Site icon Vistara News

Samantha Troll | ಸಮಂತಾ ಕಾಂತಿ ಕಡಿಮೆಯಾಯಿತು ಎಂದ ಟ್ರೋಲಿಗರು; ಖಡಕ್‌ ಪ್ರತಿಕ್ರಿಯೆ ಕೊಟ್ಟು, ಬಾಯಿ ಮುಚ್ಚಿಸಿದ ನಟಿ

ಹೈದರಾಬಾದ್:‌ ನಟಿ ಸಮಂತಾ ತಮ್ಮ ಜೀವನದಲ್ಲಿ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಏರು ಬೀಳು ಕಂಡಿದ್ದಾರೆ. ಪತಿ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬೆನ್ನಲ್ಲೇ ಅವರಿಗೆ ಮಯೋಸಿಟಿಸ್‌ ಎಂಬ ಅಪರೂಪದ ಕಾಯಿಲೆ ಮೈಗಂಟಿಕೊಂಡಿತ್ತು. ಅದಕ್ಕಾಗಿ ಹಲವಾರು ತಿಂಗಳುಗಳ ಚಿಕಿತ್ಸೆ ಪಡೆದಿರುವ ನಟಿ ಇದೀಗ ಚೇತರಿಸಿಕೊಳ್ಳುತ್ತಿದ್ದು, ಸೋಮವಾರ ತಮ್ಮ ಮುಂಬರುವ ಚಿತ್ರವಾದ ʼಶಾಕುಂತಲಂʼ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದ ಫೋಟೋವನ್ನು ಇಟ್ಟುಕೊಂಡು ಟ್ರೋಲ್‌ ಪುಟವೊಂದು ನಟಿಯ(Samantha Troll) ಕಾಲೆಳೆದಿದೆ. ಅದಕ್ಕೆ ತಕ್ಕನಾಗಿ ನಟಿ ಕೂಡ ಪ್ರತಿಕ್ರಿಯೆ ಕೊಟ್ಟಿದ್ದು, ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.

ಇದನ್ನೂ ಓದಿ: Samantha | ʻಶಾಕುಂತಲಂʼ ಟ್ರೈಲರ್ ಲಾಂಚ್ ವೇಳೆ ಚಿತ್ರತಂಡ ಬೆಂಬಲ‌ ನೆನೆದು ಕಣ್ಣೀರು ಹಾಕಿದ ಸಮಂತಾ!

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾದ ನಿರ್ದೇಶಕರಾಗಿರುವ ಗುಣಶೇಖರ್‌ ಅವರು ಸಮಂತಾರನ್ನು ವೇದಿಕೆಯ ಮೇಲೆ ಹೊಗಳಿದ್ದರು. ಅದನ್ನು ಕೇಳಿ ಸಮಂತಾ ಭಾವುಕರಾಗಿ ಕಣ್ಣೀರು ಹಾಕಿದ್ದರು. ಅದರ ಫೋಟೋಗಳನ್ನು ಹಂಚಿಕೊಂಡಿದ್ದ ಟ್ರೋಲ್‌ ಪೇಜ್‌ ಒಂದು, “ಸಮಂತಾ ಅವರು ಸೌಂದರ್ಯ ಮತ್ತು ಕಾಂತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ವಿಚ್ಛೇದನದ ನಂತರ ಸಮಂತಾ ಮತ್ತಷ್ಟು ಗಟ್ಟಿಯಾಗಿ ವೃತ್ತಿ ಜೀವನದಲ್ಲಿ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಎಲ್ಲರೂ ನಂಬಿದ್ದರು. ಆದರೆ ಮಯೋಸಿಟಿಸ್‌ ಕಾಯಿಲೆಯಿಂದ ಸಮಂತಾ ತೀವ್ರವಾಗಿ ಬಳಲಿದ್ದಾರೆ. ಕಾಯಿಲೆ ಅವರನ್ನು ಮತ್ತೆ ಕುಗ್ಗಿಸುತ್ತಿದೆ” ಎಂದು ಆ ಫೋಟೋದಲ್ಲಿ ಬರೆಯಲಾಗಿತ್ತು.


ಈ ಪೋಸ್ಟ್‌ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಫೋಟೋವನ್ನು ಶೇರ್‌ ಮಾಡಿಕೊಂಡಿರುವ ಸಮಂತಾ ಟ್ರೋಲಿಗರಿಗೆ ಸರಿಯಾದ ರೀತಿಯಲ್ಲಿ ಉತ್ತರಿಸಿದ್ದಾರೆ. “ನಾನು ತಿಂಗಳುಗಟ್ಟಲೆ ಚಿಕಿತ್ಸೆ ಪಡೆದಂತೆ ನಿಮಗೆ ಆಗದೇ ಇರಲಿ ಎಂದು ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ. ನಿಮ್ಮ ಕಾಂತಿ ಹೆಚ್ಚಿಸುವುದಕ್ಕಾಗಿ ನನ್ನ ಪ್ರೀತಿಯನ್ನು ಕೊಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಅದರೊಂದಿಗೆ ಬಿಳಿ ಬಣ್ಣದ ಹಾರ್ಟ್‌ ಇಮೋಜಿಯನ್ನೂ ಹಾಕಿದ್ದಾರೆ.

ಇದನ್ನೂ ಓದಿ: Samantha | ವರ್ಕೌಟ್‌ ದಿನಗಳ ಬಗ್ಗೆ ಮತ್ತೆ ನೆನಪಿಸಿಕೊಂಡ ಸಮಂತಾ!
ಸಮಂತಾರ ಈ ಪ್ರತಿಕ್ರಿಯೆ ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. “ನಿಮ್ಮ ಧೈರ್ಯ ನೋಡಿ ಖುಷಿಯಾಗಿದೆ. ನಿಮ್ಮೊಂದಿಗೆ ನಾವಿದ್ದೇವೆ. ಹೆದರಬೇಡಿ” ಎಂದು ಟ್ವೀಟ್‌ಗಳನ್ನು ಮಾಡಿದ್ದಾರೆ. ಹಾಗೆಯೇ ಟ್ರೋಲ್‌ ಮಾಡಿದ್ದವರ ವಿರುದ್ಧ ನಟಿ ಪರವಾಗಿ ಮಾತನಾಡಿದ್ದ ಅಭಿಮಾನಿಯೊಬ್ಬರಿಗೆ ಉತ್ತರಿಸಿರುವ ನಟಿ, “ಏನು ಬೇಕಾದರೂ ಆಗಬಹುದಾದ ಈ ಸಮಾಜದಲ್ಲಿ ದಯಾ ಹೃದಯಿಗಳಾಗಿರೋಣ. ನೀವು ತುಂಬಾ ಒಳ್ಳೆಯವರು” ಎಂದು ಬರೆದಿದ್ದಾರೆ.

Exit mobile version