ಬೆಂಗಳೂರು: ʻವೀಕೆಂಡ್ ವಿತ್ ರಮೇಶ್ʼ ಶೋದಲ್ಲಿ (Weekend With Ramesh) ಈ ವಾರ ಲವ್ಲಿ ಸ್ಟಾರ್ ಪ್ರೇಮ್ ಅತಿಥಿಯಾಗಿ ಬರಲಿದ್ದಾರೆ. ಈಗಾಗಲೇ ಜೀ ವಾಹಿನಿ ಪ್ರೋಮೊ ಹಂಚಿಕೊಂಡಿದ್ದು, ತಮ್ಮ ಹಳೆಯ ದಿನಗಳ ಬಗ್ಗೆ ಹಂಚಿಕೊಂಡರು. ಅಷ್ಟೇ ಅಲ್ಲದೇ ಕಷ್ಟದ ಪರಿಸ್ಥಿತಿ ಎದುರಾದಾಗ ಪ್ರೇಮ್ ಅವರ ಪತ್ನಿ ಜ್ಯೋತಿ ತಾಳಿ ಅಡವಿಟ್ಟದ್ದ ಸಂಗತಿಯನ್ನು ವಿವರಿಸಿ ಭಾವುಕರಾದರು.
ನೆನಪಿರಲಿ ಪ್ರೇಮ್ , ಲವ್ಲಿ ಸ್ಟಾರ್ ಪ್ರೇಮ್ ಎಂದು ಪ್ರಸಿದ್ಧಿಯಾಗಿದ್ದಾರೆ. ನೆನಪಿರಲಿ ಪ್ರೇಮ್ 2004ರಲ್ಲಿ ಪ್ರಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದರು. ಆರಂಭದಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ ಪ್ರೇಮ್ ಬರಬರುತ್ತ ಚಿತ್ರರಂಗದಲ್ಲಿ ಸೋಲುಗಳನ್ನು ಅನುಭವಿಸಿದರು. 2005ರಲ್ಲಿ ಬಂದ ನೆನಪಿರಲಿ ಸಿನಿಮಾ ಪ್ರೇಮ್‌ಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಬಳಿಕ ಜೊತೆ ಜೊತೆಯಲಿ, ಪಲ್ಲಕ್ಕಿ, ಗುಣವಂತ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದರು. ಪ್ರೇಮ್ ಕೊನೆಯದಾಗಿ ಪ್ರೇಮಂ ಪೂಜ್ಯಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಅವರ ಮಗಳು ಕೂಡ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮನೆಯವರ ವಿರೋಧ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ಗಂಡನ ಕನಸಿಗೋಸ್ಕರ ಪತ್ನಿ ಜ್ಯೋತಿ ತಾಳಿ ಸರವನ್ನು ಅಡವಿಟ್ಟಿರುವ ಸಂಗತಿಯನ್ನು ಪ್ರೇಮ್ ಶೋನಲ್ಲಿ ಹೇಳಿಕೊಂಡಿದ್ದಾರೆ. ಮೂರು ವರ್ಷ ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡು ಈ ಜೋಡಿ ಮದುವೆ ಆಗಿತ್ತು. ಡಾ ರಾಜ್‌ಕುಮಾರ್ ಅವರು ಕಿಡ್ನ್ಯಾಪ್ ಆದ 2 ದಿನಕ್ಕೆ ಪ್ರೇಮ್ ಅವರ ಮದುವೆ ನಡೆದಿತ್ತು. ಆಗ ಕರ್ನಾಟಕ ಬಂದ್ ಕೂಡ ಆಗಿತ್ತು. ಮದುವೆಯಾಗಿ ಕೆಲ ವರ್ಷಗಳ ಕಾಲ ಪ್ರೇಮ್, ಜ್ಯೋತಿ ಮದುವೆ ರಿಜಿಸ್ಟರ್ ಆಗಿರಲಿಲ್ಲ, 14ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಈ ಜೋಡಿ ಮದುವೆಯನ್ನು ರಿಜಿಸ್ಟರ್ ಮಾಡಿತ್ತು ಎಂದು ಹಂಚಿಕೊಂಡಿದೆ.
ಇದನ್ನೂ ಓದಿ: Weekend With Ramesh: ಈ ವೀಕೆಂಡ್ ನೆನಪುಗಳನ್ನು ಮೆಲುಕು ಹಾಕೋಕೆ ಬರುತ್ತಿರುವ ಗೆಸ್ಟ್ ಯಾರು?
ವೀಕೆಂಡ್ ವಿತ್ ರಮೇಶ್ ಪ್ರೊಮೊ
ಪುತ್ರಿ ಸಿನಿರಂಗಕ್ಕೆ ಎಂಟ್ರಿ
ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಟಗರು ಪಲ್ಯ’ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ (Nenapirali Prem) ಪುತ್ರಿ ಅಮೃತಾ ನಾಯಕಿಯಾಗಿದ್ದಾರೆ. ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತಾ ಅವರನ್ನು ಚಿತ್ರೋದ್ಯಮಕ್ಕೆ ಪರಿಚಯ ಮಾಡುತ್ತಿರುವುದು ಡಾಲಿ ಧನಂಜಯ್ ಎನ್ನುವುದು ವಿಶೇಷ. ಶೋನಲ್ಲಿ ಪ್ರೇಮ್ ಅವರ ಆತ್ಮೀಯ ಸ್ನೇಹಿತರಾದ ಮಾಸ್ಟರ್ ಆನಂದ್, ಶರಣ್ ಮೊದಲಾದವರು ವೇದಿಕೆ ಮೇಲೆ ಇದ್ದರು.
ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಈಗಾಗಲೇ ರಮ್ಯಾ, ಪ್ರಭುದೇವ, ವೈದ್ಯ ಮಂಜುನಾಥ್, ಡಾಲಿ ಧನಂಜಯ್, ದತ್ತಣ್ಣ, ಮಂಡ್ಯ ರಮೇಶ್, ಸಿಹಿ-ಕಹಿ ಚಂದ್ರು, ಗುರುರಾಜ ಕರಜಗಿ, ಅವಿನಾಶ್ ಅವರು ಆಗಮಿಸಿ ಸಾಧಕರ ಕುರ್ಚಿಯ ಮೇಲೆ ಕುಳಿತಿದ್ದಾರೆ. ಇದೀಗ ನೆನಪಿರಲಿ ಪ್ರೇಮ್ ಸಾಧಕರ ಕುರ್ಚಿಯನ್ನು ಅಲಂಕರಿಸಲಿದ್ದಾರೆ.