ಬೆಂಗಳೂರು : ಕಿರುತೆರೆ ನಿರ್ಮಾಪಕರ ಸಂಘವು ಯಾವುದೇ ಕಾರಣಕ್ಕೂ ಅನಿರುದ್ಧ ಅವರ ಮಾತನ್ನು ಒಪ್ಪುತ್ತಿಲ್ಲ. ಎರಡು ವರ್ಷಗಳ ಕಾಲ ಯಾವುದೇ ನಿರ್ಮಾಪಕರು ಅನಿರುದ್ಧ ಅವರಿಗೆ ಅವಕಾಶ ಕೊಡುವುದು ಬೇಡ ಎಂದು ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯುತ್ತಿಲ್ಲ. ಹಾಗಾಗಿ ಅನಿರುದ್ಧ ವಾಣಿಜ್ಯ ಮಂಡಳಿಯ ಕದ ತಟ್ಟಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ ಅನಿರುದ್ಧ (Anirudh Jatkar ) ಆಗಮಿಸಿದ್ದು ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ ಹರೀಶ್ ನೇತೃತ್ವದಲ್ಲಿ ಡಿಸೆಂಬರ್ 9 ಶುಕ್ರವಾರ ಸಭೆ ನಡೆದಿದೆ. ಫಿಲ್ಮ್ ಚೇಂಬರ್ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಭಾಗಿಯಾಗಿದ್ದು, ಕಿರುತೆರೆ ನಿರ್ಮಾಪಕರ ಸಂಘದ ಸದಸ್ಯರು ಗೈರಾಗಿದ್ದಾರೆ.
ಡಿಸೆಂಬರ್ 10 ಶನಿವಾರ ಬೆಳಗ್ಗೆ 10:30ಕ್ಕೆ ಕಿರುತೆರೆ ನಿರ್ಮಾಪಕರು ವಾಣಿಜ್ಯ ಮಂಡಳಿಗೆ ಆಗಮಿಸಲಿದ್ದಾರೆ. ಭಾ.ಮ ಹರೀಶ್ ಮಾಧ್ಯಮದವರೊಂದಿಗೆ ಮಾತನಾಡಿ ʻʻಯಾರಿಗೂ ಕಲಾವಿದರಿಗೆ ಪಾತ್ರದ ಅವಕಾಶ ಕೊಡಬೇಡಿ ಎನ್ನುವ ಅಧಿಕಾರ ಇಲ್ಲ. ಅವರ ಧಾರಾವಾಹಿಗೆ ಇಷ್ಟವಿಲ್ಲ ಎಂದರೆ ತಗೆಯಬಹುದು. ಆದರೆ ಮತ್ತೊಂದು ಸೀರಿಯಲ್‌ಗೆ ಅವರನ್ನು ಅಡ್ಡಿ ಮಾಡುವಂತಿಲ್ಲ. ಬ್ಯಾನ್ ಎನ್ನುವ ಪದ್ಧತಿ ಇಲ್ಲ. ಕಲಾವಿದರನ್ನು ಬ್ಯಾನ್ ಮಾಡುವ ಅಧಿಕಾರ ಯಾರಿಗೂ ಕೊಟ್ಟಿಲ್ಲʼʼಎಂದು ಹೇಳಿಕೆ ನೀಡಿದ್ದಾರೆ.
ನಟ ಸುಂದರರಾಜ್ ಈ ಬಗ್ಗೆ ಮಾತನಾಡಿ ʻʻನಾವೆಲ್ಲ ಒಂದೇ ತಾಯಿಯ ಮಕ್ಕಳು. ಸ್ಮಾಲ್ ಸ್ಕ್ರೀನ್ ಅಥವಾ ಬಿಗ್ ಸ್ಕ್ರೀನ್ ಎಲ್ಲರೂ ಒಂದೇ. ದೇಶ ವಿರೋಧವಾಗಿ ಮಾಡುವ ಕೆಲಸಕ್ಕೆ ಬ್ಯಾನ್ ಎನ್ನುತ್ತಾರೆʼʼಎಂದರು.
ನಿರ್ಮಾಪಕರ ಸಂಘ ಅಂದರೆ ಸಂಧಾನ ಮಾಡುವ ಕೆಲಸ ಆಗಬೇಕು.
ನಟ ಅನಿರುದ್ಧ ಮಾತನಾಡಿ ʻʻಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಲೇಖನಗಳನ್ನು ಬರೆಯುತ್ತೇನೆ. ʻಜೊತೆ ಜೊತೆಯಲಿ ಧಾರಾವಾಹಿʼ ನನ್ನ ಕುಟುಂಬ. ಮೂರು ವರ್ಷ 2 ತಿಂಗಳು ಈ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದೇನೆ. ಆರೂರು ಜಗದೀಶ್ ಅವರಿಗೆ ʻಜೊತೆ ಜೊತೆಯಲಿʼ ವಿವಾದ ಕುರಿತು ವಾಯ್ಸ್ ಮೆಸೇಜ್ ಕಳುಹಿಸಿದ್ದೆ. ಅವರು ಒಂದು ಮಾತನ್ನು ಪದೇಪದೆ ಹೇಳುತ್ತಾರೆ. ನನ್ನ ಮೇಲೆ ಒತ್ತಡ ಇದೆ ಎನ್ನುತ್ತಿದ್ದರು. ಏನು ಒತ್ತಡ, ಯಾವುದು ಏನು ಈ ಬಗ್ಗೆ ನನಗೆ ಹೇಳಿಲ್ಲ. ಇವತ್ತಿನವರೆಗೂ ನಾನು ಅವರು ಮಾಡಿರುವ ಸುದ್ದಿಗೋಷ್ಠಿ ನೋಡಿಲ್ಲ. ನಮ್ಮಲ್ಲಿ ಒಂದು ದಿನ ಸಹ ಮನಸ್ತಾಪ, ಭಿನ್ನಾಭಿಪ್ರಾಯ ಬಂದಿಲ್ಲ. ನಿರ್ಮಾಪಕರ ಸಂಘ ಅಂದರೆ ಸಂಧಾನ ಮಾಡುವ ಕೆಲಸ ಆಗಬೇಕು. ಅದನ್ನು ಬಿಟ್ಟು ಆರೋಪ ಹೊರಿಸಿ ಧಾರಾವಾಹಿಯಿಂದ ಹೊರಹಾಕುವುದಲ್ಲ. ನನ್ನನ್ನು ಆಶಿಸ್ತು ಎಂದಿದ್ದಾರೆʼʼಎಂದರು.
ಇದನ್ನೂ ಓದಿ | Aniruddha Jatkar : ಯಾಕೆ ಅನಿರುದ್ಧ ಟಾರ್ಗೆಟ್ ಆಗ್ತಿದಾರೆ?
ಬ್ಯಾನ್ ಮಾಡುವಂತಹ ಕೆಲಸ ಏನು ಮಾಡಿದ್ದೇನು ನಾನು?
ಮಾತು ಮುಂದುವರಿಸಿದ ನಟ ಅನಿರುದ್ಧ ʻʻರಂಗಭೂಮಿ ಕಲಾವಿದ ನಾನು. ಶೂಟಿಂಗ್ ಶುರುವಾಗುವ ಮುಂಚೆಯೇ ನನ್ನ ಕಾರ್ ಕಾಂಪೌಂಡ್ ಒಳಗಡೆ ಇರುತ್ತಿತ್ತು. ಇವತ್ತಿನ ಕಾಲದಲ್ಲಿ ಕಲಾವಿದರಿಗೆ ಹೊರಗೆ ಬಟ್ಟೆ ಬದಲಾಯಿಸುವುದು ಕಷ್ಟ. ಅದರಲ್ಲೂ ಹೆಣ್ಣು ಮಕ್ಕಳಿಗೆ ಬಟ್ಟೆ ಬದಲಾಯಿಸುವ ಸ್ಥಳ ಇರಲಿಲ್ಲ. ಹಾಗಾಗಿ ಒಂದು ಸಲ ಮಾತ್ರ ಕ್ಯಾರವಾನ್ ಕೇಳಿದ್ದೆ. ಆಗ ಹೆಣ್ಣು ಮಕ್ಕಳು ಖುಷಿಪಟ್ಟಿದ್ದರು. ತುಂಬಾ ನಿರೀಕ್ಷೆಯಿಂದ ಇವತ್ತು ಮಾತನಾಡಲು ಬಂದಿದ್ದೆ. ಆದರೆ ನಿರ್ಮಾಪಕರು ಒಬ್ಬರು ಇಲ್ಲ. ಸೀರಿಯಲ್‌ನಲ್ಲಿ ಅವಕಾಶ ಕೊಡಬೇಡಿ ಎನ್ನುವುದು ಯಾವ ರೀತಿ ಮನೋಭಾವ ಇದು? ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಶಿವಕುಮಾರ್ ಅವರೊಟ್ಟಿಗೂ ಮಾತಾಡಿದ್ದೆ. ಬ್ಯಾನ್ ಮಾಡುವಂತಹ ಕೆಲಸ ಏನು ಮಾಡಿದ್ದೇನು ನಾನು? ʻʻವಸುದೈವ ಕುಟುಂಬಕಂʼʼ ಈ ಸಾಲನ್ನು ನಾನು ನಂಬುತ್ತೇನೆ. ಎಸ್. ನಾರಾಯಣ್ ಅವರು ಹೇಳಿದ್ದಾರೆ. ಮುಂಬರುವ ʻಸೂರ್ಯವಂಶʼ ಧಾರಾವಾಹಿಗೆ ನಾನೇ ನಾಯಕ ಎಂದು. ಅವರ ಕಡೆಯಿಂದ ಯಾವುದೇ ಡೌಟ್ ಇಲ್ಲʼʼಎಂದು ಹೇಳಿಕೆ ನೀಡಿದ್ದಾರೆ.
ವಾಣಿಜ್ಯ ಮಂಡಳಿ ತೀರ್ಮಾನಕ್ಕೆ ಅನಿರುದ್ಧ ಬದ್ಧನಾಗಿದ್ದಾರೆ. ಸಂಧಾನ ಮಾಡುವ ಕೆಲಸ ನಾಳೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Anirudh Jatkar | ನಟ ಅನಿರುದ್ಧ ಧಾರಾವಾಹಿ ವಿವಾದ: ʻಈ ಹಿಂದೆ ನಟ ಹೇಗೆ ಇದ್ದಿದ್ದರು ನಮಗೆ ಗೊತ್ತಿಲ್ಲʼ ಎಂದ ಎಸ್ ನಾರಾಯಣ್!