ಬೆಂಗಳೂರು: ರಾಯಚೂರು ಮೂಲದ ಬಡ ಕುಟುಂಬಕ್ಕೆ ಸೇರಿದ ಏಳು ವರ್ಷದ ಬಾಲಕಿಯನ್ನು ಅಕ್ರಮವಾಗಿ ದತ್ತು (Illegal Adoption) ಪಡೆದ ಅರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಬಿಗ್‌ಬಾಸ್ ಖ್ಯಾತಿಯ (Bigg Boss fame) ರೀಲ್ಸ್ ರಾಣಿ ಸೋನು ಶ್ರೀನಿವಾಸ ಗೌಡ(Sonu Srinivas Gowda) ಅವರಿಗೆ ರಿಲೀಫ್ ಸಿಕ್ಕಿದೆ. ಅವರಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ಇಂದು ಅಥವಾ ನಾಳೆ ಜೈಲಿನಿಂದ ಸೋನು ಶ್ರೀನಿವಾಸ್ ಗೌಡ ಬಿಡುಗಡೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
4 ದಿನದ ಪೊಲೀಸ್ ಕಸ್ಟಡಿ ಬಳಿಕ ಸೋನು ಶ್ರೀನಿವಾಸ್ ಗೌಡ ಅವರಿಗೆ ಕೋರ್ಟ್ ಮಾರ್ಚ್ 25ರಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಏಪ್ರಿಲ್ 8ರ ತನಕ ನ್ಯಾಯಾಂಗ ಬಂಧನದ ಆದೇಶ ಹೊರಡಿಸಲಾಗಿತ್ತು. ಆದರೆ ಸೋನು ಗೌಡ ಪರ ವಕೀಲರು ಕೋರ್ಟ್ ಮೊರೆ ಹೋದ ಹಿನ್ನೆಲೆ ಜಾಮೀನು ಮಂಜೂರಾಗಿದೆ. ಇಬ್ಬರ ಶ್ಯೂರಿಟಿ, 1 ಲಕ್ಷ ರೂ. ಬ್ಯಾಂಡ್‌ನ ಷರತ್ತು ವಿಧಿಸಿದ ನ್ಯಾಯಾಲಯ ಜಾಮೀನು ನೀಡಿದೆ.
ಏನಿದು ಪ್ರಕರಣ?
ಸೋನು ಗೌಡ ಅವರು ರಾಯಚೂರಿನ ಮುದ್ದಪ್ಪ ಮತ್ತು ರಾಜೇಶ್ವರಿ ದಂಪತಿಯ ಏಳು ವರ್ಷದ ಹೆಣ್ಣು ಮಗುವಿನ ಜತೆ ಮುದ್ದಾಟವಾಡುತ್ತಾ, ರೀಲ್ಸ್ ಮಾಡುತ್ತಿದ್ದರು. ಬಳಿಕ ಸೋನು ಗೌಡ ಆ ಮಗುವನ್ನು ತನಗೇ ಕೊಡಬೇಕು ಎಂದು ಹಠ ಹಿಡಿದಿದ್ದರು. 10 ಲಕ್ಷ ರೂ. ಆಮಿಷವನ್ನೂ ಒಡ್ಡಿದ್ದರಂತೆ. ಆದರೆ ಮನೆಯವರು ಕೊಟ್ಟಿರಲಿಲ್ಲ.
ಮಾ. 1ರಂದು ರಾಯಚೂರಿನ ಮಗುವಿನ ಮನೆಗೆ ಹೋಗಿದ್ದ ಸೋನು ಗೌಡ ಮಲಗಿದ್ದ ಮಗುವನ್ನು ಎತ್ತಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ʼʼಮಗಳು 15 ದಿನ ನನ್ನ ಬಳಿ ಇರಲಿ. ಬಳಿಕ ಕರೆದುಕೊಂಡು ಬರುತ್ತೇನೆ. ಮಗಳನ್ನು ನೋಡಬೇಕು ಎನಿಸಿದರೆ ನೀವೂ ಬನ್ನಿʼʼ ಎಂದು ಹೆತ್ತವರಿಗೆ ತಿಳಿಸಿದ್ದರಂತೆ.
ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಬಂದ ಬಳಿಕ, ತಾನು ದತ್ತು ತೆಗೆದುಕೊಂಡಿದ್ದೇನೆ ಎಂದು ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಆದರೆ ಅವಿವಾಹಿತೆಯಾಗಿರುವ ಆಕೆ ಹೇಗೆ ದತ್ತು ಪಡೆದುಕೊಂಡರು? ಅದಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಪಾಲನೆ ಮಾಡಲಾಗಿದೆಯಾ ? ಎಂಬ ಬಗ್ಗೆ ವಿಚಾರಿಸಿದಾಗ ಯಾವುದೇ ಕ್ರಮಗಳ ಪಾಲನೆ ಆಗಿಲ್ಲ ಎನ್ನುವುದು ಪತ್ತೆಯಾಗಿತ್ತು. ಆಗ ಮಕ್ಕಳ ಕಲ್ಯಾಣ ಸಮಿತಿ ದೂರು ನೀಡಿ ಪ್ರಕರಣ ಬೆಳಕಿಗೆ ಬಂದಿತ್ತು. ಜತೆಗೆ ಮಗುವನ್ನು ದತ್ತು ಪಡೆದ ಬಗ್ಗೆ ಸಾಮಾಜಿಕವಾಗಿ ಹೇಳಿಕೊಳ್ಳುವಂತಿಲ್ಲ ಎಂಬ ನಿಯಮದ ಉಲ್ಲಂಘನೆಯಾಗಿದೆ ಎನ್ನುವುದು ಸಾಬೀತಾಗಿತ್ತು. ಹೀಗಾಗಿ ಮಾರ್ಚ್ 22ರಂದು ಪೊಲೀಸರು ಸೋನು ಗೌಡ ಅವರನ್ನು ಬಂಧಿಸಿದ್ದರು.
ಇದನ್ನೂ ಓದಿ: Sonu Srinivas Gowda: ಮಗುವಿಗಾಗಿ ಸೋನು ಗೌಡ 10 ಲಕ್ಷ ರೂ. ಆಮಿಷ ಒಡ್ಡಿದ್ದು ನಿಜವೇ? ಹೆತ್ತವರು ಹೇಳಿದ್ದಿಷ್ಟು
ಇತ್ತೀಚೆಗೆ ಸೋನು ಗೌಡ ಅವರನ್ನು ಪೊಲೀಸರು ಮಗುವಿನ ರಾಯಚೂರಿನ ಗ್ರಾಮಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದರು. ಈ ವೇಳೆ ಗ್ರಾಮಸ್ಥರು ಆಕೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಕಾರಿಗೆ ಕಲ್ಲು ತೂರಾಟ ಕೂಡಾ ನಡೆಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ