ಬೆಂಗಳೂರು: ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ (Trinayani Serial) ಜನಪ್ರಿಯರಾಗಿದ್ದ ಕನ್ನಡತಿ ಪವಿತ್ರ ಜಯರಾಮ್ (Pavithra Jayaram) ಅವರು ಅಪಘಾತದಲ್ಲಿ ಮೃತಪಟ್ಟ ಬೆನ್ನಲ್ಲೇ ನಟ ಚಂದ್ರಕಾಂತ್ (Chandrakanth) ಆತ್ಮಹತ್ಯೆ ಮಾಡಿಕೊಂಡರು. ಇದಾದ ಬಳಿಕ ಈ ಘಟನೆಯಿಂದ ಖಿನ್ನತೆಗೊಳಗಾಗಿ ಚಂದ್ರಕಾಂತ್ ಅವರು ನೇಣಿಗೆ ಶರಣಾಗಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಪವಿತ್ರಾ ಮಗಳು ಅಮ್ಮ ಹಾಗೂ ಚಂದ್ರಕಾಂತ್ ಉತ್ತಮ ಸ್ನೇಹಿತರಾಗಿದ್ದರು. ಬೇರೆ ಯಾವುದೇ ರೀತಿಯ ಸಂಬಂಧ ಇರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಚಂದ್ರಕಾಂತ್ ಅವರ ಪತ್ನಿ ಶಿಲ್ಪಾ ಪ್ರೇಮಾ ಇಬ್ಬರ ಮಧ್ಯೆ ಸಂಬಂಧ ಇತ್ತು ಎಂದು ಹೇಳಿಕೆ ನೀಡಿದ್ದಾರೆ.
ಶಿಲ್ಪಾ ಪ್ರೇಮಾ ಈ ಬಗ್ಗೆ ಮಾತನಾಡಿ ʻʻಇಬ್ಬರ ಮಧ್ಯೆ ಸಂಬಂಧ ಇರುವುದು 5 ವರ್ಷ ಮುಂಚೆಯೇ ತಿಳಿದಿತ್ತು. ನನಗೆ ಗೊತ್ತಾದ ಮೇಲೆ ರಾತ್ರಿಯೆಲ್ಲ ಕುಡಿದು ನನಗೆ ಚಂದ್ರಕಾಂತ್ ಹೊಡೆಯುತ್ತಿದ್ದರು. ಒಮ್ಮೆ ಪವಿತ್ರಾ ಕೂಡ ನನಗೆ ನೇರವಾಗಿ ಕೆರೆ ಮಾಡಿ ಅವನು ನನ್ನ ಗಂಡ, ಏನು ಮಾಡಿಕೊಳ್ಳುತ್ತೀಯಾ ಮಾಡಿಕೋ ಎಂದು ಹೇಳಿದ್ದಳು. ಈ ವಿಚಾರ ಪವಿತ್ರಾ ಮಕ್ಕಳಿಗೂ ಗೊತ್ತಿತ್ತು. ಅವರ ಲೈಫ್ ಅವರದ್ದು ಅವರ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಲ್ಲ ಎಂದು ಪವಿತ್ರಾ ಮಗ ಹೇಳಿದ್ದ. ಮನೆಗೆ ಬಂದರೂ ಪವಿತ್ರಾ ಫೋಟೊವನ್ನು ಚಂದ್ರಕಾಂತ್ ನೋಡುತ್ತಿದ್ದರು. ಇವರೂ ನನಗೆ ಸಹಾಯ ಮಾಡದೇ ಇದ್ದರೂ ನನ್ನ ಮಕ್ಕಳನ್ನು ನಾನೇ ಸಲುಹಿದೆʼʼ ಎಂದರು.
ಮಾಧ್ಯಮವೊಂದಕ್ಕೆ ಚಂದ್ರಕಾಂತ್ ತಾಯಿ ಕೂಡ ಮಾತನಾಡಿ ʻʻಪವಿತ್ರಾ ನನ್ನ ಮಗನನ್ನು ಮನೆಗೆ ಬರದೇ ಇರುವ ರೀತಿ ಮಾಡಿದ್ದಾಳೆ. ನನ್ನ ಎಲ್ಲಾ ಸರ್ವಸ್ವ ಪವಿತ್ರಾ, ಅವಳೇ ನನ್ನ ಹೆಂಡತಿ ಎನ್ನುತ್ತಿದ್ದ. ಮನೆಗೆ ಕುಡಿದು ಬಂದು ಹೆಂಡತಿಯನ್ನು ಹೊಡೆಯುತ್ತಿದ್ದ. ಅವಳ ಸಹವಾಸ ಮಾಡಬೇಡ ಎಂದು ಹೇಳಿದರೂ ಕೇಳುತ್ತಿರಲಿಲ್ಲʼʼ ಎಂದರು.
ಇದನ್ನೂ ಓದಿ: Pavithra Jayaram: ಚಂದ್ರಕಾಂತ್ ಹಾಗೂ ನನ್ನ ಅಮ್ಮ ಜಸ್ಟ್ ಫ್ರೆಂಡ್ಸ್, ಪವಿತ್ರಾ ಮಗಳ ಸ್ಪಷ್ಟನೆ!
ಪವಿತ್ರಾ ಮಗಳ ಸ್ಪಷ್ಟನೆ ಏನು?
ಮಗಳು ಪ್ರತೀಕ್ಷಾ ಮಾತನಾಡಿ ʻ ಚಂದ್ರಕಾಂತ್ ಅವರ ಸಾವಿನ ಸುದ್ದಿ ನಮಗೆ ಟಿವಿಯಲ್ಲಿ ನೋಡಿ ಗೊತ್ತಾಯ್ತು. ಚಂದ್ರಕಾಂತ್ ಮತ್ತು ನಮ್ಮಮ್ಮ ಉತ್ತಮ ಸ್ನೇಹಿತರಾಗಿದ್ದರು. ಅವರ ಸಂಬಂಧದ ಬಗ್ಗೆ ಟಿವಿಯಲ್ಲಿ ಏನೇನೋ ಮಾತಾಡ್ತಿದ್ದಾರೆ. ಅಮ್ಮನ ಅಂತ್ಯಕ್ರಿಯೆ ಆಗೋವವರೆಗೂ ಚಂದ್ರಕಾಂತ್ ಇದ್ದು ಹೋಗಿದ್ದರು. ಚಂದ್ರಕಾಂತ್ ಅವರು ಹೈದರಾಬಾದ್‌ಗೆ ಹೋದ ನಂತರವೂ ನನಗೆ ಪೋನ್ ಮಾಡಿ ಮಾತನಾಡುತ್ತಿದ್ದರು. ಆರೋಗ್ಯ ಚೆನ್ನಾಗಿ ನೋಡ್ಕೊ, ಪರೀಕ್ಷೆ ಇದೆ ತಯಾರಿ ಮಾಡ್ಕೊ ಎಂದೆಲ್ಲಾ ಧೈರ್ಯ ಹೇಳ್ತಿದ್ದರು. ಆದರೆ ಈಗ ಹೀಗಾಗಿದೆ. ಅಮ್ಮ ಮತ್ತು ಚಂದ್ರಕಾಂತ್ ಉತ್ತಮ ಸ್ನೇಹಿತರಾಗಿದ್ದರು. ಅಮ್ಮ ಹೈದರಾಬಾದ್‌ಗೆ ತೆರಳಿ ಆರು ವರ್ಷ ಆಯ್ತು. ಆಗನಿಂದಲೂ ಚಂದ್ರಕಾಂತ್ ಅಮ್ಮನಿಗೆ ಪರಿಚಯ. ಒಂದೇ ಸಿರೀಯಲ್ ನಲ್ಲಿ ನಟನೆ ಮಾಡುವ ಸಹ ನಟರ ಜತೆಗಿನ ಸಂಬಂಧ ಹೇಗಿರೋತ್ತೊ ಅಮ್ಮ ಮತ್ತು ಚಂದ್ರಕಾಂತ್ ಅವರ ಸಂಬಂಧವೂ ಹಾಗೆ ಇತ್ತುʼʼ ಎಂದರು.
ಮಾತು ಮುಂದುವರಿಸಿ ʻʻನನ್ನ ಅಮ್ಮ ಮತ್ತು ಅಪ್ಪ ಅವರ ಸಂಬಂಧ ಕೂಡ ಚೆನ್ನಾಗಿಯೇ ಇತ್ತು. ನಾನು, ಅಣ್ಣ ಇಬ್ಬರೂ ಕಳೆದ ಎರಡು ವರ್ಷಗಳಿಂದ ಅಮ್ಮನ ಜತೆಗೆ ಹೈದರಾಬಾದ್‌ನಲ್ಲಿ ನೆಲೆಸಿದ್ದೆವು. ಈಗ ನಾವು ನಮ್ಮ ಅಮ್ಮನನ್ನು ಕಳೆದುಕೊಂಡಿದ್ದೇವೆ. ಅವರು ನಮ್ಮ ಕುಟುಂಬದ ದೊಡ್ಡ ಪಿಲ್ಲರ್. ನಾವಿನ್ನ ಚಿಕ್ಕವರು. ನಮಗೂ ಭವಿಷ್ಯವಿದೆ. ಯಾರೂ ಅಮ್ಮನ ಸಂಬಂಧ ಬಗೆಗೆ ತಪ್ಪಾಗಿ ಮಾತಾಡಬೇಡಿ. ನಮ್ಮಷ್ಟಕ್ಕೆ ನಮ್ಮನ್ನು ಬದುಕಲು ಬಿಡಿʼʼ ಎಂದಿದ್ದಾರೆ ಪ್ರತೀಕ್ಷಾ.