತವಾಗಿದೆ ಎಂದು ವರದಿಯಾಗಿದೆ. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಕನ್ನಡದ ʻರೋಬೊ ಫ್ಯಾಮಿಲಿʼ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ರೋಬೊ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದರು.
ನಟಿ ಕರ್ನಾಟಕದಲ್ಲಿ ಹುಟ್ಟಿದ್ದರೂ ಕೂಡ ಹೆಚ್ಚು ಫೇಮಸ್ ಆದದ್ದು ತೆಲುಗಿನ ‘ತ್ರಿನಯನಿ’ ಧಾರಾವಾಹಿಯಿಂದ . ಈ ಬಗ್ಗೆ ನಟಿ ಈ ಹಿಂದೆ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ʻʻನಾನು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ. ಆದರೆ ಕನ್ನಡಕ್ಕಿಂತ ನನಗೆ ಹೆಚ್ಚು ಹೆಸರು ಕೊಟ್ಟಿದ್ದು ತೆಲುಗು. ‘ತ್ರಿನಯನಿ’ ಧಾರಾವಾಹಿ ಮುಂಚೆ ಅನೇಕ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದರು ಅಷ್ಟಾಗಿ ಫಾಲೋವರ್ಸ್ ಇರಲಿಲ್ಲ. ಆದರೆ ‘ತ್ರಿನಯನಿ’ ಧಾರಾವಾಹಿ ಕನ್ನಡದಲ್ಲಿಯೂ ಡಬ್ ಆಗುತ್ತಿತ್ತು. ಹೀಗಾಗಿ ಕನ್ನಡದಲ್ಲಿಯೂ ತುಂಬಾ ಫ್ಯಾನ್ ಪೇಜ್‌ಗಳು ಶುರುವಾದವುʼʼಎಂದಿದ್ದರು.
ಇದನ್ನೂ ಓದಿ: IPL 2024: ಬೆಂಗಳೂರಲ್ಲಿಂದು ಆರ್‌ಸಿಬಿ, ಡೆಲ್ಲಿ ನಿರ್ಣಾಯಕ ಪಂದ್ಯ; ಮಳೆ ಅಡ್ಡಿ ಆಗತ್ತಾ ? ಇಲ್ಲಿದೆ ರಿಪೋರ್ಟ್
“ಅಷ್ಟೇ ಅಲ್ಲ 16ನೇ ವಯಸ್ಸಿಗೆ ಮದುವೆ ಮಾಡಿದ್ದರು. ಮ್ಯಾರೇಜ್ ಲೈಫ್ ಕೂಡ ನನ್ನದು ಅಷ್ಟಾಗಿ ಸರಿಯಿರಲಿಲ್ಲ. ಓದು ಕೂಡ ಅರ್ಧಕ್ಕೆ ಮುಗಿದಿತ್ತು. ಚಿಕ್ಕ ಚಿಕ್ಕ ಮಕ್ಕಳು ಇರುವಾಗಲೇ ನನ್ನ ಮಗಳು ಮತ್ತು ಮಗನನ್ನು ಕರೆದುಕೊಂಡು ಬೆಂಗಳೂರಿಗೆ ಅವಕಾಶ ಅರಸಿಕೊಂಡು ಬಂದೆ. ಮಕ್ಕಳನ್ನು ಬೆಳೆಸಲು ಹೌಸ್ ಕೀಪಿಂಗ್ ಕೆಲಸ ಕೂಡ ಮಾಡಿದ್ದೆ. ನರ್ಸಿಂಗ್ ಕಾಲೇಜಿನ ಲೈಬ್ರರಿಯಲ್ಲಿ ಕೂಡ ಕೆಲಸ ಮಾಡಿದ್ದೆʼʼಎಂದು ಹೇಳಿಕೊಂಡಿದ್ದರು.