ಬೆಂಗಳೂರು: ಕೆಲ ದಿನಗಳಿಂದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಬಗ್ಗೆ ರಶ್ಮಿಕಾ ಟ್ರೋಲ್‌ಗೆ ಒಳಗಾಗಿದ್ದರು. ರಶ್ಮಿಕಾ ಅವರು ʻಕಾಂತಾರʼ ಸಿನಿಮಾ ನೋಡಿಲ್ಲ, ಸಂದರ್ಶನದಲ್ಲಿ ತಮ್ಮ ಮೊದಲ ನಿರ್ಮಾಣ ಸಂಸ್ಥೆಯ ಹೆಸರು ಹೇಳಲಿಲ್ಲ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಬ್ಯಾನ್ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಈ ಬಗ್ಗೆ ರಶ್ಮಿಕಾ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಮಾಧ್ಯಮದವರೊಂದಿಗೆ ಮಾತನಾಡಿ ʻನನ್ನನ್ನು ಯಾರೂ ಬ್ಯಾನ್ ಮಾಡಿಲ್ಲ. ನನ್ನ ಬಳಿ ಅಧಿಕೃತವಾಗಿ ಈ ವಿಷಯ ಚರ್ಚೆಯಾಗಿಲ್ಲʼ ಎಂದಿದ್ದಾರೆ. ಕಾಂತಾರ ಸಿನಿಮಾ ನೋಡಿಲ್ಲ ಎಂದು ಟ್ರೋಲ್ ಆದ ಬಗ್ಗೆಯೂ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ಸಂದರ್ಶನ ಕೊಡುವಾಗ ಕಾಂತಾರ ರಿಲೀಸ್ ಆಗಿ ಎರಡು ದಿನ ಅಷ್ಟೇ ಆಗಿತ್ತು. ಆಗ ನಾನು ನೋಡಿರಲಿಲ್ಲ. ನಂತರ ಸಿನಿಮಾ ನೋಡಿ ಟೀಂಗೆ ಮೆಸೆಜ್ ಹಾಕಿದ್ದೆ. ಆ ಕಡೆಯಿಂದಲೂ ಧನ್ಯವಾದ ಎಂಬ ಪ್ರತಿಕ್ರಿಯೆ ಬಂದಿತ್ತು. ಜನರಿಗೆ ನಾವು ಹೇಗಿದ್ದೇವೆ ಎನ್ನುವುದು ಗೊತ್ತಿಲ್ಲ. ನನ್ನ ವೈಯಕ್ತಿಕ ವಿಚಾರಗಳನ್ನು ಕ್ಯಾಮೆರಾ ಮುಂದೆ ಹೇಳಲು ಸಾಧ್ಯವಿಲ್ಲ. ಅಷ್ಟಕ್ಕೂ ನನ್ನ ವೈಯಕ್ತಿಕ ವಿಚಾರಗಳು ಪ್ರಪಂಚಕ್ಕೆ ಬೇಕಾಗಿಲ್ಲ. ವೃತ್ತಿಪರವಾಗಿ ನನ್ನ ಸಿನಿಮಾಗಳ ಬಗ್ಗೆ ಮಾತನಾಡುವುದು ನನ್ನ ಜವಾಬ್ದಾರಿ. ನನ್ನ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅದನ್ನೆಲ್ಲಾ ಅವರ ವಿವೇಚನೆಗೆ ಬಿಡುತ್ತೇನೆ. ಬ್ಯಾನ್ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲʼʼ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | Rashmika Mandanna | ನಟ ನಾಗಶೌರ್ಯ ಜತೆ ನಟಿ ಕಿರಿಕ್, ರಶ್ಮಿಕಾ ಮಂದಣ್ಣ ಬ್ಯಾನ್ ಮಾಡಲು ಅಸಾಧ್ಯ: ತೋಟಾ ಪ್ರಸಾದ್
ಬ್ಯಾನ್ ಮಾಡುವುದು ಅಸಾಧ್ಯ!
ಈ ಹಿಂದೆಯಷ್ಟೇ ತೆಲುಗಿನ ಯುಟ್ಯೂಬ್ ಸಂದರ್ಶನವೊಂದರಲ್ಲಿ ತೆಲುಗಿನ ಖ್ಯಾತ ಚಲನಚಿತ್ರ ಬರಹಗಾರ ತೋಟಾ ಪ್ರಸಾದ್ ಅವರು ರಶ್ಮಿಕಾ ಮಂದಣ್ಣ ಬ್ಯಾನ್ ಕುರಿತು ಬೇಸರ ವ್ಯಕ್ತಪಡಿಸಿದ್ದರು. ತೋಟಾ ಪ್ರಸಾದ್ ಅಂದು ಮಾತನಾಡಿ ʻʻಕನ್ನಡ ಚಿತ್ರರಂಗದಲ್ಲಿ ರಶ್ಮಿಕಾ ಅವರನ್ನು ಬ್ಯಾನ್ ಮಾಡುತ್ತೇವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಯಾವ ಚಿತ್ರರಂಗಕ್ಕೂ ಯಾವುದೇ ನಟ, ನಟಿಯ ಮೇಲೆ ನಿಷೇಧ ಹೇರಲು ಆಗುವುದಿಲ್ಲ. ಅದರಲ್ಲಿಯೂ ಯಶಸ್ಸಿನ ಹಾದಿಯಲ್ಲಿರುವ ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡುವುದು ಅಸಾಧ್ಯʼʼ ಎಂದು ಹೇಳಿಕೆ ನೀಡಿದ್ದರು.
ರಶ್ಮಿಕಾ ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ವಿಜಯ್ ದಳಪತಿ ಜತೆ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಪುಷ್ಪ-2 ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ | Rashmika Mandanna | ದಳಪತಿ ವಿಜಯ್-ರಶ್ಮಿಕಾ ಮಂದಣ್ಣ ಕಾಂಬಿನೇಶನ್ ಸಿನಿಮಾಗೆ ನೋಟಿಸ್