Site icon Vistara News

Weekend With Ramesh: ಈತನ ಜತೆ ಈಗ ದೇವರಿದ್ದಾನೆ, ಮುಂದೆ ದೇವರ ಜತೆ ಈತ ಇರುತ್ತಾನೆ: ಮಗನ ಬಗ್ಗೆ ಅವಿವಾಶ್‌, ಮಾಳವಿಕಾ ಹೀಗೆ ಹೇಳಿದ್ದೇಕೆ?

Malvika Avinash revealed about the health of the special child son

ಬೆಂಗಳೂರು: ವೀಕೆಂಡ್‌ ವಿತ್‌ ರಮೇಶ್‌ (Weekend With Ramesh) ಶೋನಲ್ಲಿ ಏಪ್ರಿಲ್‌ 22ರಂದು ಸ್ಯಾಂಡಲ್‌ವುಡ್‌ ಹಿರಿಯ ನಟ ಅವಿನಾಶ್‌ ಅತಿಥಿಯಾಗಿ ಭಾಗಿಯಾಗಿದ್ದರು. ತಮ್ಮ ವಿಶೇಷ ಚೇತನ ಮಗನ ಕುರಿತು ಮಾಳವಿಕಾ ಹಾಗೂ ಅವಿನಾಶ್‌ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದು, ವೀಕ್ಷಕರನ್ನು ಭಾವುಕರನ್ನಾಗಿಸಿತು.

14 ವರ್ಷದ ಮಗ ಗಾಲವ್ ಬಗ್ಗೆ ಮಾತನಾಡುವಾಗ ಅವಿನಾಶ್ ದಂಪತಿ ಕೂಡ ಭಾವುಕರಾಗಿದ್ದರು. ಮಾಳವಿಕಾ ಮಾತನಾಡಿ ʻʻಇದೇ ಮೊದಲನೇ ಬಾರಿ ಗಾಲವ್‌ ಸೆಟ್‌ಗೆ ಬಂದಿದ್ದಾನೆ. ಈಗ ಅವನಿಗೆ 14 ವರ್ಷ. ಗಾಲವ್ ಹುಟ್ಟಿದಾಗ ಎಲ್ಲಾ ಮಕ್ಕಳ ತರಹ ಇರಲಿಲ್ಲ. ಒಬ್ಬೊಬ್ಬರು ಒಂದೊಂಥರ ಅವನ ಬಗ್ಗೆ ಮಾತನಾಡಿದರು. ಒಬ್ಬರು ಯಾವುದೋ ಯೋಗಿ ತರಹ ಇದ್ದಾನೆ ಅಂದರು. ಇನ್ನೊಬ್ಬರು ನಾರ್ಮಲ್‌ ಅಲ್ಲವೇ ಅಲ್ಲ ಎಂದರು. 2018ರಲ್ಲಿ 50 ದಿವಸ ಐಸಿಯುನಲ್ಲಿ ಇದ್ದ. ಯಾವ ಅಪ್ಪ ಅಮ್ಮಾನೂ ಮಾಡದೇ ಇರುವ ವಿಶೇಷ ಟೆಸ್ಟ್‌ ಮಾಡಿಸಿದ್ವಿ ನಾವು. ಯಾವ ಕಾರಣಕ್ಕೆ ಮಗು ಹೀಗೆ ಹುಟ್ಟತ್ತದೆ ಎಂದು ತಿಳಿಯುವುದಕ್ಕಾಗಿ. ಜೆನೆಟಿಕ್ ಟೆಸ್ಟ್ ಮಾಡಿದಾಗ ಗೊತ್ತಾಯಿತು Wolf Hirschhorn Syndromeನಿಂದ ಮಗು ಬಳಲುತ್ತಿದೆ ಅಂತ. ಇವನನ್ನು ನೋಡಿದ ತಕ್ಷಣ ನಿಮಾನ್ಸ್‌ನಲ್ಲಿ ವೈದ್ಯರು ಈ ಬಗ್ಗೆ ಹೇಳಿದರು. ನಮಗೆ ಯಾರೂ ನ್ಯೂರಾಲಜಿಸ್ಟ್ ಈ ಬಗ್ಗೆ ಹೇಳಿರಲಿಲ್ಲ. ಈ ಸಿಂಡ್ರೋಮ್‌ನಲ್ಲಿ ಬುದ್ಧಿ ಮಾಂದ್ಯತೆ ಇರುತ್ತದೆ. ಮಾತು ಅಂತೂ ಬರುವುದೇ ಇಲ್ಲ. ನಡಿಗೆ ಸ್ವಲ್ಪ ಮಟ್ಟಿಗೆ ಇರುತ್ತದೆ. ಆಯಸ್ಸಿನ ಬಗ್ಗೆ ನಮಗೇನೂ ನಿಶ್ಚಯವಿಲ್ಲʼʼ ಎಂದರು.

ಬಳಿಕ ಅವಿನಾಶ್‌ ಮಾತನಾಡಿ ʻʻಈಗ ದೇವರು ಅವನ ಜತೆ ಇದ್ದಾನೆ. ಮುಂದೆ ದೇವರ ಜತೆ ಈತ ಹೋಗ್ತಾನೆʼʼ ಎಂದು ಭಾವುಕರಾಗಿ ಹೇಳಿದರು. ಮಾಳವಿಕಾ ಮಾತು ಮುಂದುವರಿಸಿ ʻʻಅಪ್ಪ – ಅಮ್ಮ ಇದರ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಜೆನೆಟಿಕ್‌ ಟೆಸ್ಟ್‌ ಮಾಡಿಸಿದಾಗ, ನಮ್ಮಿಬ್ಬರಲ್ಲಿ ಯಾರ ಜೀನ್‌ ಕೂಡ ಇದಕ್ಕೆ ಕಾರಣ ಅಲ್ಲ ಎನ್ನುವುದು ತಿಳಿಯಿತು. ಜಗತ್ತಿನಲ್ಲಿ ಕೇವಲ ಎರಡು ಸಾವಿರ ಮಕ್ಕಳು ಈ ರೀತಿ ಇದ್ದಾರೆʼʼ ಎಂದು ವೈದ್ಯರು ತಿಳಿಸಿದರುʼʼ ಎಂದು ಹೇಳಿದರು.

ಇದನ್ನೂ ಓದಿ: Weekend With Ramesh: ಇಂಗ್ಲಿಷ್ ಗೆದ್ದ ರೋಚಕ ಕಥೆ ಜತೆ ಯು ಆರ್‌ ಅನಂತ ಮೂರ್ತಿಯ ನೆನೆದ ಅವಿನಾಶ್‌!

ಮನೆಯಲ್ಲಿ ಗಾಲವ್‌ನನ್ನು ನೋಡಿಕೊಳ್ಳುವ ಕಾಳಿ ಎಂಬ ಮಹಿಳೆಯನ್ನು ಈ ಸಂದರ್ಭದಲ್ಲಿ ಪರಿಚಯಿಸಲಾಯಿತು. ಈ ಬಗ್ಗೆ ಮಾಳವಿಕಾ ಮಾತನಾಡಿ ʻʻನಾನು ಹೆತ್ತಿದ್ದೇನೆ ಅಷ್ಟೇ. ಹುಟ್ಟಿದಾಗಿನಿಂದ ಗಾಲವ್‌ನನ್ನು ನೋಡಿಕೊಂಡಿರುವುದು ಇವರು. ಇವರು ನಮ್ಮ ಮನೆಯ ಯಶೋದೆ ಇದ್ದಂತೆ ʼʼ ಎಂದರು.

Exit mobile version