ಬೆಂಗಳೂರು: ʻದಿ ಕೇರಳ ಸ್ಟೋರಿʼ ಸಿನಿಮಾ (The Kerala Story) ಹಲವಾರು ವಿವಾದಗಳ ನಡುವೆ ಚಿತ್ರಮಂದಿರಗಳಿಗೆ ಅಪ್ಪಳಿಸಿತು. ಮೇ 5ರಂದು ಚಿತ್ರ ಬಿಡುಗಡೆಗೊಂಡಿದ್ದು, ಮೊದಲ ದಿನ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ 8 ಕೋಟಿ ರೂ. ಕಲೆಕ್ಷನ್ (Box Office Collection) ಮಾಡಿದೆ. ಎರಡನೇ ದಿನ ಕಲೆಕ್ಷನ್ನಲ್ಲಿ ಗಣನೀಯ ಏರಿಕೆ ಕಂಡಿದೆ. ಎರಡನೇ ದಿನ ಈ ಸಿನಿಮಾ 12 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಒಟ್ಟು 20 ಕೋಟಿ ರೂ. ಗಳಿಕೆ ಕಂಡಿದೆ. ಎಂದು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಕೇರಳದಿಂದ ಕಾಣೆಯಾದ ಹುಡುಗಿಯರ ನಿಜ ಜೀವನದ ಅನುಭವವನ್ನು ಆಧರಿಸಿದೆ ಈ ಸಿನಿಮಾ. ನರ್ಸ್ ಆಗುವ ಕನಸು ಹೊತ್ತ ಶಾಲಿನಿ ಉನ್ನಿಕೃಷ್ಣನ್ ಎಂಬ ಗ್ರಾಮೀಣ ಹುಡುಗಿ, ವಿದೇಶದಲ್ಲಿರುವ ಐಸಿಸ್ ಭಯೋತ್ಪಾದಕ ಶಿಬಿರಕ್ಕೆ ಸೇರಿಹೋದ, ಅಲ್ಲಿಂದ ಹೊರಬರಲಾಗದೆ ಪರಿತಪಿಸುವ ಕತೆಯನ್ನು ಕೇರಳ ಸ್ಟೋರಿ ಹೊಂದಿದೆ. ಕೇರಳದ ಹಿಂದು ಯುವತಿಯರನ್ನು ಕಳ್ಳಸಾಗಣೆ ಮಾಡಿ, ಮತಾಂತರಿಸಿ, ಭಯೋತ್ಪಾದಕ ಶಿಬಿರಗಳಿಗೆ ಕಳುಹಿಸಲಾಗುತ್ತಿದೆ ಎಂಬ ಸುದ್ದಿಗಳು ಸಾಕಷ್ಟಿವೆ. ಅಂಥ ನೈಜ ಪ್ರಕರಣಗಳೂ ವರದಿಯಾಗಿವೆ. ಅದೇ ಹಿನ್ನೆಲೆಯಲ್ಲಿ ಈ ಚಿತ್ರ ಹುಟ್ಟಿಕೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: The Kerala Story: ದಿ ಕೇರಳ ಸ್ಟೋರಿ ಸಿನಿಮಾ ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತ; ಎಲ್ಲರೂ ನೋಡಿ ಎಂದ ಸಿಎಂ ಚೌಹಾಣ್
ಈ ಸಿನಿಮಾದಲ್ಲಿದ್ದ 10 ದೃಶ್ಯಗಳಿಗೆ ಕತ್ತರಿ
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC-ಸೆನ್ಸಾರ್ ಮಂಡಳಿ-Censor Board) ದಿ ಕೇರಳ ಸ್ಟೋರಿಗೆ ಎ ಸರ್ಟಿಫಿಕೇಟ್ (A certificate To The Kerala Story) ಕೊಟ್ಟಿದೆ. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿದ್ದ 10 ದೃಶ್ಯಗಳಿಗೆ ಕತ್ತರಿ ಹಾಕಿದೆ. ಕೇರಳದ ಮಾಜಿ ಮುಖ್ಯಮಂತ್ರಿಯೊಬ್ಬರ ಸಂದರ್ಶನದ ದೃಶ್ಯವೂ ಸೇರಿ 10 ದೃಶ್ಯಗಳನ್ನು ತೆಗೆದುಹಾಕಲಾಗಿದೆ.
‘ಎಲ್ಲ ಹಿಂದು ದೇವತೆಗಳನ್ನು ಅನುಚಿತವಾಗಿ ಉಲ್ಲೇಖಿಸಿ ಬರೆದ ಸಂಭಾಷಣೆಗಳನ್ನೂ ಸೆನ್ಸಾರ್ ಮಂಡಳಿ ತೆಗೆದಿದೆ. ಅಷ್ಟೇ ಅಲ್ಲ, ಭಾರತದಲ್ಲಿರುವ ಎಲ್ಲ ಕಮ್ಯೂನಿಸ್ಟ್ಗಳೂ ದೊಡ್ಡ ಕಪಟಿಗಳು ಎಂದು ಹೇಳಿರುವ ಒಂದು ಡೈಲಾಗ್ನಲ್ಲಿರುವ ಭಾರತೀಯರು (Indians) ಎಂಬ ಶಬ್ದವನ್ನು ಡಿಲೀಟ್ ಮಾಡಲಾಗಿದೆ. ವಿವಾದ ಸೃಷ್ಟಿಸುವ ಹಲವು ಸಂಭಾಷಣೆ ಮತ್ತು ದೃಶ್ಯಗಳು ಸಿನಿಮಾದಿಂದ ಕತ್ತರಿಸಲ್ಪಟ್ಟಿವೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹಾಗೇ, ಸಿನಿಮಾದಲ್ಲಿ ಒಂದು ಟಿವಿ ಸಂದರ್ಶನದ ದೃಶ್ಯವಿತ್ತು. ಅದು ಮಾಧ್ಯಮವರು ಕೇರಳದ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಸಂದರ್ಶಿಸುವ ಚಿತ್ರಣ. ಮಾಧ್ಯಮದವರು ಕೇಳುವ ಪ್ರಶ್ನೆಗೆ ಉತ್ತರಿಸುವ ಆ ಮಾಜಿ ಸಿಎಂ ‘ಕೇರಳದಲ್ಲಿ ಯುವಜನರನ್ನು ದೊಡ್ಡಮಟ್ಟದಲ್ಲಿ ಇಸ್ಲಾಮ್ಗೆ ಮತಾಂತರಗೊಳಿಸಲಾಗುತ್ತಿದೆ. ಹೀಗಾಗಿ ಈ ರಾಜ್ಯ ಇನ್ನೆರಡು ದಶಕದಲ್ಲಿ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗುತ್ತದೆ’ ಎಂದು ಹೇಳುತ್ತಾರೆ. ಆದರೆ ಈ ದೃಶ್ಯವನ್ನು ಸೆನ್ಸಾರ್ ಮಂಡಳಿ ತೆಗೆಸಿದೆ. ಸಿನಿಮಾದಲ್ಲಿ ಈ ಟಿವಿ ಸಂದರ್ಶನದ ಚಿತ್ರಣ ಪ್ರಸಾರವಾಗಲೇಬಾರದು ಎಂದು ಆದೇಶಿಸಿದೆ.