ಬೆಂಗಳೂರು: ಸಾಗರ ತಾಲೂಕಿನ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದ ಆವರಣದಲ್ಲಿ ‘ಶ್ರೀ ದೇವೀ ಮಹಾತ್ಮೆ’ ಧಾರಾವಾಹಿ ತಂಡದಿಂದ ಸ್ಥಾಪಿಸಲಾಗಿರುವ ‘ಸುವರ್ಣ ಅಖಂಡ ದೀಪ’ಕ್ಕೆ “ಸುವರ್ಣ ಸಂಕಲ್ಪ” ಕಾರ್ಯಕ್ರಮ (Star Suvarna) ಖ್ಯಾತಿಯ ವಿದ್ವಾನ್ ಡಾ. ಗೋಪಾಲ ಕೃಷ್ಣ ಶರ್ಮ ಹಾಗು ಧರ್ಮದರ್ಶಿಗಳಾದ ರಾಮಪ್ಪನವರ್ ಪುತ್ರ ರವಿಕುಮಾರ್ ಅವರು ಚಾಲನೆ ನೀಡಿದರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಳೆದ ಜುಲೈ 1 ರಿಂದ ಪ್ರಸಾರವಾಗುತ್ತಿರುವ “ಶ್ರೀ ದೇವೀ ಮಹಾತ್ಮೆ” ಎಂಬ ಪೌರಾಣಿಕ ಧಾರಾವಾಹಿಗೆ ಮೊದಲ ದಿನದಿಂದಲೇ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಲೋಕ ಕಲ್ಯಾಣಾರ್ಥವಾಗಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸುವರ್ಣ ಅಖಂಡ ದೀಪವನ್ನು ಸ್ಥಾಪಿಸಿದೆ. ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯ ಸಮಿತಿ ಕಾರ್ಯದರ್ಶಿ ರವಿಕುಮಾರ್ ದೀಪ ಬೆಳಗಿಸುವ ಮೂಲಕ ಅಖಂಡ ದೀಪವನ್ನು ಉದ್ಘಾಟಿಸಿದರು.
ಇದನ್ನೂ ಓದಿ: Kannada New Movie: ಸೆಟ್ಟೇರಿತು ‘ಆಕಾಶ್’, ‘ಅರಸು’ ಚಿತ್ರಗಳ ಡೈರೆಕ್ಟರ್ ಹೊಸ ಸಿನಿಮಾ; ಕಿರುತೆರೆಯ ಈ ಪ್ರತಿಭೆ ನಾಯಕ
ಇದಕ್ಕೂ ಮುನ್ನ ವೇದಿಕೆ ಮೇಲೆ ಉಪಸ್ಥಿತರಿದ್ದ ಗೋಪಾಲಕೃಷ್ಣ ಶರ್ಮ ಗುರೂಜಿ ಮಾತನಾಡಿ ಶ್ರೀದೇವಿಯ ಅವತಾರಗಳ ಬಗ್ಗೆ, ಇಂದಿನಿಂದ ನಿರಂತರವಾಗಿ ಪ್ರಜ್ವಲಿಸರುವ ಅಖಂಡ ದೀಪದ ಬಗ್ಗೆ ವಿವರಣೆ ನೀಡಿದರು. ಜೊತೆಗೆ ಸುವರ್ಣ ವಾಹಿನಿಯು ಲೋಕ ಕಲ್ಯಾಣಾರ್ಥವಾಗಿ, ಸುವರ್ಣ ವಾಹಿನಿಯ ವೀಕ್ಷಕರಿಗೆಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತಾ ಹಾಗು ಶ್ರೀ ದೇವೀ ಮಹಾತ್ಮೆಯು ಇನ್ನಷ್ಟು ಪ್ರಖ್ಯಾತಿ ಪಡೆಯಲಿ ಎಂದು ಈ “ಸುವರ್ಣ ಅಖಂಡ ದೀಪ”ವನ್ನು ಸ್ಥಾಪಿಸಿ ಬೆಳಗಿಸಲಾಗುತ್ತಿದೆ ಎಂದರು. ನಂತರ ‘ಶ್ರೀ ದೇವೀ ಮಹಾತ್ಮೆ’ ಧಾರಾವಾಹಿಯ ನಿರ್ಮಾಪಕ ಅರವಿಂದ್ ಮಾತನಾಡಿ, ಇದು ನಮ್ಮ ಸಂಸ್ಥೆಯ ನಿರ್ಮಾಣದ ಮೂರನೇ ಧಾರಾವಾಹಿ. ಮೊದಲು ಆರಂಭಿಸಿದ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಈಗಾಗಲೇ 1000 ಕಂತುಗಳನ್ನು ಮುಗಿಸಿದೆ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಈಗಾಗಲೇ 500 ಕಂತುಗಳನ್ನು ಮುಗಿಸಿದೆ. ಅತ್ಯದ್ಭುತವಾಗಿರುವ ಗ್ರಾಫಿಕ್ಸ್ ತಂತ್ರಜ್ಞಾನಗಳಿಂದ, ಚಿತ್ರೀಕರಣಗೊಳ್ಳುತ್ತಿರುವ ಈ ಧಾರಾವಾಹಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ನೆಲದ ಕಥೆಗಳನ್ನು ನಮ್ಮ ಜನರಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದೇವೆ. ಈಗ ‘ಶ್ರೀ ದೇವೀ ಮಹಾತ್ಮೆ’ ಧಾರಾವಾಹಿಯು ಸೋಮವಾರದಿಂದ ಶನಿವಾರ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿದೆ ಎಂದರು.
ಇನ್ನು ಶಿವನ ಪಾತ್ರಧಾರಿ ನಟ ಅರ್ಜುನ್ ರಮೇಶ್ ಮಾತನಾಡಿ, ʻʻಈಗಾಗಲೇ ನನಗೆ ಮೂರು ಸಲ ಶಿವನ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶ ಸಿಕ್ಕಿದೆ, ಸಣ್ಣ ಗರ್ವ ಜೊತೆಗೆ ಹೆಮ್ಮೆಯೂ ಇದೆ. ಆಧುನಿಕ ಯುಗದಲ್ಲಿ ಜನ ಪೌರಾಣಿಕ ಧಾರಾವಾಹಿಗಳನ್ನು ಬೆಂಬಲಿಸಬೇಕಿದೆ. ಆದರೆ ಪಾತ್ರಕ್ಕೆ ವೇಷಭೂಷಣ ತೊಟ್ಟು ಗಂಟೆಗಟ್ಟಲೆ ಚಿತ್ರೀಕರಣಕ್ಕೆ ನಿಲ್ಲುವ ಕಲಾವಿದರ ಕಷ್ಟ ಜನರಿಗೆ ಅರ್ಥವಾಗಲ್ಲ. ಆದರೆ ನನ್ನ ಪಾತ್ರವನ್ನು ಜನರು ಮೆಚ್ಚಿಕೊಂಡಿರುವುದು ಖುಷಿ ಕೊಟ್ಟಿದೆ ಎಂದರು. ನಂತರ ಪಾರ್ವತಿ ಪಾತ್ರಧಾರಿ ನಟಿ ಜೀವಿತಾ ವಸಿಷ್ಠ ಮಾತನಾಡಿ, ಶ್ರೀದೇವಿಯ ಪಾತ್ರ ಮಾಡೋ ಅವಕಾಶ ನನಗೆ ಸಿಕ್ಕಿರುವುದೇ ನನ್ನ ಜೀವನದ ದೊಡ್ಡ ಪುಣ್ಯ. ಯಾವುದೇ ಒತ್ತಡವಿಲ್ಲದೆ ಕೆಲಸ ಮಾಡುತ್ತಿರುವೆ. ಎಲ್ಲರೂ ಸಪೋರ್ಟ್ ಮಾಡುತ್ತಿದ್ದಾರೆ. ಶ್ರೀ ದೇವೀ ಮಹಾತ್ಮೆ ಧಾರಾವಾಹಿಯನ್ನು ಸೋಮವಾರದಿಂದ ಶನಿವಾರ ರಾತ್ರಿ 7 ಗಂಟೆಗೆ ಎಲ್ಲರೂ ನೋಡುವಂತೆʼʼ ಕೋರಿಕೊಂಡರು.