ಬೆಂಗಳೂರು: ಖ್ಯಾತ ಹಾಸ್ಯನಟ ಅಲ್ಲು ರಮೇಶ್ (Allu Ramesh) ಅವರು ಹೃದಯಾಘಾತದಿಂದ ಏಪ್ರಿಲ್ 18ರಂದು ನಿಧನರಾಗಿದ್ದಾರೆ. ತಮ್ಮ ಹುಟ್ಟೂರಾದ ವಿಶಾಖಪಟ್ಟಣದಲ್ಲಿ ಅಲ್ಲು ರಮೇಶ್ ಅವರು ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು. ನಿರ್ದೇಶಕ ಆನಂದ್ ರವಿ ಅವರು ನಿಧನದ ಸುದ್ದಿಯನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಅವರ ಅಭಿಮಾನಿಗಳು ಸೇರಿದಂತೆ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ.
ವೈಜಾಗ್ ಮೂಲದ ಅಲ್ಲು ರಮೇಶ್ ಅವರು ರಂಗಭೂಮಿ ಕಲಾವಿದ. ಬಳಿಕ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ‘ಚಿರುಜಲ್ಲು’ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಅನೇಕ ತೆಲುಗು ಚಿತ್ರಗಳಲ್ಲಿ ನಟಿಸಿದರು. ‘ತೋಲು ಬೊಮ್ಮಲಾಟ (Tolu Bommalata),’ ‘ಮಥುರಾ ವೈನ್ಸ್,'(Mathura Wines) ‘ವೀಧಿ,'(Veedhi) ‘ಬ್ಲೇಡ್ ಬಾಬ್ಜಿ (Blade Babji,),’ ಮತ್ತು ‘ನೆಪೋಲಿಯನ್’ (Napoleon) ಸೇರಿದಂತೆ ಅವರ ಕೆಲವು ಗಮನಾರ್ಹ ಚಿತ್ರಗಳು. 2015ರ ‘ಕೇರಿಂತ’ ಚಿತ್ರದಲ್ಲಿ ನೂಕರಾಜು ಅವರ ತಂದೆಯ ಪಾತ್ರವನ್ನು ನಿರ್ವಹಿಸಿದರು. ರಾಜೇಂದ್ರ ಪ್ರಸಾದ್ ಅವರ ‘ಆನುಕೋನಿ ಪ್ರಯಾಣʼ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಇತ್ತೀಚೆಗೆ, ಅಲ್ಲು ರಮೇಶ್ ಅವರು ಜನಪ್ರಿಯ ವೆಬ್ ಸಿರೀಸ್ ‘ಮಾ ವಿದಕುಲು’ನಲ್ಲಿ ನಾಯಕ ನಟಿಯ ತಂದೆಯಾಗಿ ಕಾಣಿಸಿಕೊಂಡಿದ್ದರು. ಸಣ್ಣ ಪಾತ್ರಗಳನ್ನು ನಿರ್ವಹಿಸುತ್ತಿದ್ದರೂ ತಮ್ಮ ನಟನಾ ಕೌಶಲಕ್ಕಾಗಿ ಮನ್ನಣೆ ಗಳಿಸಿದ್ದರು. ‘ನೆಪೋಲಿಯನ್’ ಮತ್ತು ‘ತೊಳುಬೊಮ್ಮಲತಾ’ ಚಿತ್ರಗಳಲ್ಲಿನ ಅವರ ಅಭಿನಯಕ್ಕಾಗಿ ಹೆಚ್ಚು ಖ್ಯಾತಿ ಪಡೆದಿದ್ದರು.
ನಿರ್ದೇಶಕ ಆನಂದ್ ರವಿ ಸೋಷಿಯಲ್ ಮೀಡಿಯಾದಲ್ಲಿ ಮಾಡಿ ʻʻಮೊದಲ ದಿನದಿಂದ ನೀವು ನನ್ನ ದೊಡ್ಡ ಬೆಂಬಲವಾಗಿದ್ದೀರಿ. ನನ್ನ ತಲೆಯಲ್ಲಿ ಇನ್ನೂ ನಿಮ್ಮ ಧ್ವನಿ ಕೇಳುತ್ತಿದೆ. ರಮೇಶ್ ಅವರೇ, ನಿಮ್ಮ ನಿಧನವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು ನನ್ನಂತೆಯೇ ಅನೇಕ ಹೃದಯಗಳನ್ನು ಗೆದ್ದಿದ್ದೀರಿ. ಮಿಸ್ ಯು. ಓಂ ಶಾಂತಿʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Manvita Kamath: ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ ತಾಯಿ ನಿಧನ
ಅಲ್ಲು ರಮೇಶ್ ಅವರ ಹಠಾತ್ ನಿಧನದಿಂದ ಚಿತ್ರರಂಗದ ಗಣ್ಯರು ಆಘಾತಕ್ಕೊಳಗಾಗಿದ್ದು, ಅವರ ನಿಧನಕ್ಕೆ ಹಲವಾರು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.