ಬೆಂಗಳೂರು: ತುನಿಶಾ ಶರ್ಮಾ (Tunisha Sharma Death) ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬಂಧಿತನಾಗಿದ್ದ ಆಕೆಯ ಪ್ರಿಯಕರ ಶಿಜಾನ್ ಖಾನ್ಗೆ ಮಾರ್ಚ್ 4ರಂದು ಜಾಮೀನು ಮಂಜೂರಾಗಿದೆ. ಮಹಾರಾಷ್ಟ್ರದ ನ್ಯಾಯಾಲಯವು 1 ಲಕ್ಷ ರೂ. ಜಾಮೀನು ಬಾಂಡ್‌ನಲ್ಲಿ ತುನಿಶಾ ಶರ್ಮಾ ಸಾವಿನ ಪ್ರಕರಣದಲ್ಲಿ ನಟನಿಗೆ ಜಾಮೀನು ನೀಡಿದೆ ಮತ್ತು ಅವರ ಪಾಸ್‌ಪೋರ್ಟ್ ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಶಿಜಾನ್ ಖಾನ್ನನ್ನು ಬಂಧಿಸಲಾಗಿದ್ದು, ಅಂದಿನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ತುನಿಶಾ ಶರ್ಮಾ ಜತೆ ಸಂಬಂಧ ಹೊಂದಿದ್ದರು ಎಂದು ವರದಿಯಾಗಿತ್ತು.
ಈ ಬಗ್ಗೆ ಎಎನ್‌ಐ ಟ್ವೀಟ್ ಮಾಡಿದ್ದು ʻʻಕಿರುತೆರೆ ನಟಿ ತುನಿಶಾ ಶರ್ಮಾ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಮತ್ತು ಬಂಧಿತ ನಟ ಶಿಜಾನ್ ಖಾನ್ ನ್ಯಾಯಾಲಯವು 1 ಲಕ್ಷ ರೂ. ಶ್ಯೂರಿಟಿ ಬಾಂಡ್‌ನಲ್ಲಿ ಜಾಮೀನು ಮಂಜೂರು ಮಾಡಿದ್ದು, ಶಿಜಾನ್ ಖಾನ್ ಅವರ ಪಾಸ್‌ಪೋರ್ಟ್ ಸಲ್ಲಿಸುವಂತೆ ಕೇಳಿದ್ದಾರೆ.” ಎಂದು ಬರೆದುಕೊಂಡಿದೆ.
ಕಿರುತೆರೆ ನಟಿ ತುನಿಶಾ ಶರ್ಮಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂಬ ಕಾರಣಕ್ಕೆ ಶಿಜಾನ್ ಖಾನ್ ಬಂಧನವಾಗಿದ್ದರು .ಡಿಸೆಂಬರ್ 24ರಂದು ತುನಿಶಾ ಶರ್ಮಾ ವಸಾಯಿಯಲ್ಲಿ ಶೂಟಿಂಗ್ ಸೆಟ್‌ನ ಕೋಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಡಿ.24ರಂದು ಮಧ್ಯಾಹ್ನ ಊಟದ ಬಳಿಕ ತುನಿಶಾ ಮತ್ತು ಶಿಜಾನ್ ಮಧ್ಯೆ ಮೇಕಪ್ ಕೋಣೆಯಲ್ಲಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆದಿದೆ. ಅದಾದ ಬಳಿಕ ಇಬ್ಬರೂ ಸ್ವಲ್ಪ ಕ್ರೋಧಗೊಂಡಂತೆ ಕಂಡಿದ್ದರು ಎಂದು ಸೆಟ್ನಲ್ಲಿ ಇದ್ದವರೆಲ್ಲ ಹೇಳಿದ್ದಾಗಿ ಪೊಲೀಸರು ಕೋರ್ಟ್ಗೆ ವರದಿ ಸಲ್ಲಿಸಿದ್ದರು.