ಬೆಂಗಳೂರು: ಶಂಕರಾಭರಣಂ, ಸಾಗರ ಸಂಗಮಂ, ಸ್ವಾತಿ ಮುತ್ಯಂ ಮತ್ತು ಸ್ವರ್ಣ ಕಮಲಂ ಮುಂತಾದ ಅಪ್ರತಿಮ ಚಿತ್ರಗಳ ಮೂಲಕ ಜನಪ್ರಿಯರಾಗಿದ್ದ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ಕೆ.ವಿಶ್ವನಾಥ್ (K.Viswanath) ಅವರ ಮರಣದ 24 ದಿನಗಳ ನಂತರ ಅವರ ಪತ್ನಿ ಕೆ. ಜಯಲಕ್ಷ್ಮಿ (K.Jayalakshmi) ಅವರು ಹೈದರಾಬಾದ್‌ನ ತಮ್ಮ ಮನೆಯಲ್ಲಿ ವಿಧಿವಶರಾಗಿದ್ದಾರೆ. 60ಕ್ಕೂ ಹೆಚ್ಚು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಜಯಲಕ್ಷ್ಮಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ಕೆ. ಜಯ ಲಕ್ಷ್ಮಿ ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರಿಗೆ ಮೂವರು ಮಕ್ಕಳು-ಒಬ್ಬ ಮಗಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕೆ ವಿಶ್ವನಾಥ್ ತಮ್ಮ 92 ನೇ ವಯಸ್ಸಿನಲ್ಲಿ ವೃದ್ಧಾಪ್ಯದ ಕಾರಣ ನಿಧನರಾದರು. ಹಿರಿಯ ನಟ ಚಂದ್ರ ಮೋಹನ್ ಮತ್ತು ದಿವಂಗತ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ವಿಶ್ವನಾಥ್ ಮತ್ತು ಜಯಲಕ್ಷ್ಮಿ ಅವರ ಸಂಬಂಧಿಕರು. ಮಾಹಿತಿ ಪ್ರಕಾರ ಜಯಲಕ್ಷ್ಮಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಗ್ರಾಮವೊಂದಕ್ಕೆ ಸೇರಿದವರು. ಆಕೆಯ ತಂದೆ ಭಾರತೀಯ ರೈಲ್ವೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದರು.
ಇದನ್ನೂ ಓದಿ: K.Viswanath: ʼಶಂಕರಾಭರಣಂʼ ಖ್ಯಾತಿಯ ಚಿತ್ರ ನಿರ್ದೇಶಕ, ನಿರ್ಮಾಪಕ ಕೆ. ವಿಶ್ವನಾಥ್ ಇನ್ನಿಲ್ಲ
ಕೆ.ವಿಶ್ವನಾಥ್
ಶಂಕರಾಭರಣಂ ಚಿತ್ರದ ಯಶಸ್ಸಿನ ನಂತರ, ವಿಶ್ವನಾಥ್ ಅವರು ಕಲೆಯನ್ನು ಕಥಾವಸ್ತುವಾಗಿ ಹೊಂದಿದ ಇನ್ನೂ ಅನೇಕ ಚಲನಚಿತ್ರಗಳನ್ನು ಮಾಡಿದರು. ವಿಶೇಷವಾಗಿ ಸಂಗೀತವನ್ನು ಅದರ ಹಿನ್ನೆಲೆಯಾಗಿಟ್ಟುಕೊಂಡರು. ಸಾಗರ ಸಂಗಮಂ, ಸ್ವಾತಿ ಕಿರಣಂ, ಸ್ವರ್ಣ ಕಮಲಂ, ಶ್ರುತಿಲಯಲು ಮತ್ತು ಸ್ವರಾಭಿಷೇಕಂ ಇವುಗಳಲ್ಲಿ ಕೆಲವು.