ಬೆಂಗಳೂರು: ಕಳೆದ ಕೆಲವು ವರ್ಷಗಳಲ್ಲಿ ಕೇರಳದಿಂದ ಕಾಣೆಯಾದ 32 ಸಾವಿರ ಹುಡುಗಿಯರ ಕಥೆಯನ್ನು ಹೇಳುವ ʻದಿ ಕೇರಳ ಸ್ಟೋರಿʼ (The Kerala Story) ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ಅದಾ ಶರ್ಮಾ (Adah Sharma) ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಸುದಿಪ್ತೋ ಸೇನ್ (Sudipto Sen) ನಿರ್ದೇಶನ ಇದೆ. ಟ್ರೈಲರ್‌ನಲ್ಲಿ ಹಿಂದೂ ಕುಟುಂಬದಲ್ಲಿ ಹುಟ್ಟಿ, ಶಿವನ ಆರಾಧನೆ ಮಾಡುವ ಹುಡುಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಐಸಿಸ್ (ISIS) ಸೇರುವ ಕಥೆಯನ್ನು ಈ ಸಿನಿಮಾ ಹೇಳುತ್ತಿದೆ. ಇದೇ ಮೇ 5 ರಂದು ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಬರಲು ಸಿದ್ಧವಾಗಿದೆ.
ದಿ ಕೇರಳ ಸ್ಟೋರಿ ಟ್ರೈಲರ್‌ನಲ್ಲಿ ಹಿಂದು ಹುಡುಗಿ ಅಧಾ ಶರ್ಮಾ ಹೇಗೆ ಮತಾಂತರಗೊಳ್ಳುತ್ತಾಳೆ ಎಂಬುದು ಇದೆ. ಈ ಸಿನಿಮಾ ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ಟ್ರೈಲರ್ ಬಿಡುಗಡೆಗೊಂಡ ಬೆನ್ನಲ್ಲೇ ಚರ್ಚೆಗೆ ಗುರಿಯಾಗಿದೆ. ಕೆಲ ದಿನಗಳ ಹಿಂದೆ ಈ ಸಿನಿಮಾದ ಟೀಸರ್ ರಿವೀಲ್ ಆದಾಗ ಚಿತ್ರದ ಕಥೆಯ ಬಗ್ಗೆ ಗಲಾಟೆ ನಡೆದಿತ್ತು. ಅದೇ ಸಮಯದಲ್ಲಿ, ಟೀಸರ್ ರಿಲೀಸ್ ಆಗುತ್ತಿದ್ದಂತೆ ಚಿತ್ರದ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು. ಈ ಸಿನಿಮಾ ಬ್ಯಾನ್ ಮಾಡುವಂತೆ ಒತ್ತಾಯ ಇಂದಿಗೂ ಮುಂದುವರೆದಿದೆ.
ಟ್ರೈಲರ್‌ನಲ್ಲಿ ಏನಿದೆ?
ಬಾಲಿವುಡ್‌ನ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹುಡುಗಿಯರನ್ನು ವಿದೇಶದ ಆಮಿಷವೊಡ್ಡಿ, ಮತಾಂತರಿಸಿ, ಬಲವಂತವಾಗಿ ಐಸಿಸ್ (ISIS) ಉಗ್ರಗಾಮಿಗಳಾಗಿಸುವ ಕಥೆ ಇದೆ. ಶಾಲಿನಿ ಉನ್ನೀಕೃಷ್ಣ ಪಾತ್ರಧಾರಿ (ಅದಾ ಶರ್ಮಾ) ಕೇರಳದ ಹುಡುಗಿ. ಆಕೆಗೆ ಶಿವನ ಮೇಲೆ ಅಪಾರ ಭಕ್ತಿ. ಶಿಕ್ಷಣ ಪಡೆಯಲು ಆಕೆ ಹಾಸ್ಟೆಲ್ ಸೇರುತ್ತಾಳೆ. ಅಲ್ಲಿ ಮುಸ್ಲಿಂ ಹುಡುಗಿಯ ಪರಿಚಯ ಆಗುತ್ತದೆ. ಶಾಲಿನಿ ಮೇಲೆ ನಿಧಾನವಾಗಿ ಮುಸ್ಲಿಂ ಧರ್ಮದ ಪ್ರಭಾವ ಬೀರಲು ಶುರು ಆಗುತ್ತದೆ. ಇದೇ ಸಂದರ್ಭದಲ್ಲಿ ಶಾಲಿನಿಗೆ ಸಾರ್ವಜನಿಕವಾಗಿಯೇ ಲೈಂಗಿಕ ಕಿರುಕುಳ ನೀಡಲಾಗುತ್ತದೆ. ‘ಹಿಜಾಬ್ ಹಾಕಿದವರ ಮೇಲೆ ಎಂದಿಗೂ ಅತ್ಯಾಚಾರ ಆಗಲ್ಲ. ಅವರನ್ನು ಯಾರೂ ಚುಡಾಯಿಸುವುದಿಲ್ಲ. ಏಕೆಂದರೆ ಅಲ್ಲಾ ದೇವರು ಯಾವಾಗಲೂ ಅವಳನ್ನು ಕಾಯುತ್ತಿರುತ್ತಾನೆ’ ಎಂದು ಮುಸ್ಲಿಂ ಹುಡುಗಿ ಹೇಳಿದ ಮಾತು ಶಾಲಿನಿ ಮೇಲೆ ಪ್ರಭಾವ ಬೀರುತ್ತದೆ.
ಶಾಲಿನಿ ಮತಾಂತರಗೊಂಡು ಫಾತಿಮಾ ಆಗಿ ಬದಲಾಗುತ್ತಾಳೆ. ಮುಸ್ಲಿಂ ಯುವಕನನ್ನು ಮದುವೆ ಆಗುತ್ತಾಳೆ. ಬಳಿಕ ಐಸಿಸ್ ಸೇರುತ್ತಾಳೆ. ಅಲ್ಲಿ ಅವಳು ಸಮಸ್ಯೆಗೆ ಗುರಿಯಾಗುತ್ತಾಳೆ. ಅಲ್ಲಿಂದ ತಪ್ಪಿಸಿಕೊಂಡು ಭಾರತಕ್ಕೆ ಮರಳುತ್ತಾಳೆ. ತನಿಖಾಧಿಕಾರಿ ಮುಂದೆ ತನ್ನ ಬದುಕಲ್ಲಿ ಏನಾಯಿತು ಎಂಬುದನ್ನು ಹೇಳುತ್ತಾಳೆ. ‘ದಿ ಕೇರಳ ಸ್ಟೋರಿ’ ಟ್ರೈಲರ್‌ನಲ್ಲಿ ಇಷ್ಟು ವಿಚಾರ ತೋರಿಸಲಾಗಿದೆ. ಟ್ರೈಲರ್ ನೋಡಿದಾಗ ಹಿಂದು ಮತ್ತು ಕ್ರಿಶ್ಚಿಯನ್ ಹುಡುಗಿಯರು ಹೇಗೆ ವ್ಯವಸ್ಥಿತವಾಗಿ ಮತಾಂತರಗೊಳ್ಳುತ್ತಾರೆ ಎಂಬು ಕಹಿ ಸತ್ಯದ ಅರಿವಾಗುತ್ತದೆ. 2 ನಿಮಿಷ 45 ಸೆಕೆಂಡ್‌ಗಳ ಕಾಲ ಈ ಟ್ರೈಲರ್ ಇದೆ.
ಇದನ್ನೂ ಓದಿ: Pathaan Film | ವಿವಾದಿತ ಪಠಾಣ್ ಸಿನಿಮಾ ಟ್ರೇಲರ್ ಬಿಡುಗಡೆ ದಿನಾಂಕ ಪ್ರಕಟ; ಚಿತ್ರ ರಿಲೀಸ್ ಯಾವಾಗ?
ಮೇ 5 ರಂದು ಸಿನಿಮಾ ತೆರೆಗೆ
ಈ ಸಿನಿಮಾ ಬ್ಯಾನ್ ಮಾಡುವಂತೆ ಒತ್ತಾಯ ಇಂದಿಗೂ ಮುಂದುವರೆದಿದೆ. ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್‌ಗೆ ಅನುಮತಿ ಕೊಡಬಾರದು ಎಂದು ಕೇರಳ ಮುಖ್ಯಮಂತ್ರಿಗೆ ಪತ್ರ ಕೂಡ ಬರೆಯಲಾಗಿತ್ತು. ಕೇರಳದಲ್ಲಿ ಕಾಣೆಯಾಗುವ 32,000 ಮಹಿಳೆಯರ ಘಟನೆಗಳನ್ನು ತೆರೆದಿಡಲಿದೆ. ಈ ಚಿತ್ರಕ್ಕೆ ಸನ್‌ಶೈನ್ ಪಿಕ್ಚರ್ಸ್‌ನ ಅಶಿನ್ ಎ ಶಾ ಸಹ ಬೆಂಬಲ ನೀಡಿದ್ದಾರೆ.
ಚಿತ್ರಕ್ಕೆ ವಿಪುಲ್ ಅಮೃತ್‌ಲಾಲ್ ಷಾ ಬಂಡವಾಳ ಹೂಡಿದ್ದಾರೆ ವಿಪುಲ್ ಷಾ ಮಾತನಾಡಿ, “ಈ ಚಿತ್ರವು ವರ್ಷಗಳ ಸಂಶೋಧನೆ. ಸತ್ಯ ಕಥೆಗಳ ಸಮ್ಮಿಲನ ಕೂಡ. ಹಿಂದೆಂದೂ ಹೇಳಲು ಯಾರು ಧೈರ್ಯ ಮಾಡಿಲ್ಲ. ಬಹಳ ಹಿಂದಿನಿಂದಲೂ ಮುಚ್ಚಿಹೋಗಿರುವ ಅನೇಕ ಸತ್ಯಗಳನ್ನು ಈ ಸಿನಿಮಾ ಬಹಿರಂಗಪಡಿಸುತ್ತದೆʼʼಎಂದರು. ಚಿತ್ರದಲ್ಲಿ ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಕೂಡ ಇದ್ದಾರೆ. ಇದು ಮೇ 5 ರಂದು ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.