Site icon Vistara News

Kushi Trailer: ಪ್ರೀತಿ, ಪ್ರೇಮ, ಸಂಸಾರ ಜಗಳವೇ ʻಖುಷಿʼಯ ಹೈಲೆಟ್!

trailer launch of Kushi

ಬೆಂಗಳೂರು: ವಿಜಯ್ ದೇವರಕೊಂಡ (Vijay Deverakonda ) ಹಾಗೂ ಸಮಂತಾ (samantha vijay devarakonda) ನಟನೆಯ ‘ಖುಷಿ’ ಸಿನಿಮಾದ ಟ್ರೈಲರ್ (Kushi Trailer) ಬಿಡುಗಡೆಯಾಗಿದೆ. ಕಾಶ್ಮೀರಕ್ಕೆ ಹೋಗುವ ಕ್ರಿಶ್ಚಿಯನ್ ಯುವಕ ವಿಪ್ಲವ್ ಹಾಗೂ ಮುಸ್ಲಿಂ ಯುವತಿ ಬೇಗಂ ಭೇಟಿಯಾಗುತ್ತಾರೆ. ಆಕೆಯನ್ನು ನೋಡಿ ನಾಯಕ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಆಕೆ ಮುಸ್ಲಿಂ ಅಲ್ಲ ಬ್ರಾಹ್ಮಣ ಕುಟುಂಬದ ಯುವತಿ ಎನ್ನುವುದು ಗೊತ್ತಾಗುತ್ತದೆ. ಇದು ಕ್ರಿಶ್ಚಿಯನ್ ಯುವಕ ಹಾಗೂ ಹಿಂದೂ ಯುವತಿಯ ಪ್ರೇಮಕಥೆ ಎಂಬುದು ಟ್ರೈಲರ್‌ ಮೂಲಕ ಅರ್ಥವಾಗುತ್ತದೆ. ಟ್ರೈಲರ್‌ ಲಾಂಚ್‌ ಇವೆಂಟ್‌ನಲ್ಲಿ ಸಮಂತಾ ಭಾಗಿಯಾಗಿರಲಿಲ್ಲ.

ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪುವುದಿಲ್ಲ. ನಾಯಕಿಯ ತಂದೆಯಂತೂ ಇವರಿಬ್ಬರು ಮದುವೆ ಆದರೆ ಭಾರೀ ಸಮಸ್ಯೆಗಳಾಗುತ್ತದೆ ಎಂದು ಭವಿಷ್ಯ ನುಡಿಯುತ್ತಾನೆ. ಆದರೆ ಅದನ್ನೆಲ್ಲಾ ಮೀರಿ ಇಬ್ಬರು ಮದುವೆ ಆಗಿ ಒಂದು ವರ್ಷ ನಾವು ಆದರ್ಶ ದಂಪತಿಗಳಾಗಿ ಬದುಕಿ ತೋರಿಸುತ್ತೇವೆ ಎಂದು ಸವಾಲು ಹಾಕಿ ಮದುವೆ ಆಗುತ್ತಾರೆ. ಮದುವೆ ನಂತರ ಇಬ್ಬರ ನಡುವೆ ನಡೆಯುವ ಜಗಳ ಶುರುವಾಗುತ್ತದೆ. ಆಗಿದ್ದರೆ ಮುಂದೇನಾಗುತ್ತದೆ ಎನ್ನುವುದನ್ನು ಪ್ರೇಕ್ಷಕರು ಸಿನಿಮಾದಲ್ಲಿ ನೋಡಬೇಕು.

ರೊಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾವಾಗಿರುವ ಖುಷಿಗೆ ಶಿವ ನಿರ್ವಾಣ ನಿರ್ದೇಶನವಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಜಯರಾಂ, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಜ್ಯೂಲಿ ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲಾ ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಇದನ್ನೂ ಓದಿ: Kushi Trailer: ಸಮಂತಾ- ವಿಜಯ್ ದೇವರಕೊಂಡ ಅಭಿನಯದ ʻಖುಷಿʼ ಟ್ರೈಲರ್‌ ಔಟ್‌!

ಸಿನಿಮಾ ಕುರಿತು ನಿರ್ದೇಶಕ ಮಾತನಾಡಿ ʻʻನನಗೆ ಅನಿಸಿದ್ದು, ʻಅಲೈಪಾಯುತೆʼ ಸಿನಿಮಾ ಆಗಲಿ, ಮೌನ ರಾಗಂ ಆಗಲಿ ಅಥವಾ ಯಾವುದೇ ಚಿತ್ರದಲ್ಲಿ ಮದುವೆ ಮತ್ತು ಪ್ರೀತಿ ಒಂದೇ ಆಗಿರುತ್ತದೆ. ನಾವು ಬದಲಾಯಿಸಲು ಸಾಧ್ಯವಿಲ್ಲ. ಲವ್ ಸ್ಟೋರಿಯಲ್ಲಿ ನೀವು ಏನು ಹೇಳಲು ಬಯಸುತ್ತೀರೋ ಅದು ಪ್ರೀತಿ ಆಗಿರಬೇಕು, ಮದುವೆಯ ಕಥೆಯಲ್ಲಿ ಮದುವೆ ಇರಬೇಕುʼʼ ಎಂದರು.

“ಒಂದು ಚಲನಚಿತ್ರವು ಕ್ಲಿಕ್‌ ಆಗದಿದ್ದಾಗ ಅಥವಾ ಕೆಲಸ ಮಾಡದಿದ್ದಾಗ, ಅದು ನೋವುಂಟುಮಾಡುತ್ತದೆ. ನಾನು ಈ ಹಿಂದೆ ಅನೇಕ ಫ್ಲಾಪ್‌ ಸಿನಿಮಾಗಳನ್ನು ಕಂಡು ನೋವು ಅನುಭವಿಸಿದ್ದೆ. ಆದರೆ ನನಗೆ ಮಾರ್ಗದರ್ಶನ ಮಾಡಲು ಯಾವುದೇ ಸಂಸ್ಥೆಗಳಿಲ್ಲ, ನಾನು ನನ್ನ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆʼʼ ಎಂದು ವಿಜಯ್‌ ದೇವರಕೊಂಡ ಹೈದರಾಬಾದ್‌ನಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ‘ಖುಷಿ’ ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ಚಿತ್ರ ತೆರೆಗೆ ಬರಲಿದೆ. ಹೇಷಂ ವಾಹೆಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ.

Exit mobile version