Site icon Vistara News

Tiger 3: ಶೀಘ್ರ ಟೈಗರ್‌-ಪಠಾಣ್‌ ಮುಖಾಮುಖಿ; ಶಾರುಖ್‌ ಜತೆಗಿನ ಚಿತ್ರದ ಬಗ್ಗೆ ಸಲ್ಮಾನ್‌ ಹೇಳಿದ್ದೇನು?

salman sharukh

salman sharukh

ಮುಂಬೈ: ಬಾಲಿವುಡ್‌ನ ಈ ವರ್ಷದ ಬಹು ನಿರೀಕ್ಷಿತ ಚಿತ್ರ ʼಟೈಗರ್‌ 3ʼ (Tiger 3) ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ದೀಪಾವಳಿ ಪ್ರಯುಕ್ತ ಸಲ್ಮಾನ್‌ ಖಾನ್‌ (Salman Khan) ಅಭಿನಯದ ಈ ಚಿತ್ರ ನವೆಂಬರ್‌ 12ರಂದು ಬಿಡುಗಡೆಯಾಗಲಿದೆ. ಈಗಾಗಲೇ ಅಡ್ವಾನ್ಸ್‌ ಬುಕ್ಕಿಂಗ್‌ ಮೂಲಕ ಈ ಚಿತ್ರ ದಾಖಲೆ ಬರೆದಿದೆ. ಸದ್ಯ ಚಿತ್ರದ ಪ್ರಮೋಷನ್‌ನಲ್ಲಿ ಸಲ್ಮಾನ್‌ ಖಾನ್‌ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ʼಟೈಗರ್‌ vs ಪಠಾಣ್‌ʼ (Tiger vs Pathaan) ಚಿತ್ರದ ಬಗ್ಗೆಯೂ ಅವರು ಕುತೂಹಲಕಾರಿ ಮಾಹಿತಿ ನೀಡಿದ್ದಾರೆ.

ವರ್ಷಾರಂಭದಲ್ಲಿ ಬಿಡುಗಡೆಯಾದ ಶಾರುಖ್‌ ಖಾನ್‌-ದೀಪಿಕಾ ಪಡುಕೋಣೆ ಅಭಿನಯದ ಬಾಲಿವುಡ್‌ ಚಿತ್ರ ʼಪಠಾಣ್‌ʼ ಸೂಪರ್‌ ಹಿಟ್‌ ಆಗಿತ್ತು. ಈ ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ʼಟೈಗರ್‌ vs ಪಠಾಣ್‌ʼ ಚಿತ್ರ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್‌ ಖಾನ್‌, ʼʼನಾನು ಯಾವಾಗ ಬೇಕಾದರೂ ತಯಾರಿರುತ್ತೇನೆʼʼ ಎಂದಿದ್ದಾರೆ. ʼಟೈಗರ್‌ vs ಪಠಾಣ್‌ʼ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಟೈಟಲ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ʼಪಠಾಣ್‌ʼ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ಸಿದ್ಧಾರ್ಥ್ ಆನಂದ್ ನಿರ್ದೇಶಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂದಿನ ವರ್ಷದ ಮಾರ್ಚ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

ʼಟೈಗರ್‌ vs ಪಠಾಣ್‌ʼ ಚಿತ್ರದ ಬಗ್ಗೆ…

ʼಪಠಾಣ್‌ʼ ಮತ್ತು ʼಟೈಗರ್‌ 3ʼ ಚಿತ್ರಗಳ ನಿರ್ಮಾಪಕ ಆದಿತ್ಯ ಚೋಪ್ರಾ ʼಟೈಗರ್‌ vs ಪಠಾಣ್‌ʼ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಅವರು ಈಗಾಗಲೇ ಸಲ್ಮಾನ್‌ ಖಾನ್‌ ಮತ್ತು ಶಾರುಖ್‌ ಖಾನ್‌ ಅವರನ್ನು ಭೇಟಿಯಾಗಿ ಒಪ್ಪಿಗೆ ಪಡೆದಿದ್ದಾರೆ ಎನ್ನಲಾಗಿದೆ. ಟೈಗರ್‌ ಮತ್ತು ಪಠಾಣ್‌ ಎಂಬ ಇಬ್ಬರು ಗೂಢಚಾರರ ಕಥೆಯನ್ನು, ರೋಮಾಂಚನಕಾರಿ ಸಾಹಸವನ್ನು ಇದು ಒಳಗೊಂಡಿರಲಿದೆ ಎಂದು ಮೂಲಗಳು ತಿಳಿಸಿವೆ. ಸಿದ್ಧಾರ್ಥ್‌ ಆನಂದ್‌ ನಿರ್ದೇಶನದಲ್ಲಿ ಮುಖಾಮುಖಿಯಾಗಲು ಸಲ್ಮಾನ್‌ ಮತ್ತು ಶಾರುಖ್‌ ಉತ್ಸುಕರಾಗಿದ್ದಾರೆ ಎನ್ನುವ ಸುದ್ದಿಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. 1995ರಲ್ಲಿ ತೆರೆಕಂಡ ʼಕರುಣ್‌ ಅರ್ಜುನ್‌ʼ ಚಿತ್ರದ ಬಳಿಕ ಈ ಇಬ್ಬರು ಸೂಪರ್‌ ಸ್ಟಾರ್‌ಗಳು ಒಂದೇ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ಪಾತ್ರ ನಿರ್ವಹಿಸಲಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗಲಿರುವ ಈ ಚಿತ್ರದ ಕೆಲಸ ಈ ವರ್ಷಾಂತ್ಯದಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ಸಲ್ಮಾನ್‌ ಖಾನ್‌ ಹೇಳಿದ್ದೇನು?

ಇನ್ನು ಸಂದರ್ಶನದಲ್ಲಿ ʼಟೈಗರ್‌ 3ʼ ಚಿತ್ರದ ಶೂಟಿಂಗ್‌ ಬಗ್ಗೆ ಸಲ್ಮಾನ್‌ ಖಾನ್‌ ಮಾತನಾಡಿದ್ದಾರೆ. ʼʼಬೈಕ್‌ ಚೇಸಿಂಗ್‌ ದೃಶ್ಯದ ಚಿತ್ರೀಕರಣ ಬಹಳ ಸವಾಲಿನಿಂದ ಕೂಡಿತ್ತು. ಚಿತ್ರೀಕರಣ ಆರಂಭಕ್ಕೂ ಮುನ್ನ ನಾನು ಮತ್ತು ನಿರ್ದೇಶಕ ಮನೀಷ್‌ ಶರ್ಮಾ ಈ ಬಗ್ಗೆ ಸಮಾಲೋಚನೆ ನಡೆಸಿದ್ದೆವು. ಸುದೀರ್ಘವಾಗಿರುವ ಈ ದೃಶ್ಯವನ್ನು ಯಶಸ್ವಿಯಾಗಿ ಚಿತ್ರೀಕರಿಸಲು ಎಲ್ಲರೂ ಶ್ರಮಿಸಿದ್ದೇವೆʼʼ ಎಂದು ಸಲ್ಮಾನ್‌ ಖಾನ್‌ ವಿವರಿಸಿದ್ದಾರೆ. ʼʼಲೇಕೆ ಪ್ರಭು ಕ ನಾಮ್‌ʼ ಹಾಡಿನ ಚಿತ್ರೀಕರಣದಲ್ಲಿ ಖುಷಿಯಿಂದ ಭಾಗವಹಿಸಿದ್ದೇನೆ. ಸದ್ಯ ಇದು ನನ್ನ ನೆಚ್ಚಿನ ಹಾಡು. ಈ ಸೂಪರ್‌ ಹಿಟ್‌ ಹಾಡಿನ ಭಾಗವಾಗಿರುವುದಕ್ಕೆ ನಾನು ಮತ್ತು ಕತ್ರಿನಾ ಕೈಫ್‌ ಅದೃಷ್ಟ ಮಾಡಿದ್ದೆವು ಎಂದೇ ಭಾವಿಸುತ್ತೇನೆʼʼ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Tiger 3: ʻಟೈಗರ್‌ʼ ಎಂಟೇ ದಿನಗಳಲ್ಲಿ 330 ಕೋಟಿ ಗಳಿಸುವ ಸಾಧ್ಯತೆ; ‘ಬಂಪರ್ ಓಪನಿಂಗ್’?

ʼಟೈಗರ್‌ 3ʼ ಚಿತ್ರದಲ್ಲಿ ಇಮ್ರಾನ್‌ ಹಶ್ಮಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. 300 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ತಯಾರಾಗಿದೆ. ಶಾರುಖ್‌ ಖಾನ್‌ ಜತೆಗೆ ಹೃತಿಕ್‌ ರೋಷನ್‌ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version