Site icon Vistara News

Toxic Movie Update: ಬಹು ನಿರೀಕ್ಷಿತ ಯಶ್‌ ಚಿತ್ರ ʼಟಾಕ್ಸಿಕ್‌ʼನಲ್ಲಿ ನೀವೂ ನಟಿಸಬಹುದು; ಹೇಗೆ ಎನ್ನುವ ವಿವರ ಇಲ್ಲಿದೆ

toxic

toxic

ಬೆಂಗಳೂರು: ʼಕೆಜಿಎಫ್‌ʼ ಚಿತ್ರದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ರಾಕಿಂಗ್‌ ಸ್ಟಾರ್‌ ಯಶ್‌ (Yash) ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ʼಕೆಜಿಎಫ್‌ 2ʼ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಸುಮಾರು ಒಂದೂವರೆ ವರ್ಷದ ಬಳಿಕ ಯಶ್‌ ಅಭಿನಯದ ʼಟಾಕ್ಸಿಕ್‌ʼ (Toxic) ಸಿನಿಮಾ ಘೋಷಣೆಯಾಗಿದೆ. ಮಲೆಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇಡೀ ದೇಶವೇ ಕಾಯುತ್ತಿರುವ ಈ ಚಿತ್ರದಲ್ಲಿ ನೀವೂ ಕಾಣಿಸಿಕೊಳ್ಳಬಹುದು. ಹೌದು, ಚಿತ್ರತಂಡ ಮಕ್ಕಳು, ಪುರುಷರು, ಮಹಿಳೆಯರು ಸೇರಿದಂತೆ ಕಲಾವಿದರ ಅಡಿಷನ್‌ ನಡೆಸಲು ಪ್ರಕಟಣೆ ಹೊರಡಿಸಿದೆ (Toxic Movie Update).

ಅಡಿಷನ್‌ನಲ್ಲಿ ಭಾಗವಹಿಸುವುದು ಹೇಗೆ?

ʼಟಾಕ್ಸಿಕ್‌ʼ ಚಿತ್ರ ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್‌ ಕಲಾವಿದರು ಬೇಕಾಗಿದ್ದಾರೆ ಎಂದು ಪ್ರಕಟಣೆ ಹೊರಡಿಸಿದೆ. 25ರಿಂದ 75 ವರ್ಷದೊಳಗಿನ ಪುರುಷರು, 12ರಿಂದ 16 ವರ್ಷದೊಳಗಿನ ಮಕ್ಕಳು ಮತ್ತು 23ರಿಂದ 65 ವರ್ಷದೊಳಗಿನ ಮಹಿಳೆಯರು ಈ ಅಡಿಷನ್‌ನಲ್ಲಿ ಭಾಗವಹಿಸಬಹುದು. ಮಾರ್ಚ್‌ 25ರ ಒಳಗೆ ನಿಮ್ಮ ಪರಿಚಯದ ವಿಡಿಯೊ ಮತ್ತು ನಿಮ್ಮ ಅಭಿನಯದ ಒಂದು ನಿಮಿಷದ ವಿಡಿಯೊವನ್ನು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಬೇಕು. ವಿಡಿಯೊಗಳನ್ನು ಕಳುಹಿಸಬೇಕಾದ ನಂಬರ್‌: 8618706690. ನೆನಪಿಡಿ ನಿಮ್ಮ ವಿಡಿಯೊ ಮಾರ್ಚ್‌ 25ರೊಳಗೆ ಕಳುಹಿಸಬೇಕು.

ನಾಯಕಿ ಯಾರು?

ಈ ಬಹು ನಿರೀಕ್ಷಿತ ಚಿತ್ರದಲ್ಲಿ ನಾಯಕಿ ಯಾರಾಗುತ್ತಾರೆ ಎನ್ನುವ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಆರಂಭದಲ್ಲಿ ಸಾಯಿ ಪಲ್ಲವಿ, ಸಂಯುಕ್ತಾ ಮೆನನ್‌ ನಾಯಕಿಯರಾಗಿತ್ತಾರೆ ಎನ್ನಲಾಗಿತ್ತು. ಅದಾದ ಬಳಿಕ ಕರೀನಾ ಕಪೂರ್‌ ಹೆಸರು ಕೇಳಿ ಬಂದಿತ್ತು. ಇತ್ತೀಚೆಗೆ ಬಹುಭಾಷಾ ನಟಿ ಶ್ರುತಿ ಹಾಸನ್‌ ಟಾಕ್ಸಿಕ್‌ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿತ್ತು. ಇದರ ಜತೆಗೆ ಮಲಯಾಳಂ ನಟ ಟೊವಿನೋ ಥಾಮಸ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಆದರೆ ಚಿತ್ರತಂಡ ಇದುವರೆಗೆ ಇದ್ಯಾವುದನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹೀಗಾಗಿ ಸಿನಿ ಪ್ರಿಯರಲ್ಲಿ ಕುತೂಹಲ ಮನೆ ಮಾಡಿದೆ. ಬರೋಬ್ಬರಿ 170 ಕೋಟಿ ರೂಪಾಯಿ ಬಜೆಟ್‌ನ ಈ ಯಶ್‌ (Yash) ಚಿತ್ರ ಡ್ರಗ್‌ ಮಾಫಿಯಾ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ಮೂಲಗಳು ತಿಳಿಸಿವೆ. 2025ರಲ್ಲಿ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ.

ʼಟಾಕ್ಸಿಕ್‌ʼ ಚಿತ್ರದ ಶೂಟಿಂಗ್‌ ಗೋವಾದಲ್ಲಿ ನಡೆಯುತ್ತಿದ್ದು, ಕೆಲವು ಫೋಟೊ ಹಾಗೂ ವಿಡಿಯೊಗಳು ಇತ್ತೀಚೆಗೆ ಲೀಕ್‌ ಆಗಿದ್ದವು. ವೈರಲ್ ಆದ ಫೋಟೊದಲ್ಲಿ ಯಶ್ (Yash) ಕೂಡ ಕಾಣಿಸಿಕೊಂಡಿದ್ದರು. ಕೆಲವು ವರದಿಗಳು ಇದು ಶೂಟಿಂಗ್‌ ವಿಡಿಯೊ ಅಲ್ಲ ಎಂದು ಹೇಳಿದ್ದವು.

ಇದನ್ನೂ ಓದಿ: Geetu Mohandas: ಯಶ್‌ TOXIC ಚಿತ್ರಕ್ಕೆ ಗೀತು ಮೋಹನ್‌ ದಾಸ್‌ ನಿರ್ದೇಶಕಿ; ಯಾರಿವರು?

ಕಳೆದ ಡಿಸೆಂಬರ್‌ನಲ್ಲಿ ಭಾರತ, ಮಲೇಶಿಯಾ, ಜಪಾನ್, ನ್ಯೂಜಿಲ್ಯಾಂಡ್, ಆಫ್ರಿಕಾ, ಆಸ್ಟ್ರೇಲಿಯಾ, ರಷ್ಯಾ, ಇಂಗ್ಲೆಂಡ್‌, ಯೂರೋಪ್ ಸೇರಿದಂತೆ ಹಲವೆಡೆ ʼಟಾಕ್ಸಿಕ್‌ʼ ಟೈಟಲ್ ಅದ್ಧೂರಿಯಾಗಿ ರಿವೀಲ್ ಆಗಿತ್ತು. ಇದುವರೆಗೂ ಕನ್ನಡ ಯಾವ ಸಿನಿಮಾದ ಟೈಟಲ್ ಕೂಡ ವಿಶ್ವದಾದ್ಯಂತ ಈ ರೀತಿ ರಿಲೀಸ್ ಆಗಿರಲಿಲ್ಲ. ಈ ಮೂಲಕ ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ರಿಲೀಸ್‌ ಆಗುತ್ತಿದೆ ಎನ್ನುವುದು ಖಚಿತವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version