ಬೆಂಗಳೂರು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮೇ 11ರಂದು ಗುವಾಹಟಿಯಲ್ಲಿ ತಮ್ಮ ಕುಟುಂಬ ಮತ್ತು ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು (The Kerala Story) ವೀಕ್ಷಿಸಿದರು. ʻʻಈ ಸಿನಿಮಾವನ್ನು ನಿಷೇಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಈ ಸಿನಿಮಾ ಯಾವುದೇ ಸಮುದಾಯದ ವಿರುದ್ಧವಿಲ್ಲ. ಆದರೆ ಭಯೋತ್ಪಾದನೆಯ ವಿರುದ್ಧವಾಗಿದೆʼʼ ಎಂದು ಅವರು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಉಲ್ಲೇಖಿಸಿ ಸುದೀಪ್ತೋ ಸೇನ್-ನಿರ್ದೇಶನದ ದಿ ಕೇರಳ ಸ್ಟೋರಿ ಸಿನಿಮಾವನ್ನು ಪಶ್ಚಿಮ ಬಂಗಾಳ ಸರ್ಕಾರ ನಿಷೇಧಿಸಿರುವುದನ್ನು ಉಲ್ಲೇಖಿಸಿ ಹಿಮಂತ ಬಿಸ್ವಾ ಶರ್ಮಾ ಈ ಹೇಳಿಕೆಯನ್ನು ನೀಡಿದ್ದಾರೆ.ʻʻ ದಿ ಕೇರಳ ಸ್ಟೋರಿ ಮುಸ್ಲಿಂ ಸಮುದಾಯದವರೂ ಸೇರಿದಂತೆ ಮುಗ್ಧ ಹುಡುಗಿಯರ ವಿರುದ್ಧ ನಡೆಸಲಾದ ಷಡ್ಯಂತ್ರವನ್ನು ತೋರಿಸುತ್ತದೆʼʼ ಎಂದು ಶರ್ಮಾ ಹೇಳಿದ್ದಾರೆ. ʻʻಬಂಗಾಳ ಸರ್ಕಾರದಲ್ಲಿರುವವರು ಚಿತ್ರವನ್ನು ನಿಷೇಧಿಸುವ ಮೊದಲು ಈ ಸಿನಿಮಾ ನೋಡಬೇಕಿತ್ತುʼʼ ಎಂದು ಶರ್ಮಾ ಹೇಳಿದರು. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳು ಚಿತ್ರಕ್ಕೆ ತೆರಿಗೆ ಮುಕ್ತ ಎಂದು ಘೋಷಿಸಿವೆ.
ಹಿಮಾಂತ ಬಿಸ್ವಾ ಶರ್ಮಾ ಅವರು ತಮ್ಮ ಕುಟುಂಬದೊಂದಿಗೆ, ವಿಶೇಷವಾಗಿ ನಿಮ್ಮ ಮಗಳೊಂದಿಗೆ ಈ ಚಿತ್ರವನ್ನು ವೀಕ್ಷಿಸಿ ಎಂದು ಜನರಿಗೆ ಮನವಿ ಮಾಡಿದರು. ಮಕ್ಕಳ ಮೇಲೆ ನಿಗಾ ಇಡಬೇಕು ಮತ್ತು ಯಾರೊಂದಿಗೆ ಸ್ನೇಹ ಬೆಳೆಸಬೇಕು ಎಂಬುದು ಅರಿವು ಮಕ್ಕಳಿಗೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಪೋಷಕರನ್ನು ಒತ್ತಾಯಿಸಿದರು.
ಸಿನಿಮಾ ಬಿಡುಗಡೆಗೂ ಮುನ್ನವೇ ಅನೇಕರು ವಿವಿಧ ಹೈಕೋರ್ಟ್, ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿ, ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಕೋರಿದ್ದರು. ಆದರೆ ಫಲಪ್ರದ ವಾಗಿರಲಿಲ್ಲ. ಆದರೆ ದೇಶಕ್ಕೆ ಒಂದು ದಾರಿಯಾದರೆ ಪಶ್ಚಿಮ ಬಂಗಾಳಕ್ಕೇ ಮತ್ತೊಂದು ದಾರಿ ಎಂಬಂತೆ ವರ್ತಿಸುವ ಮಮತಾ ಬ್ಯಾನರ್ಜಿ ಈ ವಿಚಾರದಲ್ಲೂ ಅದನ್ನೇ ಮಾಡಿದ್ದಾರೆ. ಚಿತ್ರ ಬಿಡುಗಡೆಯಾದ ಮೂರು ದಿನಗಳ ಬಳಿಕ ಅದರ ಪ್ರದರ್ಶನವನ್ನು ಪಶ್ಚಿಮ ಬಂಗಾಳದಲ್ಲಿ ಬ್ಯಾನ್ ಮಾಡಿದ್ದಾರೆ.
ಇದನ್ನೂ ಓದಿ: The Kerala Story : ಯಾವ ಒಟಿಟಿಯಲ್ಲಿ ಪ್ರಸಾರವಾಗಲಿದೆ `ದಿ ಕೇರಳ ಸ್ಟೋರಿ’?
ಚಿತ್ರವನ್ನು ಭಾರತೀಯ ಜನತಾ ಪಕ್ಷ ಮತ್ತು ಇತರ ಬಲಪಂಥೀಯ ಸಂಘಟನೆಗಳು ಹೊಗಳಿವೆ. ಸುದೀಪ್ತೋ ಸೇನ್ ನಿರ್ದೇಶಿಸಿದ ಮತ್ತು ವಿಪುಲ್ ಶಾ ನಿರ್ಮಿಸಿದ ಈ ಚಲನಚಿತ್ರ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ 56 ಕೋಟಿ ರೂ. ಗಳಿಕೆ ಮಾಡಿದೆ. ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ/ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್ಗೆ ಮತಾಂತರ ಮಾಡುವ/ಲವ್ ಜಿಹಾದ್ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಸಿನಿಮಾ ಒಳಗೊಂಡಿದೆ.