ಬೆಂಗಳೂರು: ಅಕ್ಟೋಬರ್ 6ರ ಶುಕ್ರವಾರ ಹಲವು ಕನ್ನಡ ಸಿನಿಮಾಗಳು (Upcoming Kannada Movies) ತೆರೆ ಕಾಣುತ್ತಿದೆ. ಈ ಬಾರಿ ಇನ್ನೂ ವಿಶೇಷ ಅಂದರೆ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ರಿಲೀಸ್ ಆಗುತ್ತಿದೆ. ಈ ಮೂಲಕ ಕೊನೆ ಬಾರಿಗೆ ಚಿರು ಫ್ಯಾನ್ಸ್ ನಟನನ್ನು ಸ್ಕ್ರೀನ್‌ನಲ್ಲಿ ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಲಿಸ್ಟ್ ಇಲ್ಲಿದೆ.
ರಾಜಮಾರ್ತಾಂಡ
ರಾಮ್‌ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದಿದ್ದ ರಾಜಮಾರ್ತಾಂಡ ಸಿನಿಮಾ, ಧ್ರುವ ಸರ್ಜಾ (Dhruva Sarja) ಅವರ ಜನುಮದಿನದ ನಿಮಿತ್ತ ರಿಲೀಸ್ ಆಗಲಿದೆ. ಅಕ್ಟೋಬರ್ 6ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಚಿರಂಜೀವಿ ಸರ್ಜಾ ಅವರು ನಿಧನರಾದಾಗ ಚಿತ್ರದ ಡಬ್ಬಿಂಗ್ ಆಗಿರಲಿಲ್ಲ. ಸಹೋದರ ಧ್ರುವ ಸರ್ಜಾ ಧ್ವನಿ ನೀಡಿ ಜೀವ ತುಂಬಿದ್ದರು. ಶಿವಕುಮಾರ್ ನಿರ್ಮಾಣದ ಚಿತ್ರ ಇದಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು ಚಿರಂಜೀವಿ ಸರ್ಜಾ, ದೀಪ್ತಿ ಸತಿ, ತ್ರಿವೇಣಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
‘ಆಡೇ ನಮ್ God’
ಆಡನ್ನು ದೇವರಾಗಿ ಪೂಜೆ ಮಾಡಿದಾಗ ಏನೆಲ್ಲಾ ಆಗುತ್ತದೆ ಎನ್ನುವ ಕಥಾಹಂದರ ಹೊಂದಿರುವ ‘ಆಡೇ ನಮ್ God’ ಸಿನಿಮಾದ ಟ್ರೈಲರ್ ಈಗಾಗಲೇ ಅನಾವರಣಗೊಂಡಿದೆ. ಹಿರಿಯ ನಿರ್ದೇಶಕ ಪಿ.ಎಚ್. ವಿಶ್ವನಾಥ್. ಪ್ರೊ. ಬಿ. ಬಸವರಾಜ್ ಹಾಗೂ ರೇಣುಕಾ ಬಸವರಾಜ್ ‘ಆಡೇ ನಮ್ God’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್ ಶೂನ್ಯ, ಸಾರಿಕ ರಾವ್, ಬಿ ಸುರೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಅಕ್ಷಯ್ ವಿಶ್ವನಾಥ್ ಚಿತ್ರಕಥೆ-ಸಹ ನಿರ್ದೇಶನ ‘ಆಡೇ ನಮ್ God’ ಚಿತ್ರಕ್ಕಿದೆ.
ಇದನ್ನೂ ಓದಿ: ಚಿರು ಸರ್ಜಾ ಕೊನೆ ಚಿತ್ರ ರಾಜಮಾರ್ತಾಂಡ ಬಿಡುಗಡೆ ಯಾವಾಗ? 23ರಂದು ಗೊತ್ತಾಗುತ್ತೆ!
ಆರ್.ಕೆ. ಸ್ವಾಮಿನಾಥನ್ ಸಂಗೀತ, ಶಶಿಕುಮಾರ್ ಎಸ್ ಹಿನ್ನೆಲೆ ಸಂಗೀತದ ಹಾಡುಗಳಿಗೆ ಹೃದಯ ಶಿವ-ನಿತಿನ್ ನಾರಾಯಣ್ ಸಾಹಿತ್ಯ ಬರೆದಿದ್ದು, ರವೀಂದ್ರ ಸೊರಗಾವಿ-ಚೇತನ್ ನಾಯಕ್ ಧ್ವನಿಯಾಗಿದ್ದಾರೆ. ಬಿ.ಬಿ.ಆರ್ ಫಿಲಂಸ್ ಹಾಗೂ ಎವೆರೆಸ್ಟ್ ಇಂಡಿಯಾ ಎಂಟರ್ ಟೈನರ್ಸ್ ಬ್ಯಾನರ್ ನಡಿ ಪ್ರೊ.ಬಿ. ಬಸವರಾಜ್ ಹಾಗೂ ರೇಣುಕಾ ಬಸವರಾಜ್ ನಿರ್ಮಾಣ ಮಾಡಿದ್ದಾರೆ.
ಫೈಟರ್
ವಿನೋದ ಪ್ರಭಾಕರ್ ನಾಯಕನಾಗಿ ನಟಿಸುತ್ತಿರುವ ‘ಫೈಟರ್’ ಸಿನಿಮಾ ಇದೇ ಅ.6ರಂದು ತೆರೆಗೆ ಬರುತ್ತಿದೆ. ಲೇಖಾ ಚಂದ್ರಾ, ಪಾವನಾ ಗೌಡ, ರಾಜೇಶ್ ನಟರಂಗ ಮೊದಲಾದವರು ನಟಿಸಿದ್ದಾರೆ. ನೂತನ್ ಉಮೇಶ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಗುರು ಕಿರಣ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ದಕ್ಷಿಣ ಭಾರತದ ಖ್ಯಾತ ನಟ ಎಂಆರ್ ರಾಧಾ ಅವರ ಪುತ್ರಿ ನಿರೋಷಾ ಇದರಲ್ಲಿ ಬಣ್ಣ ಹಚ್ಚಿದ್ದಾರೆ.
ಅಭಿರಾಮಚಂದ್ರ
ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೊನ ಪ್ರೇಮ ಕಥಾ ಹಂದರ ಒಳಗೊಂಡಿರುವ ʼಅಭಿರಾಮಚಂದ್ರʼ (Abhi Raama Chandra) ಸಿನಿಮಾದ (Kannada New Movie) ಟ್ರೈಲರ್ ಈಗಾಗಲೇ ರಿಲೀಸ್ ಆಗಿದೆ. ನಟ ಪ್ರಮೋದ್ ಶೆಟ್ಟಿ ಹಾಗೂ ದೀಕ್ಷಿತ್ ಶೆಟ್ಟಿ ಟ್ರೈಲರ್ ರಿಲೀಸ್ ಮಾಡಿ ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಗೇಂದ್ರ ಗಾಣಿಗ ನಿರ್ದೇಶನ ʼಅಭಿರಾಮಚಂದ್ರʼ ಸಿನಿಮಾ ಅಕ್ಟೋಬರ್ 6ಕ್ಕೆ ಬಿಡುಗಡೆಯಾಗುತ್ತಿದೆ.
ʼಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ನಾಗೇಂದ್ರ ಗಾಣಿಗ “ಅಭಿರಾಮಚಂದ್ರ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ʼಅಭಿರಾಮಚಂದ್ರ’ ಸಿನಿಮಾದಲ್ಲಿ ರಥ ಕಿರಣ, ಸಿದ್ದು ಮೂಲಿಮನಿ, ನಾಟ್ಯರಂಗ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶಿವಾನಿ ರೈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಉಳಿದಂತೆ ವೀಣಾ ಸುಂದರ್, ಸುಂದರ್, ಎಸ್. ನಾರಾಯಣ್, ಪ್ರಕಾಶ್ ತುಮ್ಮಿನಾಡು, ಪವನ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಎ.ಜಿ.ಎಸ್ ಎಂಟರ್ಟೈನ್ಮೆಂಟ್ ಹಾಗೂ ರವಿ ಬಸ್ರೂರು ಮ್ಯೂಸಿಕ್ ಮತ್ತು ಮೂವೀಸ್’ ಬ್ಯಾನರ್‌ನಡಿ ಎ. ಜಿ. ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: Book Release: ಅ.1ರಂದು ಪಿ.ಸಾಯಿನಾಥ್ ರಚನೆಯ ʼಕೊನೆಯ ಹೀರೋಗಳುʼ ಕನ್ನಡ ಅನುವಾದ ಕೃತಿ ಬಿಡುಗಡೆ, ಉಪನ್ಯಾಸ- ಸಂವಾದ
ಲವ್
ಹಾರರ್ ಸಿನಿಮಾ ‘ಓ’ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಮಹೇಶ್ ಅಮ್ಮಲಿದೊಡ್ಡಿ ಈಗ ಲವ್ ಎಂಬ ರೊಮ್ಯಾಂಟಿಕ್ ಸಿನಿಮಾದೊಂದಿಗೆ ಬಂದಿದ್ದಾರೆ. ಪ್ರಜಯ್ ಜಯರಾಮ್, ವೃಷಿ ಪಾಟೀಲ್ ಮತ್ತು ದಿವಾಕರ್, ಪ್ರಭಾಕರ್ ಕುಂದರ್, ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ್, ಹರೀಶ್ ಶೆಟ್ಟಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಲವ್ ಅಕ್ಟೋಬರ್ 6ರಂದು ಬಿಡುಗಡೆಯಾಗಲಿದೆ. ಬಿಕೆ ಗಂಗಾಧರ್ ಚಿತ್ರದ ವಿತರಣೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಹಿಂದೆ ಕಂಬ್ಳಿಹುಳ ಚಿತ್ರಕ್ಕೆ ಕೆಲಸ ಮಾಡಿದ್ದ ಶಿವಪ್ರಸಾದ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದು, ಸಾಯಿ ಶ್ರೀ ಕಿರಣ್ ಮತ್ತು ರೋಶಿತ್ ವಿಜಯನ್ ಸಂಗೀತ ಸಂಯೋಜನೆ ಮಾಡಿದ್ದಾರೆ.