ಬೆಂಗಳೂರು: ʻಜೊತೆ ಜೊತೆಯಲಿʼ ಧಾರಾವಾಹಿ ಖ್ಯಾತಿಯ ನಟ ಅನಿರುದ್ಧ (Anirudh Jatkar) ಅವರನ್ನು ನಿರ್ಮಾಪಕರ ಸಂಘ ದೂರೀಕರಿಸಿ, ಎರಡು ವರ್ಷಗಳ ಕಾಲ ಅವರಿಗೆ ಯಾರೂ ಕೆಲಸ ಕೊಡಬಾರದು ಎಂದು ಹೇಳಿತ್ತು. ಇದರ ಬೆನ್ನಲ್ಲೇ ʻಸೂರ್ಯವಂಶʼ ಧಾರಾವಾಹಿಗೆ ಅನಿರುದ್ಧ ಅವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿತ್ತು. ಇದೀಗ ಈ ಧಾರಾವಾಹಿಗೆ ನಾಯಕಿಯಾಗಿ ಪಲ್ಲವಿ ಗೌಡ (pallavi gowda) ಎಂಟ್ರಿ ಕೊಡುತ್ತಿದ್ದಾರೆ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೇವಂತಿ ಧಾರಾವಾಹಿಯಲ್ಲಿ ಅಭಿನಯಸಿದ್ದ ಪಲ್ಲವಿ ಗೌಡ ಸೇವಂತಿ ಪಾತ್ರಕ್ಕೆ ವಿದಾಯ ಹೇಳಿದ್ದರು. ತೆಲುಗಿನ ‘ಚದುರಂಗಂ’ ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ ಪಲ್ಲವಿ ಗೌಡ, ಇದೀಗ ‘ಸೂರ್ಯವಂಶ’ ಧಾರಾವಾಹಿ ಮೂಲಕ ಕಿರುತೆರೆಗೆ ಬರಲಿದ್ದು, ನಟ ಅನಿರುದ್ಧ್ ಜತ್ಕರ್ ಅವರಿಗೆ ಜೋಡಿಯಾಗಲಿದ್ದಾರೆ.
ಗಾಳಿಪಟ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಒಟ್ಟಿದ್ದರು ಪಲ್ಲವಿ ಗೌಡ. ‘ಮನೆಯೊಂದು ಮೂರು ಬಾಗಿಲು’, ‘ಸೇವಂತಿ’, ‘ಚಂದ್ರ ಚಕೋರಿ’, ಆರೂರು ಜಗದೀಶ್ ನಿರ್ದೇಶನದ ʼಜೋಡಿಹಕ್ಕಿʼ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದರು. ಹಲವು ಸಿನಿಮಾಗಳಲ್ಲಿಯೂ ನಟಿಸಿ ಸೈ ಎನೆನಸಿಕೊಂಡಿದ್ದಾರೆ.
ಇದನ್ನೂ ಓದಿ: Anirudh Jatkar | ʻಆರೂರು ಜಗದೀಶ್ ನನ್ನ ಮಾನಹಾನಿ ಮಾಡಿದ್ದಾರೆʼ: ನಟ ಅನಿರುದ್ಧ
ಇದನ್ನೂ ಓದಿ: Anirudh Jatkar | ನಿರ್ಮಾಪಕರ ಸಂಘದ ಸದಸ್ಯರು ಗೈರು: ʻಬ್ಯಾನ್ ಮಾಡುವಂತಹ ಕೆಲಸ ಏನು ಮಾಡಿದ್ದೇನೆ ನಾನು: ಅನಿರುದ್ಧ
ಅನಿರುದ್ಧ ಅವರು ಡಿಸೆಂಬರ್ 8 ಸೋಷಿಯಲ್ ಮೀಡಿಯಾದಲ್ಲಿ ʻಸೂರ್ಯವಂಶʼ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ʻʻಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತ ಇದ್ದೇನೆ.…ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್‌ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತದೆ ಎನ್ನುವ ಭರವಸೆ ನನಗಿದೆʼʼ ಎಂದು ಬರೆದುಕೊಂಡಿದ್ದರು.