ಬೆಂಗಳೂರು : ಕಿರುತೆರೆ ನಟಿ ತುನಿಶಾ ಶರ್ಮಾ ಸಾವಿನ ಪ್ರಕರಣವು (Tunisha Sharma Death) ದೇಶಾದ್ಯಂತ ಸುದ್ದಿಯಾಗಿದೆ. ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂಬ ಆರೋಪವಿದೆ. ಇದರ ಬೆನ್ನಲ್ಲೇ, ಡಿಸೆಂಬರ್ 24ರಂದು ಸಾಯುವ ಮೊದಲು ತನ್ನ ಗೆಳೆಯ, ಸಹನಟ ಶೀಜಾನ್ ಖಾನ್ ಅವರೊಂದಿಗೆ ನಟಿ ತುನಿಶಾ ಅವರು ‘ತೀವ್ರ ವಾಗ್ವಾದ’ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.
ವಾದ ನಡೆದಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ವಾದದ ಹಿಂದಿನ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ತುನಿಶಾ ಅವರ ತಾಯಿ ಕೂಡ ಪತ್ರಿಕಾಗೋಷ್ಠಿ ನಡೆಸಿ, ಅವರು ಬೇರ್ಪಟ್ಟ ದಿನ ಶೀಜಾನ್ ತನ್ನ ಮಗಳ ಕೆನ್ನೆಗೆ ಹೊಡೆದಿದ್ದಾನೆ ಎಂದು ಆರೋಪಿಸಿದ ಕೆಲವೇ ಗಂಟೆಗಳ ನಂತರ ಸಿಸಿಟಿವಿ ಫೂಟೇಜ್ ಸಿಕ್ಕಿದೆ ಎನ್ನಲಾಗಿದೆ.
ಇದನ್ನೂ ಓದಿ | Tunisha Sharma Death | ತುನಿಶಾ ಶರ್ಮಾಳನ್ನು ಇಸ್ಲಾಂಗೆ ಮತಾಂತರಗೊಳಿಸಲು ಶಿಜಾನ್ ಒತ್ತಾಯ, ಸಂಚಲನ ಸೃಷ್ಟಿಸಿದ ನಟಿಯ ತಾಯಿ ಹೇಳಿಕೆ
ಸಂದರ್ಶನವೊಂದರಲ್ಲಿ ತುನಿಶಾ ತಾಯಿ ಮಾತನಾಡಿ, ʻʻತುನಿಶಾ ಆತ್ಮಹತ್ಯೆಯಿಂದ ಸಾಯಲು ಸಾಧ್ಯವಿಲ್ಲ. 10-15 ನಿಮಿಷಗಳಲ್ಲಿ ಏನಾಯಿತು ಎಂದು ನನಗೆ ತಿಳಿದಿಲ್ಲ. ಶೀಜಾನ್ ನನ್ನ ಮಗಳಿಗೆ ಏನು ಮಾಡಿದನೆಂದು ದೇವರಿಗೆ ತಿಳಿದಿದೆ. ಅವರು ಬ್ರೇಕ್ ಅಪ್ ಆದ ದಿನ ಶೀಜಾನ್ ಅವಳಿಗೆ ಕೆನ್ನೆಗೆ ಬಾರಿಸಿದ್ದಾನೆ,ʼʼಎಂದು ಆರೋಪಿಸಿದ್ದರು.
“ತುನಿಶಾ ಶರ್ಮಾ ಇಚ್ಛೆಯ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿತ್ತು. ಇಸ್ಲಾಂಗೆ ಮತಾಂತರ ಆಗು ಎಂದು ಶಿಜಾನ್ ಖಾನ್ ಒತ್ತಾಯಿಸುತ್ತಿದ್ದ. ಇದರಿಂದ ನನ್ನ ಮಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಯಾಗಿತ್ತು” ಎಂದು ನಟಿಯ ತಾಯಿ ವನಿತಾ ಶರ್ಮಾ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ. ಹಾಗಾಗಿ, ಕೇಸ್ ಮತ್ತಷ್ಟು ಗಂಭೀರವಾದಂತಾಗಿದೆ.
ಡಿಸೆಂಬರ್ 24ರಂದು ತುನಿಶಾ ಶರ್ಮಾ ವಸಾಯಿಯಲ್ಲಿ ಶೂಟಿಂಗ್ ಸೆಟ್‌ನ ಕೋಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಪೊಲೀಸರು ಶಿಜಾನ್ ಖಾನ್‌ನನ್ನು ಬಂಧಿಸಿದ್ದು, ಆತನ ಮೊಬೈಲ್ ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Tunisha Sharma | ‘ಅವನು ಪುಣ್ಯ ಮಾಡಿದ್ದ’; ತುನಿಶಾ ಶರ್ಮಾ ಮೃತಪಟ್ಟ ಕೋಣೆಯಲ್ಲಿ ಸಿಕ್ಕಿತೊಂದು ಪತ್ರ