ಬೆಂಗಳೂರು: ಸ್ಯಾಂಡಲ್‌ವುಡ್ ಹಿರಿಯ ನಟ ಅವಿನಾಶ್ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಜತೆಗಿನ ಒಡನಾಟದ ಕುರಿತು ಹೇಳಿಕೊಂಡಿದ್ದಾರೆ. ಅವಿನಾಶ್-ಮಾಳವಿಕ ಮನೆಯ ದೇವರ ಕೋಣೆಯಲ್ಲಿ ವಿಷ್ಣುವರ್ಧನ್ ಅವರ ಫೋಟೊ ಇರುವ ಬಗ್ಗೆ, ಹಾಗೇ ಮಾಳವಿಕಾ ಕಂಡರೆ ವಿಷ್ಣುವರ್ಧನ್ ಅವರಿಗೆ ಅಚ್ಚುಮೆಚ್ಚು ಎಂದರು ಅವಿನಾಶ್.
‘’ವಿಷ್ಣು ವರ್ಧನ್ ಅವರು ನಮ್ಮನ್ನು ತುಂಬ ಪ್ರೀತಿ ಮಾಡುತ್ತಿದ್ದರು. ನನಗಿಂತ ಹೆಚ್ಚಾಗಿ ಮಾಳವಿಕಾ ಕಂಡರೆ ಅವರಿಗೆ ಇಷ್ಟ. ಮಗಳ ತರಹವೇ ನೋಡುತ್ತಿದ್ದರು. ನಮ್ಮ ಸೈಟ್‌ನಲ್ಲಿ ವಿಷ್ಣು ಅವರಿಂದ ಕೈಯಿಂದ ಗುದ್ದಲಿ ಪೂಜೆ ಮಾಡಿಸಿದ್ದೇವು. ಬಳಿಕ ವರ್ಷ ನಾನು ಮನೆ ಕಟ್ಟಿಸಲಿಲ್ಲ. ಈ ವಿಚಾರಕ್ಕೆ ನನಗೆ ಬೈಯುತ್ತಿದ್ದರು. ನೀವು ನನ್ನ ಕೈಯಲ್ಲಿ ಗುದ್ದಲಿ ಪೂಜೆ ಮಾಡಿಸಿ, ಮನೆ ಕಟ್ಟಲಿಲ್ಲ. ನನಗೆ ಅವಮಾನ ಆಗುತ್ತೆ.. ಮನೆ ಕಟ್ಟಿಸಿರಿ ಎಂದು ಹೇಳುತ್ತಿದ್ದರು. ‘’ಆಪ್ತರಕ್ಷಕ’ ಸಾಂಗ್ ಶೂಟಿಂಗ್ ವೇಳೆಗೆ ನಾನು ಮನೆ ಕಟ್ಟಿಸಿದ್ದೆ. ನಮ್ಮನೆಯಲ್ಲಿ ಪಾರ್ಟಿ ಇತ್ತು. ಪಾರ್ಟಿಗೆ ಬನ್ನಿ ಎಂದು ವಿಷ್ಣು ಸರ್ ಅವರನ್ನು ಕರೆದಿದ್ದೆ. ಆಮೇಲೆ ದಿಢೀರ್ ಎಂದು ವಿಷ್ಣು ಸರ್ ಬಂದುಬಿಟ್ಟರು. ಮನೆ ನೋಡಿ ತುಂಬಾ ಖುಷಿ ಪಟ್ಟರು’’ ಎಂದು ನಟ ಅವಿನಾಶ್.
ʻʻಡಿಸೆಂಬರ್ ಕೊನೆ. ಆಮೇಲೆ ನಾವು ಯಾವುದೇ ನ್ಯೂ ಇಯರ್ ಪಾರ್ಟಿಗೆ ಹೋಗಿಲ್ಲ. ಅವರ ಮನೆಯಲ್ಲೇ ನ್ಯೂ ಇಯರ್ ಪಾರ್ಟಿ ಇರುತ್ತಿತ್ತು. ‘ಬರೋದು ನಿಮ್ಮಿಚ್ಛೆ. ಕಳುಹಿಸೋದು ನನ್ನಿಚ್ಛೆ’ ಅಂತ ಹೇಳುತ್ತಿದ್ದರು. ಆ ತರಹದ ಆತ್ಮೀಯತೆ ಇತ್ತು’’ ಎಂದರು ಮಾಳವಿಕಾ ಅವಿನಾಶ್.
ಅವಿನಾಶ್‌ಗೆ ವಿಷ್ಣುವರ್ಧನ್ ಕ್ಲಾಸ್
ಮಾಳವಿಕಾ ಈ ಬಗ್ಗೆ ಮಾತನಾಡಿ ʻʻಅವಿನಾಶ್ ಅವರಿಗೆ ಮದುವೆ ಮಾಡಿಸಬೇಕೆಂಬುದು ವಿಷ್ಣು ಅವರಿಗೆ ಆಸೆ ಇತ್ತು. ‘ಮಾಯಾಮೃಗ’ ಧಾರಾವಾಹಿಯನ್ನ ತುಂಬಾ ಇಷ್ಟ ಪಟ್ಟು ನೋಡುತ್ತಿದ್ದರು. ಅವರು ಹುಡುಗಿಯನ್ನ ಹುಡುಕಿದ್ದರಂತೆ. ಅವಿನಾಶ್ ತಲೆ ಮರೆಯಿಸಿಕೊಂಡು ಓಡುತ್ತಿದ್ದರಂತೆ. ಒಂದು ದಿನ ಪೇಪರ್‌ನಲ್ಲಿ ಬಂತು ನಮ್ಮಿಬ್ಬರ ಮದುವೆ ಬಗ್ಗೆ. ಈ ಹುಡುಗಿಯನ್ನ ಇಷ್ಟ ಪಟ್ಟಿದ್ದೀನಿ ಎಂದು ಹೇಳಬೇಕು ತಾನೆ ಅಂತ ಅವಿನಾಶ್‌ಗೆ ಕ್ಲಾಸ್ ತೆಗೆದುಕೊಂಡಿದ್ದರಂತೆ ಎಂದರು.
ʻಒಂದಾಗಿ ಬಾಳು’ ಸಿನಿಮಾದಲ್ಲಿ ಡಾ.ವಿಷ್ಣುವರ್ಧನ್ ಜತೆಗೆ ಅವಿನಾಶ್ ಅಭಿನಯಿಸಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ಡಾ.ವಿಷ್ಣುವರ್ಧನ್ ಅವರ ಕಪಾಳಕ್ಕೆ ಅವಿನಾಶ್ ಹೊಡೆಯುವ ಸೀನ್ ಇತ್ತು. ಅದನ್ನ ಕಂಡ ಅಭಿಮಾನಿಗಳು ಸಿಟ್ಟಿಗೆದ್ದು ಅವಿನಾಶ್ ಅವರನ್ನ ಅಟ್ಟಿಸಿಕೊಂಡು ಹೋಗಿದ್ದರ ಕಥೆಯನ್ನು ಅವಿನಾಶ್ ಹೇಳಿಕೊಂಡರು.ಆಮೇಲೆ ವಿಷ್ಣು ಅವರಿಗೆ ಫೋನ್ ಮಾಡಿ ಅವಿನಾಶ್ ಅವರು ತಿಳಿಸಿದಾಗ ‘ಹುಷಾರಾಗಿರಿ.. ಹಾಗೆಲ್ಲಾ ಹೋಗಬಾರದು ನೀವು’ ಎಂದರು ಎಂಬುದರ ನೆನಪು ಮೆಲುಕು ಹಾಕಿದರು.
ಕಿರುತೆರೆಯಲ್ಲಿ ಇರುವಾಗ ಹುಟ್ಟಿತ್ತು ಪ್ರೀತಿ
ಅವಿನಾಶ್ ಹಾಗೂ ಮಾಳವಿಕಾ ಮಾಯಾಮೃಗ ಧಾರಾವಾಹಿಯಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಮದುವೆ ಬಗ್ಗೆ ಅವಿನಾಶ್ ಪ್ರಸ್ತಾಪಿಸಿ ʻʻನಮ್ಮಿಬ್ಬರ ಮಧ್ಯೆ ವಯಸ್ಸಿನ ಅಂತರವಿತ್ತು. ಆದರೆ, ಇಬ್ಬರೂ ಯೋಚನೆ ಮಾಡುವ ರೀತಿ ಒಂದೇ ಇತ್ತು. ಒಟ್ಟಿಗೆ ಇರಬಹುದೇನೋ ಎಂದು ನನಗೆ ಅನಿಸಿತ್ತು. ಆದರೆ, ಕೇಳುವ ಧೈರ್ಯ ನನಗೆ ಇರಲಿಲ್ಲ ಎಂದರು.
ಅವಿನಾಶ್ ಅವರು ಮಾಳವಿಕಾ ಅವರ ಮನೆಗೆ ಬಂದಾಗ ಮಾಳವಿಕಾ ತಾಯಿ ನೇರವಾಗಿ ನಮ್ಮ ಹುಡುಗಿನ್ನು ಮದುವೆಯಾಗುತ್ತೀಯಾ ಎಂದಾಗ ಅವಿನಾಶ್ ಶಾಕ್ ಆಗಿದ್ದರಂತೆ. ಫೆಬ್ರವರಿ 26ರಂದು ಮದುವೆ ಮಾಡಿಬಿಟ್ವಿ ಎಂದು ಮಾಳವಿಕಾ ತಾಯಿ ಸಾವಿತ್ರಿ ಮಾತನಾಡಿದರು.