Site icon Vistara News

Trisha Krishnan: ತ್ರಿಶಾ ಬಗ್ಗೆ ನಾಲಿಗೆ ಹರಿಯಬಿಟ್ಟ ರಾಜಕೀಯ ಮುಖಂಡ; ತಪ್ಪಿನ ಅರಿವಾಗಿ ಹೇಳಿದ್ದೇನು?

trisha raju

trisha raju

ಚೆನ್ನೈ: ಕೆಲವು ದಿನಗಳ ಹಿಂದೆ ಕಾಲಿವುಡ್‌ ಹಿರಿಯ ನಟ ಮನ್ಸೂರ್​ ಅಲಿ ದಕ್ಷಿಣ ಭಾರತದ ಜನಪ್ರಿಯ ನಟಿ ತ್ರಿಶಾ ಕೃಷ್ಣನ್‌ (Trisha Krishnan) ವಿರುದ್ಧ ಅಸಂಬದ್ಧ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಇದೀಗ ತಮಿಳುನಾಡಿನ ರಾಜಕೀಯ ಮುಖಂಡ ಎ.ವಿ.ರಾಜು (A.V.Raju) ಕೂಡ ತ್ರಿಶಾ ವಿರುದ್ಧ ನಾಲಿಗೆ ಹರಿಯ ಬಿಟ್ಟಿದ್ದಾರೆ. ಇತ್ತೀಚೆಗೆ ಎಐಎಡಿಎಂಕೆ (AIADMK) ಪಕ್ಷದಿಂದ ಉಚ್ಛಾಟಿತರಾದ ಎ.ವಿ.ರಾಜು, ʼʼನಿರ್ದಿಷ್ಟ ಮೊತ್ತದ ಹಣಕ್ಕೆ ಬದಲಾಗಿ ಶಾಸಕರ ಆದೇಶದ ಮೇರೆಗೆ ತ್ರಿಶಾ ಅವರನ್ನು ರೆಸಾರ್ಟ್‌ಗೆ ಕರೆದೊಯ್ಯಲಾಯಿತುʼʼ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ನಟಿ, ʼʼಇಂತಹ ಕೀಳು ಹೇಳಿಕೆ ನೀಡಿದ್ದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದುʼʼ ಎಂದು ಗುಡುಗಿದ್ದಾರೆ. ಈ ಮಧ್ಯೆ ಎ.ವಿ.ರಾಜು ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.

ಎ.ವಿ.ರಾಜು ಹೇಳಿದ್ದೇನು?

ಪಶ್ಚಿಮ ಸೇಲಂನ ಶಾಸಕ ಜಿ.ವೆಂಕಟಚಲಂ ಅವರನ್ನು ಟೀಕಿಸುವ ಭರದಲ್ಲಿ ತ್ರಿಶಾ ಹೆಸರನ್ನು ಎ.ವಿ.ರಾಜು ಪ್ರಸ್ತಾವಿಸಿದ್ದಾರೆ. ಆ ಹಿರಿಯ ರಾಜಕಾರಣಿಗಾಗಿ ತ್ರಿಷಾಗೆ ದುಡ್ಡು ಕೊಟ್ಟು ನಮ್ಮ ರೆಸಾರ್ಟ್‌ ಕರೆಸಿಕೊಂಡಿದ್ದೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ʼʼವೆಂಕಟಚಲಂ ಅವರು ತ್ರಿಶಾ ಅವರನ್ನು 25 ಲಕ್ಷ ರೂಪಾಯಿಗೆ ಕೇಳಿದ್ದರು. ಅದನ್ನು ಶಾಸಕ ಕರುಣಾಸ್​ ವ್ಯವಸ್ಥೆ ಮಾಡಿಸಿದ್ದರು. ಅದಕ್ಕಾಗಿ ಹಲವು ನಟಿಯರು ಇದ್ದಾರೆʼʼ ಎಂದು ಅಸಹ್ಯಕರವಾಗಿ ಮಾತನಾಡಿದ್ದರು. ಈ ಹೇಳಿಕೆ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತ್ರಿಶಾ ಕೆಂಡಾಮಂಡಲ

ರಾಜು ವಿರುದ್ಧ ತ್ರಿಶಾ ಕಿಡಿ ಕಾರಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ʼʼಪ್ರಚಾರ ಪಡೆಯಲು ಕೀಳು ವ್ಯಕ್ತಿಗಳು ಎಂಥ ಕೆಳಮಟ್ಟಕ್ಕೆ ಬೇಕಾದರು ಇಳಿಯುವುದನ್ನು ಪದೇಪದೇ ನೋಡಲು ಅಸಹ್ಯ ಎನಿಸುತ್ತೆ. ಖಂಡಿತವಾಗಿಯೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನನ್ನ ಲೀಗಲ್​ ಡಿಪಾರ್ಟ್​ಮೆಂಟ್​ನವರು ಎಲ್ಲವನ್ನೂ ನೋಡಿಕೊಳ್ಳಲಿದ್ದಾರೆʼʼ ಎಂದು ತ್ರಿಶಾ ಹೇಳಿದ್ದಾರೆ.

ಕ್ಷಮೆ ಯಾಚನೆ

ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ಎ.ವಿ.ರಾಜು ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತ್ರಿಶಾ ಬಳಿ ಕ್ಷಮೆಯಾಚಿಸಿದ್ದಾರೆ. ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದ ಅವರು, “ನಾನು ನಟಿ ತ್ರಿಶಾ ಅವರನ್ನು ಹೋಲುವ ಮಹಿಳೆಯನ್ನು ಉಲ್ಲೇಖಿಸಿದ್ದೇನೆ ಹೊರತು ಸ್ವತಃ ನಟಿಯ ಬಗ್ಗೆ ಹೇಳಿಕೆ ನೀಡಿಲ್ಲ. ತ್ರಿಶಾ ಸೇರಿದಂತೆ ಚಿತ್ರರಂಗದ ಎಲ್ಲರಿಗೂ ಕ್ಷಮೆ ಯಾಚಿಸುತ್ತೇನೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mansoor Ali Khan: ಅಸಭ್ಯ ಹೇಳಿಕೆ ನೀಡಿದ್ದಲ್ಲದೆ ತ್ರಿಶಾ ವಿರುದ್ಧವೇ ಮೊಕದ್ದಮೆ; ನಟನಿಗೆ ಕೋರ್ಟ್‌ ತಪರಾಕಿ

ತ್ರಿಶಾ ಬೆಂಬಲಕ್ಕೆ ಬಂದ ಸೆಲೆಬ್ರಿಟಿಗಳು

ತ್ರಿಶಾ ಬೆಂಬಲಕ್ಕೆ ಹಲವರು ಧಾವಿಸಿದ್ದಾರೆ. ನಟ ವಿಶಾಲ್‌ ಈ ಬಗ್ಗೆ ಎಕ್ಸ್‌ ಮೂಲಕ ಪೋಸ್ಟ್‌ ಹಂಚಿಕೊಂಡು ಧೈರ್ಯ ತುಂಬಿದ್ದಾರೆ. “ರಾಜಕೀಯ ಪಕ್ಷವೊಂದರ ಮೂರ್ಖನೊಬ್ಬ ನಮ್ಮ ಸಿನಿಮಾ ಇಂಡಸ್ಟ್ರಿ ಕಲಾವಿದರೊಬ್ಬರ ಬಗ್ಗೆ ತುಂಬಾ ಕೆಟ್ಟದಾಗಿ ಮತ್ತು ಅಸಹ್ಯಕರವಾಗಿ ಮಾತನಾಡಿದ್ದಾನೆ ಎಂದು ತಿಳಿಯಿತು. ನಾನು ಅವರ ಹೆಸರನ್ನು ಉಲ್ಲೇಖಿಸುವುದಿಲ್ಲ. ಏಕೆಂದರೆ ಅವರು ಅದನ್ನು ಪ್ರಚಾರಕ್ಕಾಗಿ ಮಾಡಿದ್ದಾರೆ ಎಂದು ನನಗೆ ತಿಳಿದಿದೆ. ಇದು ಸೆಲೆಬ್ರಿಟಿಗಳ ಬಗ್ಗೆ ನಕಾರಾತ್ಮಕ ಪ್ರಚಾರದಿಂದ ಹಣ ಗಳಿಸಲು ಪ್ರಯತ್ನಿಸುವ ಪ್ರವೃತ್ತಿ ಎನ್ನುವುದರಲ್ಲಿ ಸಂದೇಹವಿಲ್ಲ. ಜೀವನದಲ್ಲಿ ಸ್ವಲ್ಪವಾದರೂ ಶಿಸ್ತು ರೂಢಿಸಿಕೊಳ್ಳಿʼʼ ಎಂದು ಹೇಳಿದ್ದಾರೆ. ಇವರ ಜತೆಗೆ ಸಿನಿರಂಗದ ಹಲವರು, ಅಭಿಮಾನಿಗಳು ತ್ರಿಶಾ ಬೆಂಬಲಕ್ಕೆ ನಿಂತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version