ಬೆಂಗಳೂರು: ಪೃಥ್ವಿ ಅಂಬಾರ್ (Dooradarshana) ನಟನೆಯ ದೂರದರ್ಶನ ಸಿನಿಮಾ ಟೈಟಲ್‌ನಿಂದ ಮಾತ್ರವಲ್ಲದೆ, ಪೋಸ್ಟರ್ ಹಾಗೂ ಟೀಸರ್‌ನಿಂದಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಈಗ ದೂರದರ್ಶನದ ಇನ್ನೊಂದು ಕ್ಯಾರೆಕ್ಟರ್ ಅನ್ನು ಪರಿಚಯಿಸಲಾಗಿದೆ. ರೌಡಿಸಂ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಉಗ್ರಂ ಮಂಜು ಇಲ್ಲಿ ವಿಶೇಷ ಪಾತ್ರದೊಂದಿಗೆ ತೆರೆಯತ್ತ ದಾವಿಸಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಮನುಷ್ಯ ಎಂದ ಮೇಲೆ ವೈಫಲ್ಯಗಳು ಇದ್ದೇ ಇರುತ್ತದೆ. ಹಾಗೇ ಒಂದು ಗುರಿಯೂ ಇರುತ್ತದೆ. ಇವುಗಳನ್ನು ಎಷ್ಟೇ ಅಡೆತಡೆ ಇದ್ದರೂ ಮೆಟ್ಟಿ ನಿಲ್ಲುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸದಲ್ಲಿ ಚಿತ್ರತಂಡವಿದೆ. ಇಲ್ಲಿ ಮಂಜು ಕಾರ್ಯಕಾರಿ ನಿರ್ಮಾಪಕ, ಕಲಾ ವಿನ್ಯಾಸಕಾರರಾಗಿಯೂ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ.
ಪೃಥ್ವಿ ಅಂಬಾರ್‌ಗೆ ಅಯಾನಾ ಜೋಡಿಯಾಗಿದ್ದಾರೆ. ಮೈತ್ರಿ ಎಂಬ ಪಾತ್ರದಲ್ಲಿ ನಟಿ ಅಯಾನಾ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಹರಿಣಿ, ದೀಪಕ್ ರೈ ಪಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ.
ಇದನ್ನೂ ಓದಿ | Pruthvi Ambaar | ದೂರದರ್ಶನದಲ್ಲಿ ಪೃಥ್ವಿ ಅಂಬಾರ್ ಜತೆಯಾದ ನಟಿ ಅಯನಾ
ಸುಕೇಶ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗುತ್ತಿರುವ “ದೂರದರ್ಶನ” ಚಿತ್ರ ಈಗಷ್ಟೇ ಡಬ್ಬಿಂಗ್ ಮುಗಿಸಿ ಶೀಘ್ರದಲ್ಲಿ ತೆರೆಗೆ ತರಲು ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಸಿನಿಮಾವನ್ನು ವಿಎಸ್ ಮೀಡಿಯಾ ಎಂಟರ್‌ಪ್ರೈಸಸ್ ಬ್ಯಾನರ್ ಅಡಿ ರಾಜೇಶ್ ಭಟ್ ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ನಂದೀಶ್ ಟಿಜಿ ಸಂಭಾಷಣೆ, ಪ್ರದೀಪ್ ಆರ್ ರಾವ್ ಸಂಕಲನ ಸಿನಿಮಾಕ್ಕಿದೆ.
ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಒಂದು ಚಿಕ್ಕ ಊರೊಳಗೆ ಟಿವಿ ಬಂದ ಮೇಲೆ ಹೇಗೆಲ್ಲ ಪ್ರಭಾವ ಬೀರುತ್ತದೆ. ಅಂದಿನ ಕಾಲಘಟ್ಟದ ಹಲವಾರು ವಿದ್ಯಮಾನಗಳು ಈ ಚಿತ್ರದಲ್ಲಿವೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.
ಪೃಥ್ವಿ ಅಂಬಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಪೃಥ್ವಿ ಅಂಬಾರ್ ನಟನೆಯ ಶುಗರ್‌ಲೆಸ್ ಸೆ.23ಕ್ಕೆ ವೂಟ್‌ನಲ್ಲಿ ರಿಲೀಸ್ ಆಗುತ್ತಿದೆ. ಪೃಥ್ವಿ ಅಂಬಾರ್ ಹಾಗೂ ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್ ನಾಯಕರಾಗಿ ನಟಿಸುತ್ತಿರುವ ಸಿನಿಮಾಗೆ ಭುವನಂ ಗಗನಂ ಎಂಬ ಟೈಟಲ್ ಇಡಲಾಗಿದ್ದು, ಗಿರೀಶ್ ಮೂಲಿಮನಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ.
ಇದನ್ನೂ ಓದಿ | ಎಲ್ಲರೂ ಒಟ್ಟಾಗಿ ಕುಳಿತು ದೂರದರ್ಶನದಲ್ಲಿ ಸ್ವರಾಜ್ ವಿಶೇಷ ಸರಣಿ ವೀಕ್ಷಿಸಿದ ಪ್ರಧಾನಿ ಮೋದಿ, ಕೇಂದ್ರ ಸಚಿವರು