ಬೆಂಗಳೂರು: ಹಲವು ವರ್ಷಗಳಿಂದ ಕನ್ನಡಿಗರ ಮನೆ-ಮನಸ್ಸು ಗೆದ್ದಿರುವ ಉದಯ ಟಿವಿ (Udaya Tv) ಹಲವು ಮನೋರಂಜನಾತ್ಮಕ ಕಾರ್ಯಕ್ರಮ, ಧಾರಾವಾಹಿಗಳ ಮೂಲಕ ಗಮನ ಸೆಳೆಯುತ್ತಿದೆ. ಇದೀಗ ವಾಹಿನಿ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ. ಡಿಸೆಂಬರ್ 11ರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಅಕ್ಕ ತಂಗಿಯರ ಅಪೂರ್ವ ಬಾಂಧವ್ಯದ ಕಥೆ ಹೇಳುವ ʻಗಂಗೆ ಗೌರಿʼ ಧಾರಾವಾಹಿ ಪ್ರಸಾರವಾಗಲಿದೆ.
ಈಗಾಗಲೇ ಉದಯ ಟಿವಿಯಲ್ಲಿ ಪ್ರಸಾರವಾಗುವ ʼಕನ್ಯಾದಾನʼ, ʼಆನಂದ ರಾಗʼ, ʼಅಣ್ಣ ತಂಗಿʼ, ʼಸೇವಂತಿʼ, ʼಜನನಿʼ, ʼರಾಧಿಕಾʼ, ʼನಯನತಾರಾʼ, ʼಗೌರಿಪುರದ ಗಯ್ಯಾಳಿಗಳುʼ ಇತ್ಯಾದಿ ಕೌಟುಂಬಿಕ ಧಾರಾವಾಹಿಗಳು ವೀಕ್ಷಕರ ಮನ ಗೆದ್ದಿವೆ. ಈಗ ʻಗಂಗೆ ಗೌರಿʼ ಸೀರಿಯಲ್ ವಿಶೇಷ ನಿರೂಪಣಾ ಶೈಲಿಯೊಂದಿಗೆ ಟಿವಿ ಮನೋರಂಜನಾ ಲೋಕಕ್ಕೆ ಲಗ್ಗೆ ಇಡಲಿದೆ.
ಕಥೆ ಏನು?
ಹಸಿರು ಮಲೆನಾಡ ಪುಟ್ಟ ಹಳ್ಳಿಯಲ್ಲಿ ಗಂಗೆ ಗೌರಿ ಎನ್ನುವ ಅಕ್ಕತಂಗಿಯರು. ಯಾರಿಗೂ ಜಗ್ಗದ ಬಗ್ಗದ, ಮಾತಿಗಿಂತ ಏಟೇ ಸರಿ ಎನ್ನುವ ಹುಡುಗಿ ತಂಗಿ ಗಂಗೆಯಾದರೆ, ಮೃದು ಮಾತಲ್ಲೇ ಎಲ್ಲರ ಮನ ಗೆಲ್ಲುವ ಶಾಂತ ಮೃದು ಸ್ವಭಾವದ ಅಕ್ಕ ಗೌರಿಯದ್ದು. ಸ್ವಭಾವ ಬೇರೆಯಾದರೂ ಒಬ್ಬರನ್ನೊಬ್ಬರು ಅಗಲಿ ಇರಲಾರದಷ್ಟು ಅನ್ಯೋನ್ಯತೆ ಇಬ್ಬರ ನಡುವೆ. ಇವರ ಮಧ್ಯೆ ಹುಡುಗನೊಬ್ಬ ಬಂದರೆ ಏನಾಗಬಹುದು? ಅವರ ಜೀವನದಲ್ಲಿ ಯಾವ ತರಹದ ಬದಲಾವಣೆಗಳು ಆಗುತ್ತವೆ? ತಂಗಿಗೋಸ್ಕರ ಅಕ್ಕ ಗೌರಿ ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾಳಾ ಅಥವಾ ಅಕ್ಕ ಮತ್ತು ಪ್ರೀತಿಯ ನಡುವೆ ಗಂಗೆಯ ಆಯ್ಕೆ ಏನು? ಇವೆಲ್ಲ ಮೀರಿ ದೈವ ಇಚ್ಛೆ ಏನು? ಎನ್ನುವುದರ ಸುತ್ತ ಕುತೂಹಲ ಭರಿತ ತಿರುವುಗಳ ಕಥಾಹಂದರ ಸಾಗಲಿದೆ.
ಕಳಸದ ಹಸಿರಿನ ನಡುವೆ, ಮಲೆನಾಡ ಸುಂದರ ಹಳ್ಳಿ ಬದುಕಿನ ಹಿನ್ನೆಲೆಯ ಈ ಕಥೆ ನೋಡುಗರ ಮನ ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ. ಈಗಾಗಲೇ ಅನೇಕ ಕನ್ನಡ ಅದ್ಭುತ ಸೀರಿಯಲ್‌ಗಳನ್ನು ನಿರ್ಮಾಣ ಮಾಡಿದ ವೃದ್ಧಿ ಕ್ರಿಯೇಶನ್ ಈ ಧಾರಾವಾಹಿಯ ನಿರ್ಮಾಣದ ಹೊಣೆ ಹೊತ್ತಿದೆ. ಅನುಭವಿ ನಿರ್ದೇಶಕ ವಿನೋದ್ ದೋಂಡಾಳೆ ನಿರ್ದೇಶನದಲ್ಲಿ ʼಗಂಗೆ ಗೌರಿʼ ಧಾರಾವಾಹಿ ಮೂಡಿ ಬರುತ್ತಿದೆ.
ಅನುಭವಿ ಕಲಾವಿದರ ದಂಡು
ದರ್ಶ್ ಚಂದ್ರಪ್ಪ, ಶ್ರೀವಿದ್ಯಾ ಶಾಸ್ತ್ರಿ, ದರ್ಶಿನಿ ಗೌಡ, ರೇಣುಕಾ ಬಾಲಿ, ಹೇಮಾ ಬೆಳ್ಳೂರು, ಅಪೂರ್ವ ಭಾರಧ್ವಾಜ್, ರೋಹಿತ್ ಶ್ರೀನಾಥ್, ಅಭಿಜಿತ್, ಲಕ್ಷ್ಮೀ ಸಿದ್ದಯ್ಯ ಅವರಂತಹ ಖ್ಯಾತ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿದೆ.
ʻʼಗಂಗೆ ಗೌರಿʼ ನಮ್ಮ ಹೆಮ್ಮೆಯ ನಿರ್ಮಾಣ. ಇದು ಬೇರೆ ಸೀರಿಯಲ್‌ಗಿಂತ ವಿಭಿನ್ನವಾಗಿದೆ. ಮಲೆನಾಡಿನ ಸುಂದರ ತಾಣಗಳಿಗೆ ಹೋಗಿ ಚಿತ್ರೀಕರಣ ಮಾಡಿಕೊಂಡು ಬಂದಿದ್ದೇವೆ. ಸೀರಿಯಲ್ ನಡುವೆ ಕನ್ನಡ ಭಾವಗೀತೆಗಳನ್ನು ಬಳಸಿದ್ದೇವೆ. ಕನ್ನಡತನ ಇದರಲ್ಲಿ ಎದ್ದು ಕಾಣಿಸಲಿದೆ. ನಮ್ಮ ಈ ಪ್ರಯತ್ನ ಖಂಡಿತ ಪ್ರೇಕ್ಷಕರಿಗೆ ಇಷ್ಟವಾಗಲಿದೆʼʼ ಎಂದು ನಿರ್ಮಾಪಕ ವರ್ಧನ್ ಹರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!