ಬೆಂಗಳೂರು: ಪ್ರೇಕ್ಷಕರ ಮೆಚ್ಚುಗೆ ಧಾರಾವಾಹಿ ಕನ್ನಡತಿ ಫೆ.3ರಂದು ಅಂತ್ಯ ಕಾಣಲಿದೆ. ಕನ್ನಡತಿ ಧಾರಾವಾಹಿಯಲ್ಲಿ ರಂಜನಿ ರಾಘವನ್ (Ranjani Raghavan) ಭುವಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2020ರಲ್ಲಿ ಶುರುವಾಗಿದ್ದ ಕನ್ನಡತಿ, ಕೆಲವು ಸಂಚಿಕೆಗಳು ಉತ್ತರಕನ್ನಡದ ಸಿದ್ದಾಪುರ, ಸಾಗರದಲ್ಲಿ ಶೂಟಿಂಗ್ ಆಗಿತ್ತು. ಸಾನಿಯಾ ಹಾಗೂ ವರೂಧಿನಿ ಬದಲಾಗುವ ಮೂಲಕ ‘ಕನ್ನಡತಿ’ ಧಾರಾವಾಹಿಗೆ ಹ್ಯಾಪಿ ಎಂಡಿಂಗ್ ನೀಡಲಾಗಿದೆ. ಧಾರಾವಾಹಿ ಅಂತ್ಯದ ಬಗ್ಗೆ ನಟಿ ರಂಜಿನಿ ಇನ್‌ಸ್ಟಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
”ನಮ್ಮೆಲ್ಲರ ಹೆಮ್ಮಯ ಧಾರಾವಾಹಿ ‘ಕನ್ನಡತಿ’ಯ ಕಡೆಯ ಸಂಚಿಕೆ ಇಂದು ಪ್ರಸಾರವಾಗುತ್ತಿದೆ. “ಇನ್ನಷ್ಟು ಸಂಚಿಕೆ ಬರಬಹುದಿತ್ತು, ನಿಮ್ಮನ್ನು ಮಿಸ್ ಮಾಡಿಕೊಳ್ತೀವಿ” ಅಂತ ಹೇಳುವಾಗಲೇ ಗೌರವದಿಂದ ಮುಕ್ತಾಯ ಕಾಣುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ. ಮುಂದೆ ಅರ್ಥಪೂರ್ಣವಾದ ಪಾತ್ರಗಳ ಮೂಲಕ, ಒಳ್ಳೆಯ ಬರವಣಿಗೆ ಹೊಂದಿರುವ ಪ್ರಾಜೆಕ್ಟ್ ಗಳ ಮೂಲಕ ನಿಮ್ಮ ಮುಂದೆ ಬರುವ ನಿರೀಕ್ಷೆಯಲ್ಲಿದ್ದೇನೆ. ನಿಮ್ಮ ನಿರಂತರ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು.” ರಂಜನಿ ರಾಘವನ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Sagar Biligowda: ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಸತ್ಯʼ ಧಾರಾವಾಹಿಯ ಅಮುಲ್ ಬೇಬಿ ಕಾರ್ತಿಕ್
‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ, ಹರ್ಷ, ಭುವಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಸಾನಿಯಾಳನ್ನು ಜೈಲಿಗೆ ಕಳುಹಿಸಬೇಕು ಎಂಬುದು ವೀಕ್ಷಕರ ಇಚ್ಛೆಯಾಗಿತ್ತು. ಆದರೆ, ಕಡೆ ಕ್ಷಣದಲ್ಲಿ ಸಾನಿಯಾ ಒಳ್ಳೆಯವಳಾಗಿ ಬದಲಾಗಿದ್ದಾಳೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಅಮ್ಮಮ್ಮ ರತ್ನಮಾಲಾ ಆಗಿ ಚಿತ್ಕಲಾ ಬಿರಾದಾರ, ಭುವನೇಶ್ವರಿ ಆಗಿ ರಂಜನಿ ರಾಘವನ್, ಹರ್ಷ ಆಗಿ ಕಿರಣ್ ರಾಜ್, ವರೂಧಿನಿ ಆಗಿ ಸಾರಾ ಅಣ್ಣಯ್ಯ, ಸಾನಿಯಾ ಆಗಿ ಆರೋಹಿ ನೈನಾ ಮುಂತಾದವರು ಅಭಿನಯಿಸಿದ್ದರು.
ಇದನ್ನೂ ಓದಿ: Miss Queen of India | ಕನ್ನಡತಿ ಸಮೃದ್ಧಿ ವಿ ಶೆಟ್ಟಿ ಮುಡಿಗೇರಿತು ‘ಮಿಸ್ ಕ್ವೀನ್ ಆಫ್ ಇಂಡಿಯಾ’ ಕಿರೀಟ
ಸದ್ಯಕ್ಕೆ ಈ ಧಾರಾವಾಹಿಯ ಸಮಯದಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿ ಪ್ರಸಾರವಾಗಲಿದೆ ಎನ್ನಲಾಗಿದೆ. ಆದರೆ ವಾಹಿನಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಕನ್ನಡತಿ ಧಾರಾವಾಹಿಯ ʻಸರಿಗನ್ನಡಂ ಗೆಲ್ಗೆʼಎಂಬ ವಿಶೇಷ ಭಾಗ ಜನರನ್ನು ಗೆದ್ದಿತ್ತು. ತಪ್ಪಾಗಿ ಬಳಕೆಯಾಗುತ್ತಿದ್ದ ಅನೇಕ ಕನ್ನಡ ಪದಗಳ ಸರಿಯಾದ ಬಳಕೆಯನ್ನು ಮನದಟ್ಟು ಮಾಡುವಲ್ಲಿ ಕನ್ನಡತಿ ಯಶಸ್ವಿಯಾಗಿದೆ.