Site icon Vistara News

The Kerala Story : ಕಮಲ ಹಾಸನ್‌ಗೆ ಮಾತಿನ ತಿರುಗೇಟು ಕೊಟ್ಟ ನಿರ್ದೇಶಕ ಸುದೀಪ್ತೋ ಸೇನ್

#image_title

ಮುಂಬೈ: ನಿರ್ದೇಶಕ ಸುದೀಪ್ತೋ ಸೇನ್ ಅವರ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಬಿಡುಗಡೆಯಾದಾಗಿನಿಂದಲೂ ವಿವಾದದ ಸುಳಿಯಲ್ಲೇ ಸಿಲುಕಿಕೊಂಡಿದೆ. ಮತಾಂತರದ ಕುರಿತಾಗಿಯೇ ಮಾಡಲಾಗಿರುವ ಈ ಸಿನಿಮಾವನ್ನು ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ರಾಜ್ಯಗಳು ನಿಷೇಧಿಸಿವೆ ಕೂಡ. ಅದೇ ರೀತಿಯಲ್ಲಿ ಹಲವು ಗಣ್ಯರು ಕೂಡ ಈ ಸಿನಿಮಾದ ಕುರಿತಾಗಿ ವಿರೋಧ ಹೊರಹಾಕಿದ್ದಾರೆ. ಹಾಗೆಯೇ ನಟ ಕಮಲ ಹಾಸನ್‌ ಅವರೂ ಸಿನಿಮಾವನ್ನು ಪ್ರೊಪೊಗಂಡಾ ಸಿನಿಮಾ ಎಂದು ಕರೆದಿದ್ದು, ಅದಕ್ಕೆ ಸುದೀಪ್ತೋ ಅವರು ಮಾತಿನ ತಿರುಗೇಟು ಕೊಟ್ಟಿದ್ದಾರೆ.

ಅಬುಧಾಬಿಯಲ್ಲಿ ದಿ ಕೇರಳ ಸ್ಟೋರಿ ಸಿನಿಮಾದ ಬಗ್ಗೆ ಮಾತನಾಡಿದ್ದ ಕಮಲ ಹಾಸನ್‌ ಅವರು, “ನಾನು ಪ್ರೊಪೊಗಂಡಾ ಸಿನಿಮಾಗಳನ್ನು ಪ್ರೋತ್ಸಾಹಿಸುವುದಿಲ್ಲ. ಸಿನಿಮಾ ಟೈಟಲ್‌ ಕೆಳಗೆ ʼನೈಜ ಕಥೆʼ ಎಂದು ಲೋಗೋ ರೀತಿಯಲ್ಲಿ ಬರೆದುಬಿಟ್ಟರೆ ಸಾಲದು. ಸಿನಿಮಾ ನಿಜವಾಗಿಯೂ ಸತ್ಯವಾಗಿರಬೇಕು. ಆದರೆ ಇದು ನಿಜವಾದ ಕಥೆಯಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: The Kerala Story : ಕೇರಳ ಸ್ಟೋರಿ ಸಿನಿಮಾ ನೋಡಲು ರಜೆ ಕೊಟ್ಟ ಕಾಲೇಜು, ವಿರೋಧ ವ್ಯಕ್ತವಾದ ಬಳಿಕ ಹಿಂದೇಟು
ಇದರ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್ತೊ ಅವರು, “ನಾನು ಈ ರೀತಿಯ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಮೊದ ಮೊದಲು ಇದರ ಬಗ್ಗೆ ನಾನು ವಿವರಣೆ ನೀಡುತ್ತಿದ್ದೆ. ಆದರೆ ಈಗ ಹಾಗೆ ಮಾಡುವುದಿಲ್ಲ. ಏಕೆಂದರೆ ಇದನ್ನು ಪ್ರೊಪೊಗಂಡಾ ಸಿನಿಮಾ ಎಂದು ದೂರಿದ ಜನರು ಕೂಡ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡದವರು ಅದನ್ನು ಟೀಕಿಸುತ್ತಾರೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆಯಾಗಿಲ್ಲ. ಹಾಗಾಗಿ ಅಲ್ಲಿನವರು ಸಿನಿಮಾ ನೋಡಿಲ್ಲ, ಅದಕ್ಕಾಗಿಯೇ ವಿರೋಧಿಸುತ್ತಾರೆ. ನಮ್ಮ ದೇಶದಲ್ಲಿ ಕೆಲವು ಮೂರ್ಖರಿದ್ದಾರೆ. ಅವರು ಜೀವನ ಕಪ್ಪಾಗಿರುತ್ತದೆ ಇಲ್ಲವೇ ಬಿಳಿಯಾಗಿರುತ್ತದೆ ಎಂದುಕೊಂಡಿದ್ದಾರೆ. ಆದರೆ ಜೀವನ ಬೂದು ಬಣ್ಣದಲ್ಲೂ ಇರುತ್ತದೆ ಎನ್ನುವುದು ಅವರಿಗೆ ತಿಳಿದೇ ಇಲ್ಲ” ಎಂದಿದ್ದಾರೆ.

ಹಾಗೆಯೇ ಮಾತು ಮುಂದುವರಿಸಿದ ಅವರು, “ಬಿಜೆಪಿಯವರು ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಇದು ಬಿಜೆಪಿಯವರ ಸಿನಿಮಾ ಎಂದೇನಲ್ಲ. ಕೇವಲ ಬಿಜೆಪಿಯಲ್ಲ, ಕಾಂಗ್ರೆಸ್‌ ಹಾಗೆಯೇ ಹಲವು ರಾಜಕೀಯ ಪಕ್ಷಗಳು, 37 ರಾಷ್ಟ್ರಗಳ ಜನರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಬಗ್ಗೆ ಬೇಸರವಿದ್ದರೂ ಅದನ್ನು ನನ್ನ ಬಳಿ ನೇರವಾಗಿ ಚರ್ಚೆ ಮಾಡುತ್ತಿದ್ದಾರೆ. ನೋಡದವರು ಸಿನಿಮಾವನ್ನು ಪ್ರೊಪೊಗಂಡಾ ಸಿನಿಮಾ ಎಂದು ಹೇಳಿದರೆ ನನಗೆ ಪಶ್ಚಾತಾಪವೇನಿಲ್ಲ. ಇದೊಂದು ಬೂಟಾಟಿಕೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: The Kerala Story : ಕೇರಳ ಸ್ಟೋರಿಯ ನಟಿ ಅದಾ ಶರ್ಮಾ ಮೊಬೈಲ್​ ನಂಬರ್​ ಲೀಕ್​, ಶುರುವಾಯ್ತು ಕಿರುಕುಳ
ಸುದೀಪ್ತೋ ಅವರು ಸತತವಾಗಿ ಸಿನಿಮಾ ಪ್ರಚಾರ ಮಾಡಿದ್ದರಿಂದಾಗಿ ಕೊಂಚ ಅನಾರೋಗ್ಯಕ್ಕೆ ತುತ್ತಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Exit mobile version