Site icon Vistara News

ನಟಿ ತುನಿಶಾರದ್ದು ಕೊಲೆ ಎಂದ ಕಂಗನಾ; ​ತನ್ನ ಪ್ರೇಮಕಥೆಯಲ್ಲಿ ‘ಪ್ರೀತಿ’ಯೇ ಇಲ್ಲ ಎಂಬ ನೋವನ್ನು ಹೆಣ್ಣು ಸಹಿಸೋದಿಲ್ಲ ಎಂದು ಪೋಸ್ಟ್​

Tunisha Sharma Murdered Says Kangana Ranaut

ಮುಂಬಯಿ: ನಟ ಸುಶಾಂತ್​ ಸಿಂಗ್​ ಮೃತಪಟ್ಟಾಗ ಅದು ಆತ್ಮಹತ್ಯೆಯಲ್ಲ, ಕೊಲೆ. ಸುಶಾಂತ್ ಸಿಂಗ್​ ರಜಪೂತ್​ ಸಾವಿಗೆ ಬಾಲಿವುಡ್​​ನಲ್ಲಿರುವ ನೆಪೋಟಿಸಂ (ಸ್ವಜನಪಕ್ಷಪಾತ) ಕಾರಣ ಎಂದು ಬಲವಾಗಿ ಪ್ರತಿಪಾದಿಸುತ್ತಿರುವ ಬಾಲಿವುಡ್​ ನಟಿ ಕಂಗನಾ ರಣಾವತ್,​ ಇದೀಗ ನಟಿ ತುನಿಶಾ ಶರ್ಮಾಳದ್ದೂ ಕೊಲೆ ಎಂದೇ ಹೇಳುತ್ತಿದ್ದಾರೆ.

ಬಾಲಿವುಡ್​​ನ ಕಿರತೆರೆ ನಟಿ ತುನಿಶಾ ಅವರು ಡಿಸೆಂಬರ್​ 24ರಂದು ಮಹಾರಾಷ್ಟ್ರದ ಪಾಲ್ಘರ್​​ನಲ್ಲಿರುವ ಶೂಟಿಂಗ್​ ಸೆಟ್​​ನಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕೇಸ್​​ನಲ್ಲಿ ತುನಿಶಾ ಮಾಜಿ ಪ್ರಿಯಕರ ಶಿಜಾನ್​ ಮೊಹಮ್ಮದ್​ ಖಾನ್​​ನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ತುನಿಶಾ ಮತ್ತು ಶಿಜಾನ್​ ನಡುವೆ ಪ್ರೇಮ ಸಂಬಂಧವಿತ್ತು. ಇತ್ತೀಚೆಗಷ್ಟೇ ಶಿಜಾನ್​ ಬ್ರೇಕಪ್​ ಮಾಡಿಕೊಂಡಿದ್ದ. ಹೀಗಾಗಿ ಮನನೊಂದು ಖಿನ್ನತೆಗೆ ಜಾರಿದ್ದ ತುನಿಶಾ, ಶೂಟಿಂಗ್​ ಸೆಟ್​​ನಲ್ಲಿ ಶಿಜಾನ್​ ಮೇಕಪ್​ ಕೋಣೆಯಲ್ಲಿರುವ ಶೌಚಗೃಹದಲ್ಲೇ ನೇಣುಬಿಗಿದುಕೊಂಡು ಮೃತಪಟ್ಟಿದ್ದಾರೆ.

ತುನಿಶಾ ಸಾವಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಕಂಗನಾ ರಣಾವತ್​ ‘ಮಹಿಳೆ ಎಲ್ಲವನ್ನೂ ನಿಭಾಯಿಸಬಲ್ಲಳು. ನಿಜವಾದ ಪ್ರೀತಿ ಕಳೆದು ಹೋದಾಗ, ಮದುವೆ ಮುರಿದು ಬಿದ್ದಾಗ, ಸಂಬಂಧ ಒಡೆದು ಹೋದಾಗ ಅಥವಾ ಪ್ರೀತಿಸಿದವರು ದೂರವಾದಾಗಿನ ಕ್ಷಣಗಳನ್ನು ಸ್ತ್ರೀಯಾದವಳು ನಿಭಾಯಿಸುತ್ತಾಳೆ, ಆ ನೋವುಗಳನ್ನೆಲ್ಲ ಸಹಿಸಿಕೊಂಡು ಬದುಕು ಮುಂದುವರಿಸುತ್ತಾಳೆ. ಆದರೆ ತನ್ನ ಪ್ರೇಮಕಥೆಯಲ್ಲಿ ‘ಪ್ರೀತಿ’ಯೇ ಇಲ್ಲ ಎಂಬುದನ್ನು ಆಕೆ ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಅಂದರೆ, ತಾನು ಪ್ರೀತಿಸಿದವನು, ತನ್ನನ್ನು ಪ್ರೀತಿಸಿಯೇ ಇಲ್ಲ, ಸುಮ್ಮನೆ ಜತೆಗಿದ್ದ ಎಂಬುದನ್ನು ಆಕೆ ಯಾವತ್ತಿಗೂ ಸಹಿಸಲಾರಳು. ಆ ನೋವನ್ನು ತಡೆದುಕೊಳ್ಳಲು ಆಕೆಗೆ ಸಾಧ್ಯವಾಗುವುದೇ ಇಲ್ಲ. ಪ್ರೀತಿಸಿಕೊಂಡ ವ್ಯಕ್ತಿ ತಿರುಗಿ ಪ್ರೀತಿಸಿಲಿಲ್ಲ. ಆತ ಇವಳನ್ನು ಕೇವಲ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬಳಸಿಕೊಂಡ. ಅವಳ ಪ್ರೀತಿ ಮತ್ತು ದುರ್ಬಲತೆಯನ್ನೇ ಅಸ್ತ್ರವಾಗಿಸಿಕೊಂಡು, ಆಕೆಯನ್ನೇ ಶೋಷಿಸಿದ. ಈ ವಿಷಯ ಆಕೆಯ ಅರಿವಿಗೆ ಬರುತ್ತಿದ್ದಂತೆ, ಅವಳು ತನ್ನನ್ನೇ ವಿರೂಪಗೊಳಿಸಿಕೊಳ್ಳಲು ಪ್ರಾರಂಭಿಸಿದಳು. ಅಂತಿಮವಾಗಿ ಒಂದು ಶಾಕಿಂಗ್​ ನಿರ್ಧಾರ ತೆಗೆದುಕೊಂಡುಬಿಟ್ಟಿದ್ದಾಳೆ. ನಾನು ಪ್ರೀತಿಸಲ್ಪಡುತ್ತಿಲ್ಲ ಎಂಬ ವಾಸ್ತವ ಅರ್ಥವಾಗುತ್ತಿದ್ದಂತೆ ಅವಳು ತನ್ನ ಗ್ರಹಿಕಾ ಸಾಮರ್ಥ್ಯ ಕಳೆದುಕೊಂಡಳು. ಇದ್ದರೂ-ಸತ್ತರೂ ಏನೂ ವ್ಯತ್ಯಾಸ ಇಲ್ಲ ಎಂಬ ಸ್ಥಿತಿ ಅದು. ಹಾಗಾಗಿಯೇ ಆಕೆ ತನ್ನ ಜೀವನನ್ನು ಕೊನೆಗೊಳಿಸಿಕೊಂಡಳು. ಅವಳು ಒಬ್ಬಳೇ ಇದನ್ನು ಮಾಡಿಲ್ಲ. ಇದೊಂದು ಕೊಲೆ ಎಂದೇ ಭಾವಿಸಬೇಕು’ ಎಂದು ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ.

ಹಾಗೇ, ‘ಪ್ರೀತಿಸಿದವಳ/ಮದುವೆಯಾದವಳ ಒಪ್ಪಿಗೆ ಇಲ್ಲದೆ ಪುರುಷರು ಬಹುಪತ್ನಿಯರನ್ನು/ ಹಲವು ಹುಡುಗಿಯರ ಜತೆ ಸಂಬಂಧ ಇಟ್ಟುಕೊಳ್ಳುವುದನ್ನು ಕ್ರಿಮಿನಲ್​ ಅಪರಾಧ ಎಂದೇ ಪರಿಗಣಿಸಬೇಕು. ಒಬ್ಬ ಮಹಿಳೆಯನ್ನು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಕಾಳಜಿ ಮಾಡದೆ, ಆಕೆಯ ಭಾವನೆಗಳ ಜವಾಬ್ದಾರಿಯನ್ನು ತೆಗೆದುಕೊಳ್ಳದೆ ಕೇವಲ ಲೈಂಗಿಕವಾಗಿ ಬಳಸಿಕೊಂಡು ನಂತರ ಏಕಾಏಕಿ, ಸರಿಯಾದ ಕಾರಣವೇ ಇಲ್ಲದೆ ಸಂಬಂಧ ಮುರಿದುಕೊಳ್ಳುವುದು ಕೂಡ ಕ್ರಿಮಿನಲ್​ ಅಪರಾಧ ಆಗಬೇಕು’ ಎಂದು ಕಂಗನಾ ಇನ್​ಸ್ಟಾಗ್ರಾಂ ಸ್ಟೋರಿ ಹಾಕಿದ್ದಾರೆ.

‘ನಾವು ನಮ್ಮ ಹೆಣ್ಣುಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಹೆಣ್ಣನ್ನು ಸಂರಕ್ಷಿಸಿ, ಕಾಪಾಡಿಕೊಳ್ಳುವುದು ಸರ್ಕಾರಗಳ ಹೊಣೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗಮನ ಹರಿಸಲಿ. ಹೆಣ್ಣನ್ನು ಗೌರವಿಸದ ನೆಲ ನಾಶವಾಗುತ್ತದೆ. ಶ್ರೀರಾಮ, ಕೃಷ್ಣ ಎಲ್ಲರೂ ಮಹಿಳೆಯರನ್ನು ಗೌರವಿಸಿದವರು. ಇಂಥ ನಾಡಿನಲ್ಲಿ ಮಹಿಳೆಯರ ಮೇಲೆ ಆ್ಯಸಿಡ್​ ಹಾಕುವುದು, ಅವರನ್ನು ಕತ್ತರಿಸಿ, ತುಂಡರಿಸಿ ಕೊಲ್ಲುವುದು ನಿಜಕ್ಕೂ ಆಘಾತಕಾರಿ. ಇಂಥ ಕೃತ್ಯಗಳನ್ನು ಎಸಗಿದವರ ವಿರುದ್ಧ ತತ್​ಕ್ಷಣದ ಕ್ರಮ ಜರುಗಬೇಕು. ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

ಇದನ್ನೂ ಓದಿ: Kangana Ranaut | ನಾನು ಯಾವತ್ತೂ ಆ ರೀತಿ ಡ್ಯಾನ್ಸ್‌ ಮಾಡಿಲ್ಲ: ಕಂಗನಾ ರಣಾವತ್

Exit mobile version