ಬೆಂಗಳೂರು: ಟಿಆರ್‌ಪಿಯಲ್ಲಿ ಸದಾ ಮುಂಚೂಣಿಯಲ್ಲಿರುವ, ಟಾಪ್ 5ರೊಳಗೆ ಸ್ಥಾನ ಪಡೆದುಕೊಳ್ಳುತ್ತಿರುವ ಕನ್ನಡದ ಜನಪ್ರಿಯ ಧಾರಾವಾಹಿ ʼಸೀತಾ ರಾಮʼ (Seetha Raama Serial). ಝೀ ಕನ್ನಡ (Zee Kannada) ವಾಹಿನಿಯಲ್ಲಿ ಈ ಸೀರಿಯಲ್ ಪ್ರಸಾರವಾಗುತ್ತಿದೆ. ಸದ್ಯ ಇದು ಹಿಂದಿಗೆ ರಿಮೇಕ್ ಆಗುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸದ್ಯ ಹಿಂದಿ ರಿಮೇಕ್‌ನ ಪ್ರೋಮೊ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ.
ʼಸೀತಾ ರಾಮʼ ಸೀರಿಯಲ್‌ನ ಹಿಂದಿ ರಿಮೇಕ್‌ಗೆ ‘ಮೇ ಹೂ ಸಾತ್ ತೆರೆ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಇದು ಝೀ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸದ್ಯ ಯಾವಾಗಿನಿಂದ ಟೆಲಿಕಾಸ್ಟ್ ಆಗಲಿದೆ ಎನ್ನುವ ಮಾಹಿತಿ ಗೊತ್ತಾಗಿಲ್ಲ. ಕನ್ನಡದಲ್ಲಿ ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ, ರಾಮ್ ಆಗಿ ಗಗನ್ ಚಿನ್ನಪ್ಪ ನಟಿಸುತ್ತಿದ್ದಾರೆ. ಇನ್ನು ಧಾರಾವಾಹಿಯ ಪ್ರಧಾನ ಆಕರ್ಷಣೆಯಾದ ಸಿಹಿ ಪಾತ್ರದಲ್ಲಿ ಪುಟಾಣಿ ರೀತು ಸಿಂಗ್ ಮೋಡಿ ಮಾಡಿದ್ದಾರೆ. ಇವರ ಜತೆಗೆ ಪೂಜಾ ಲೋಕೇಶ್, ಅಶೋಕ್, ಮುಖ್ಯಮಂತ್ರಿ ಚಂದ್ರು ಮೊದಲಾದವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಹಿಂದಿಯಲ್ಲಿ ಗಗನ್ ಚಿನ್ನಪ್ಪ ಮಾಡಿರುವ ರಾಮ್ ಪಾತ್ರವನ್ನು ಕರಣ್ ವೋಹ್ರಾ ನಿರ್ವಹಿಸಲಿದ್ದು, ವೈಷ್ಣವಿ ಗೌಡ ಅವರ ಸೀತಾ ಪಾತ್ರವನ್ನು ಪಾತ್ರವನ್ನು ‘ಜಾನ್ಸಿ ಕಿ ರಾಣಿ’ ಧಾರಾವಾಹಿ ಖ್ಯಾತಿಯ ಉಲ್ಕಾ ಗುಪ್ತಾ ಮಾಡುತ್ತಿದ್ದಾರೆ. ಬದಲಾವಣೆ ಎಂದರೆ ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾಗೆ ಸಿಹಿ ಹೆಸರಿನ ಮಗಳಿದ್ದರೆ ‘ಮೇ ಹೂ ಸಾತ್ ತೆರೆ’ಯಲ್ಲಿ ನಾಯಕಿಗೆ ಮಗ ಇರುವುದು ಪ್ರೋಮೊದಲ್ಲಿ ಕಂಡು ಬಂದಿದೆ. ಉಳಿದಂತೆ ಕೊಂಚ ಮಾರ್ಪಾಡಿನೊಂದಿಗೆ ಮೂಲ ಕಥೆಯಂತೆಯೇ ಇದು ಮೂಡಿ ಬರಲಿದೆ.
ಕನ್ನಡವೂ ರಿಮೇಕ್
ವಿಶೇಷ ಎಂದರೆ ʼಸೀತಾ ರಾಮʼ ಧಾರಾವಾಹಿಯೂ ರಿಮೇಕ್. ಇದು ಮರಾಠಿಯ ‘ಮಜಿ ತುಜಿ ರೆಶಿಮಗತ್’ ಧಾರಾವಾಹಿಯ ಕಥೆಯನ್ನು ಆಧರಿಸಿ ತಯಾರಾಗಿದೆ. ಈ ಧಾರಾವಾಹಿ ಝೀ ಮರಾಠಿಯಲ್ಲಿ 2021ರ ಆಗಸ್ಟ್ನಿಂದ 2023ರ ಜನವರಿವರೆಗೆ ಪ್ರಸಾರವಾಗಿತ್ತು. 458 ಕಂತುಗಳನ್ನು ಹೊಂದಿದ್ದ ಇದರಲ್ಲಿ ಪ್ರಾರ್ಥನಾ ಬೆಹೆರೆ ಹಾಗೂ ಶ್ರೇಯಸ್ ತಲ್ಪಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಫುಲ್ ಹೌಸ್ ಮೀಡಿಯಾ’ ನಿರ್ಮಾಣದ ‘ಮೇ ಹೂ ಸಾತ್ ತೇರೆ’ ಮುಂದಿನ ತಿಂಗಳಿನಿಂದ ಪ್ರಸಾರವಾಗುವ ಸಾಧ್ಯತೆ ಇದೆ.
2023ರ ಜುಲೈ 17ರಿಂದ ಪ್ರಸಾರವಾಗುತ್ತಿರುವ ʼಸೀತಾ ರಾಮʼ ಹಲವು ತಿರುವುಗಳೊಂದಿಗೆ ಪ್ರೇಕ್ಷಕರ ಮನ ರಂಜಿಸುತ್ತಿದೆ. ಮರಾಠಿ, ಕನ್ನಡದಲ್ಲಿ ಹಿಟ್ ಆದ ಈ ಧಾರಾವಾಹಿಯನ್ನು ಹಿಂದಿಯ ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಇದನ್ನೂ ಓದಿ: Kannada Serials TRP: ಟಾಪ್ 5ನಲ್ಲಿ ಇಲ್ಲ ʻಶ್ರೀರಸ್ತು ಶುಭಮಸ್ತುʼ: ರೇಸ್‌ಗಿಳಿದ ʻರಾಮಾಚಾರಿʼ!
ಕಳೆದ ವಾರ ಬಿಡುಗಡೆಯಾದ ಟಿಆರ್‌ಪಿ ಪಟ್ಟಿಯಲ್ಲಿ ʼಸೀತಾ ರಾಮʼ ಆರನೇ ಸ್ಥಾನದಲ್ಲಿತ್ತು. ಅದಕ್ಕೂ ಹಿಂದಿನ ವಾರ ನಾಲ್ಕನೇ ಸ್ಥಾನದಲ್ಲಿತ್ತು. ಮೊದಲ ಸ್ಥಾನಕ್ಕಾಗಿ ಸದ್ಯ ಝೀ ಕನ್ನಡ ವಾಹಿನಿಯ ‘ಪುಟ್ಟಕ್ಕನ ಮಕ್ಕಳು’ ಮತ್ತು ʼಲಕ್ಷ್ಮೀ ನಿವಾಸʼ ಸೀರಿಯಲ್ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ