ಬೆಂಗಳೂರು: ಈ ವಾರ `ವೀಕೆಂಡ್ ವಿತ್ ರಮೇಶ್’ (Weekend With Ramesh) ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಅತಿಥಿಯಾಗಿ ಆಗಮಿಸಿದ್ದರು. ತಮ್ಮ ಬಾಲ್ಯ ಜೀವನ, ಕುಟುಂಬ, ಅಷ್ಟೇ ಅಲ್ಲ ಅರಸಿಕೆರೆಯ ಸ್ಕೂಲು, ಕಾಲೇಜು, ತನ್ನ ಫ್ರೆಂಡ್ಸ್ ಬಗ್ಗೆ ಹೇಳಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಧನಂಜಯ್ ಹೆಚ್ಚು ಭಾವುಕರಾದರು. ಅವರ ಅಕ್ಕ ರಾಣಿ ಅವರ ಬಗ್ಗೆ ಮಾತನಾಡಿ ಕಣ್ಣೀರಾದರು.
ಡಾಲಿ ಹುಟ್ಟಿದ್ದೇ ವಿಚಿತ್ರ!
ಸಾವಿತ್ರಮ್ಮ ಹಾಗೂ ಅಡವಿ ಸ್ವಾಮಿ ದಂಪತಿಯ ನಾಲ್ಕು ಜನ ಮಕ್ಕಳಲ್ಲಿ ಧನಂಜಯ್ ಕೊನೆಯವರು. ಡಾಲಿ ಅವರು ಹುಟ್ಟಿದ್ದೆ ವಿಚಿತ್ರವಾಗಿತ್ತು ಎಂದು ತಂದೆ ತಾಯಿ ವೇದಿಕೆ ಮೇಲೆ ಕಥೆ ಹಂಚಿಕೊಂಡರು. ಮೂರು ಜನ ಮಕ್ಕಳಾದ ಮೇಲೆ ಡಾಲಿ ಅವರ ತಂದೆ ಇನ್ನು ಮಕ್ಕಳು ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದರು. ನಾಲ್ಕನೇ ಮಗವನ್ನು ಅಬಾಷನ್ ಮಾಡಿಸುವುದಕ್ಕೆ ಹೆಂಡತಿಗೆ ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದರಂತೆ. ಆದರೆ ಅಲ್ಲಿಯ ವೈದ್ಯರು ಮಣಿಕರ್ಣಿಕಾ ತಾಯಿಗೆ ನಾಲ್ಕು ತಿಂಗಳು ಆದ ಕಾರಣ ಮಗು ತೆಗಿಸಬೇಡಿ ಅಂದ ಕಾರಣಕ್ಕೆ ಡಾಲಿ ಹುಟ್ಟಿದ. ಮಗನನ್ನು ಉಳಿಸಿಕೊಟ್ಟವರು ಅವರು ಎಂದು ತಂದೆ ವೇದಿಕೆಯಲ್ಲಿ ಹೇಳಿಕೊಂಡರು.
ಅಕ್ಕ ಮಗಳಿದ್ದಂತೆ ಎಂದ ಡಾಲಿ!
ಧನಂಜಯ್‌ಗೆ ಇಬ್ಬರೂ ಅಕ್ಕಂದಿರು ಹಾಗೂ ಒಬ್ಬ ಅಣ್ಣ. ಆದರೆ ರಾಣಿ ಅಕ್ಕನಿಗೆ ಚಿಕ್ಕ ವಯಸ್ಸಿನಲ್ಲೇ ಪೋಲಿಯೋ ಅಟ್ಯಾಕ್ ಆಗಿ ಇನ್ನು ಮಗುವಿನ ಹಾಗೆ ಇದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಧನಂಜಯ್ ಅವರು ಅಕ್ಕನ ಕುರಿತು ಮಾತನಾಡಿ ʻʻಆಕೆಗೆ ಬಳೆ ಅಂದರೆ ಇಷ್ಟ. ನಾನು ಚಿಕ್ಕವನಿದ್ದಾಗ ದೇವರು ಅವಳಿಗೆ ಕಣ್ಣು ಕೊಡಲಿ ಎಂದು ಪ್ರಾರ್ಥಿಸುತ್ತಿದ್ದೆ. ಇದೆ ಮೊದಲ ಬಾರಿಗೆ ಅಕ್ಕ ರಾಣಿ ಕ್ಯಾಮರಾ ಮುಂದೆ ಬಂದಿದ್ದು. ರಾಣಿ ಅಕ್ಕ ಕಾರ್ಯಕ್ರಮಕ್ಕೆ ಬರುತ್ತಿದ್ದಂತೆ ಜಗತ್ತಿಗೆ ಅಕ್ಕನನ್ನು ತೋರಿಸಬಾರದು ಎಂದುಕೊಂಡಿದ್ದೆ. ಅಂತ ಧನಂಜಯ್ ಹೇಳಿದರು. ಇವಳು ನಂಗೆ ಅಕ್ಕ ಅಲ್ಲ ನಮ್ಮ ಮನೆ ಮಗು. ನನ್ನ ಮಗಳು” ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Weekend With Ramesh: ಈ ವಾರಾಂತ್ಯಕ್ಕೆ ತೆರೆದುಕೊಳ್ಳಲಿದೆ ನಟ ‘ಡಾಲಿ’ ಧನಂಜಯ್ ಬದುಕಿನ ಪುಟಗಳು
ರಾಣಿಗೆ ಕಾಯಿನ್ ಎಂದರೆ ತುಂಬ ಇಷ್ಟ
ರಾಣಿ ಅಕ್ಕನ ಕುರಿತು ಡಾಲಿ ಮಾತು ಮುಂದುವರಿಸಿ ʻʻರಾಣಿ ಅವರಿಗೆ ಕಣ್ಣು ಕಾಣಿಸಲ್ಲ. ಆದರೆ ಮಾತು ಮಗುವಿನಂತೆ ಆಡುತ್ತಾರೆ. ಸಿನಿಮಾದ ವಿಚಾರಕ್ಕೆ ಬಂದರೆ ರಾಣಿಗೆ ಹೊಯ್ಸಳ ಸಿನಿಮಾ ಇಷ್ಟ. ಅದನ್ನು ಮಲ್ಲಮ್ಮಜ್ಜಿ ಹೇಳಿಕೊಟ್ಟಿದ್ದಾರೆ. ಹಾಗೆ ಆಕೆಗೆ ಕಾಯಿನ್ ಇಷ್ಟ. ಸೌಂಡ್ ಮಾಡುತ್ತ ಕೂರುತ್ತಾಳೆ. ಕಾಯಿನ್ ಕೇಳಿದರೆ ಯಾರಿಗೂ ಕೊಡಲ್ಲ” ಎಂದರು. ವೇದಿಕೆ ಮೇಲೆ ರಮೇಶ್ ಅರವಿಂದ್ ಅವರು ರಾಣಿ ಅವರಲ್ಲಿ ಕಾಯಿನ್ ಕೇಳಿದ ಕೂಡಲೇ ಮಗುವಿನಂತೆ ಅವರ ಕೈಯಲ್ಲಿ ಕಾಯಿನ್ ಕೊಟ್ಟದ್ದು, ಡಾಲಿ ಅವರ ಮುಖದಲ್ಲಿ ನಗು ತರಿಸಿತು.