Site icon Vistara News

Upcoming Movies: ನಾಳೆ ತೆರೆ ಕಾಣಲಿರುವ ಸಿನಿಮಾಗಳಿವು!

Upcoming Movies Tomorrow

ಬೆಂಗಳೂರು: ಏಪ್ರಿಲ್​ 28 ರಂದು ಹೊಸ ಸಿನಿಮಾಗಳು ರಿಲೀಸ್‌ (Upcoming Movies) ಆಗುತ್ತಿವೆ. ಕನ್ನಡದಲ್ಲಿ ಜಗ್ಗೇಶ್​ ನಟನೆಯ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾ, ವಿಜಯ್​ ರಾಘವೇಂದ್ರ ನಟನೆಯ ‘ರಾಘು’ ಚಿತ್ರ ಕೂಡ ಬಿಡುಗಡೆಗೊಳ್ಳುತ್ತಿದೆ. ಬಹುತಾರಾಗಣದ ‘ಪೊನ್ನಿಯನ್​ ಸೆಲ್ವನ್​ 2’ (Ponniyin Selvan 2) ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ಅಖಿಲ್​ ಅಕ್ಕಿನೇನಿ ಅಭಿನಯದ ‘ಏಜೆಂಟ್​’ ಸಿನಿಮಾ ಕೂಡ ಚಿತ್ರಮಂದಿರಕ್ಕೆ ಬರುತ್ತಿದೆ.

‘ರಾಘವೇಂದ್ರ ಸ್ಟೋರ್ಸ್​’

ನವರಸ ನಾಯಕ ಜಗ್ಗೇಶ್‌ (Actor Jaggesh) ಅವರು ತಮ್ಮ ನಟನೆಯ ಮೂಲಕವೇ ವೀಕ್ಷಕರಿಗೆ ನಗುವಿನ ಕಚಗುಳಿ ಇಡುವವರು. ಹೊಂಬಾಳೆ ಸಂಸ್ಥೆ (Hombale Films) ನಿರ್ಮಾಣದ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಮೂಲಕ ವೀಕ್ಷಕ ಮಹಾಪ್ರಭುಗಳಿಗೆ ಮನೋರಂಜನೆ ನೀಡಲು ಸಿದ್ಧರಾಗಿದ್ದಾರೆ. ಹೊಂಬಾಳೆ ಬ್ಯಾನರ್‌ ಅಡಿಯಲ್ಲಿ ಸಿದ್ಧವಾಗಿರುವ ಸಿನಿಮಾಕ್ಕೆ ರಾಜಕುಮಾರ ಸಿನಿಮಾ ಖ್ಯಾತಿಯ ಸಂತೋಷ್‌ ಆನಂದ್‌ ರಾಮ್‌ ಅವರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಹಾಸ್ಯಭರಿತವಾಗಿರುವ ಈ ಸಿನಿಮಾದಲ್ಲಿ ಜಗ್ಗೇಶ್‌ ಅವರು 40 ವರ್ಷ ದಾಟಿದರೂ ಇನ್ನೂ ಮದುವೆಯಾಗದ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕಾಮಿಡಿ ಕಿಂಗ್ ಜಗೇಶ್, ರವಿಶಂಕರ್‌ ಗೌಡ ಮತ್ತು ನಟಿ ಶ್ವೇತಾ ಶ್ರೀವಾಸ್ತವ್‌ ಅಭಿನಯಿಸುತ್ತಿದ್ದಾರೆ.

ರಾಘು ಸಿನಿಮಾ

ಇದೇ 28ಕ್ಕೆ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Vijay Raghavendra) ನಟಿಸಿರುವ ಸೋಲೋ ಚಿತ್ರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಒಂದಿಷ್ಟು ಕೌತುಕಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ರಾಘು ಸಿನಿಮಾ ಪೂರ್ತಿ ವಿಜಯ್ ರಾಘವೇಂದ್ರ ಒಬ್ಬರೇ ಕಾಣಿಸಿಕೊಳ್ಳಲಿದ್ದಾರೆ. ಯುವ ನಿರ್ದೇಶಕ ಎಂ ಆನಂದ್ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಾಘು ಸಿನಿಮಾ ಕನ್ನಡದ ಮಟ್ಟಿಗೆ ಪ್ರಯೋಗಾತ್ಮಕ ಚಿತ್ರವಾಗಿದೆ.

ಹೊಸ ಬಗೆ ಥ್ರಿಲ್ ನೀಡುವ ಈ ಸಿನಿಮಾ ಪೂರ್ತಿ ವಿಜಯ್ ರಾಘವೇಂದ್ರ ಒಬ್ಬರೇ ಇರಲಿದ್ದಾರೆ. ಇದನ್ನು ಸೋಲೋ ಆ್ಯಕ್ಟಿಂಗ್ ಸಿನಿಮಾ ಎನ್ನಬಹುದು. ಆನ ಹಾಗೂ ಬ್ಯಾಂಗ್ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಆನಂದ್ ಅವರಿಗೆ ರಾಘು ಚೊಚ್ಚಲ ಹೆಜ್ಜೆ. ಮೊದಲ ಹೆಜ್ಜೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿರುವುದು ಕುತೂಹಲ ಹೆಚ್ಚಿಸಿದೆ.ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದ್ದು, ಉದಯ್ ಲೀಲಾ ಛಾಯಾಗ್ರಹಣ, ವಿಜತೇತ್ ಚಂದ್ರ ಸಂಕಲನ, ರಿತ್ವಿಕ್ ಮುರುಳಿದರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸೂರಜ್ ಜೋಯಿಸಿ ಸಂಗೀತ ನಿರ್ದೇಶನ ಮಾಡಿರುವ ಚಿತ್ರದ ಎರಡು ಹಾಡುಗಳಿಗೆ ವಾಸುಕಿ ವೈಭವ್ ಹಾಗೂ (ಆಲ್‌ ಒಕೆ) all ok ಧ್ವನಿಯಾಗಿದ್ದಾರೆ.

ಇದನ್ನೂ ಓದಿ: Upcoming Movies: ಈ ವಾರ ಸಲ್ಮಾನ್‌ ಖಾನ್‌ ಜತೆ ಪೈಪೋಟಿ ನೀಡುತ್ತಿರುವ ಕನ್ನಡ ಸಿನಿಮಾಗಳು ಯಾವವು?

ಪೊನ್ನಿಯನ್​ ಸೆಲ್ವನ್​ 2

ಎ.ಆರ್.ರೆಹಮಾನ್ ಸಂಗೀತ, ರವಿವರ್ಮನ್ ಕ್ಯಾಮೆರಾ, ಸ್ಟಾರ್ – ಅನುಭವಿ ಕಲಾವಿದರ ನಟನೆ, ಅದ್ಧೂರಿ ಮೇಕಿಂಗ್ ಎಲ್ಲವೂ ಸಿನಿರಸಿಕರ ಗಮನ ಸೆಳೆದಿತ್ತು. ಎಲ್ಲೆಡೆ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಚಿತ್ರತಂಡದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ʻಪೊನ್ನಿಯನ್ ಸೆಲ್ವನ್ ಭಾಗ-1′ ವಿಶ್ವಾದ್ಯಂತ 450 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ಇದೀಗ ಮತ್ತೊಮ್ಮೆ ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಲು ಚಿತ್ರತಂಡ ರೆಡಿಯಾಗಿದೆ. ಏಪ್ರಿಲ್ 28ಕ್ಕೆ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

‘ಏಜೆಂಟ್’ ಸಿನಿಮಾ

ಟಾಲಿವುಡ್ ಅಂಗಳದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದಾದ ‘ಏಜೆಂಟ್’ ಏಪ್ರಿಲ್ 28ಕ್ಕೆ ತೆರೆಗೆ ಬರುತ್ತಿದೆ. ಕೈಯಲ್ಲಿ ಗನ್ ಹಿಡಿದು ಸ್ಟೈಲಿಶ್ ಲುಕ್‌ನಲ್ಲಿ ಅಖಿಲ್ ಎಂಟ್ರಿ ಕೊಟ್ಟಿರುವ ಪೋಸ್ಟರ್ ಕಿಚ್ಚು ಹಚ್ಚಿದೆ. ಈ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಪ್ರಮೋಷನ್ ಕಿಕ್ ಸ್ಟಾರ್ಟ್ ಕೊಟ್ಟಿದೆ. ನಿರ್ದೇಶಕ ಸುರೇಂದರ್ ರೆಡ್ಡಿ ಏಜೆಂಟ್ ಚಿತ್ರವನ್ನು ಇತರೆ ಸ್ಪೈ ಥ್ರಿಲ್ಲರ್ ಸಿನಿಮಾಗಳಿಗಿಂತಲೂ ವಿಭಿನ್ನವಾಗಿ ಆಗಿ ತೆರೆ ಮೇಲೆ ತರುತ್ತಿದ್ದು ಇಬ್ಬರ ಕಾಂಬಿನೇಶನ್ ಮೇಲೆ ಸಿನಿ ಪ್ರೇಮಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಸಾಕ್ಷಿ ವೈದ್ಯ ಅವರು ಅಖಿಲ್ ಅಕ್ಕಿನೇನಿ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಮ್ಮುಟ್ಟಿ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಖ್ಯಾತಿಯ ಸುರೇಂದ್ರ ರೆಡ್ಡಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಕ್ಕಂತಂ ವಂಶಿ ಕಥೆ ಬರೆದಿರುವ ಚಿತ್ರವನ್ನು ಎಕೆ ಎಂಟರ್‌ಟೈನ್‌ಮೆಂಟ್ಸ್ ಮತ್ತು ಸುರೇಂದರ್ 2 ಸಿನಿಮಾ ಬ್ಯಾನರ್‌ನಡಿ ರಾಮಬ್ರಹ್ಮ ಸುಂಕರ ನಿರ್ಮಾಣ ಮಾಡಿದ್ದಾರೆ.

Exit mobile version