ಬೆಂಗಳೂರು: ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಮಾಪಕರ ಸಂಘದ ಚುನಾವಣೆ ಭಾನುವಾರ (ಆಗಸ್ಟ್ 14) ನಡೆದಿದೆ. ಅಧ್ಯಕ್ಷರಾಗಿ ಉಮೇಶ್ ಬಣಕಾರ್ ಆಯ್ಕೆಯಾಗಿದ್ದಾರೆ. ಆದರೆ ಚುನಾವಣೆ ಸಮಯದಲ್ಲಿ ಕೆಲವು ನಿರ್ಮಾಪಕರು ಗಲಾಟೆ ಮಾಡಿದ ಕಾರಣ ಕೆಲ ಹೊತ್ತು ಆತಂಕ ಸೃಷ್ಟಿಯಾಯಿತು.
ʻಸಿನಿಮಾಗಳಿಗೆ ನೀಡುವ ಸಬ್ಸಿಡಿಗಾಗಿ ಕಮಿಷನ್ ದಂಧೆ ನಡೆಯುತ್ತಿದೆ. ಪ್ರತಿ ಸಿನಿಮಾ ಸಬ್ಸಿಡಿಗಾಗಿ ಎರಡು ಲಕ್ಷ ರೂ. ಹಣವನ್ನು ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳಬೇಕು. ನಿರ್ಮಾಪಕರ ಉಳಿವಿಗೆ ಪೂರಕ ಆಗುವ ಕೆಲಸ ಆಗಬೇಕುʼ ಎಂದು ಕೆಲವು ನಿರ್ಮಾಪಕರು ಗಲಾಟೆ ಮಾಡಿದರು.
ಈ ಹಿಂದೆ ನಿರ್ಮಾಪಕರ ಸಂಘದ ಚುನಾವಣೆ ಪ್ರಕ್ರಿಯೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಚುನಾವಣೆಯನ್ನು ತಡೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ನಟಿ ಪ್ರಮೀಳಾ ಜೋಷಾಯ್ ಮತ್ತು ಕೆಲವು ನಿರ್ಮಾಪಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.