ಬೆಂಗಳೂರು : ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರದ ಕುರಿತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ನಟ ಅನುಪಮ್ ಖೇರ್ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ನಡುವೆ ಟ್ವೀಟ್ ವಾರ್ ಶುರುವಾಗಿದೆ. ಶಶಿ ತರೂರ್ ತಮ್ಮ ಟ್ವೀಟ್ ಮೂಲಕ ʼʼಭಾರತದ ಆಡಳಿತ ಪಕ್ಷ ಪ್ರೋತ್ಸಾಹಿಸಿದ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಸಿಂಗಾಪುರ್ ಬ್ಯಾನ್ ಮಾಡಿದೆʼʼ ಎಂದು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
ವಿವೇಕ್ ಅಗ್ನಿಹೋತ್ರ ನಿರ್ದೇಶನದಲ್ಲಿ ಬಂದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ದೇಶಾದ್ಯಂತ ಹವಾ ಕ್ರಿಯೇಟ್ ಮಾಡಿದ್ದಲ್ಲದೆ ಈ ಸಿನಿಮಾಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ನಾನಾ ರಾಜ್ಯಗಳ ಮುಖ್ಯಮಂತ್ರಿಗಳು ತೆರಿಗೆ ವಿನಾಯಿತಿಯನ್ನೂ ಸಹ ನೀಡಿದ್ದರು. ನಾನಾ ದೇಶಗಳಲ್ಲಿ, ರಾಜ್ಯಗಳಲ್ಲಿ ಯಶಸ್ವಿ ಪ್ರದರ್ಶನವನ್ನೂ ಕಂಡಿತ್ತು. ಸಿಂಗಾಪುರದಲ್ಲಿ ಈ ಸಿನಿಮಾವನ್ನು ಪ್ರದರ್ಶಿಸಬೇಕೆಂದು ಚಿತ್ರತಂಡ ನಿರ್ಧರಿಸಿತ್ತು. ಆದರೆ ಈ ಸಿನಿಮಾವನ್ನು ಸಿಂಗಾಪುರದಲ್ಲಿ ಬ್ಯಾನ್ ಮಾಡಲಾಗಿದೆ. ʼʼದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಏಕಮುಖವಾಗಿ ಚಿತ್ರೀಕರಿಸಲಾಗಿದ್ದು, ಸಂಘರ್ಷಕ್ಕೆ ಕಾರಣ ಆಗುವ ಸಂಭವವಿದೆʼʼ ಎಂದು ಅಲ್ಲಿನ ಆಡಳಿತ ಅಭಿಪ್ರಾಯ ಪಟ್ಟಿದೆ ಎಂದು ಹೇಳಲಾಗಿದೆ.
1990ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಹಿಂದೂಗಳ ಮಾರಣಹೋಮ ಆಧಾರಿತ ಸಿನಿಮಾವಾಗಿದ್ದು, ಕಾಶ್ಮೀರ ಪಂಡಿತರ ಹತ್ಯೆಯನ್ನು ಪ್ರಮುಖವಾಗಿ ಕೇಂದ್ರೀಕರಿಸಿದೆ. ನೈಜ ಘಟನೆ ಆಧಾರಿತ ಚಿತ್ರವಾಗಿರುವ ಇದು, ಸಿಂಗಾಪುರ ದೇಶದ ಸಿನಿಮಾ ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.
ಈ ಟ್ವೀಟ್‌ಗೆ ಉತ್ತರಿಸಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ʼʼಕಾಶ್ಮೀರ ಪಂಡಿತರ ವಿಚಾರದಲ್ಲಿ ಹಾಸ್ಯ ಮಾಡುವುದು ನಿಲ್ಲಿಸಿ. ಸಿಂಗಾಪುರವು ಲೀಲಾ ಹೊಟೇಲ್ ಫೈಲ್ಸ್ ಸಿನಿಮಾವನ್ನೂ ಬ್ಯಾನ್ ಮಾಡಬಹುದುʼʼ ಎಂದು ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಈ ವಿಚಾರದಲ್ಲಿ ಶಶಿ ತರೂರ್ ಅವರ ದಿವಗಂತ ಪತ್ನಿ ಸುನಂದಾ ಪುಷ್ಕರ್ ಅವರನ್ನು ಎಳೆದಿದ್ದಾರೆ.
ಮಾರ್ಚ್ 12 ರಂದು ಈ ಚಿತ್ರ ಬಿಡುಗಡೆಗೊಂಡಿದ್ದು, ಇದೂವರೆಗೂ ಕೋಟಿ ಕಲೆಕ್ಷನ್ ಮಾಡ್ತಾ ಇದೆ.