Site icon Vistara News

Urfi Javed: ಬಂಧನದ ಬಗ್ಗೆ ‘ರೀಲ್’‌ ಬಿಟ್ಟ ಉರ್ಫಿಗೆ ಎದುರಾಯ್ತು ‘ರಿಯಲ್‌’ ಸಂಕಷ್ಟ!

urfi

urfi

ಮುಂಬೈ: ಚಿತ್ರ-ವಿಚಿತ್ರ ಬಟ್ಟೆ ತೊಡುವ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್‌ (Urfi Javed) ಅವರನ್ನು ಪೊಲೀಸರು ಅರೆಸ್ಟ್‌ ಮಾಡುತ್ತಿರುವ ಫೇಕ್‌ ವಿಡಿಯೊ ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಮುಂಬೈ ಪೊಲೀಸರು ನಟಿಯ ವಿರುದ್ಧ ಇದೀಗ ದೂರು ದಾಖಲಿಸಿದ್ದಾರೆ. ʼʼಉರ್ಫಿ ಜಾವೇದ್‌ ಅವರನ್ನು ಬಂಧಿಸಲಾಗಿದೆ ಎನ್ನಲಾದ ವಿಡಿಯೊ ನಿಜವಲ್ಲ. ಫೇಕ್‌ ವಿಡಿಯೊ ಸೃಷ್ಟಿಸಿ (Fake arrest video) ಸಮವಸ್ತ್ರವನ್ನು ದುರುಪಯೋಗಪಡಿಸಿದ್ದಕ್ಕಾಗಿ ಉರ್ಫಿ ಜಾವೇದ್‌ ವಿರುದ್ಧ ದೂರು ದಾಖಲಿಸಲಾಗಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.

“ಜನರ ದಾರಿ ತಪ್ಪಿಸುವ ವಿಡಿಯೊದಲ್ಲಿ ಭಾಗಿಯಾಗಿರುವವರ ವಿರುದ್ಧ ಐಪಿಸಿ ಸೆಕ್ಷನ್ 171, 419, 500, 34ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ. “ಹೆಚ್ಚಿನ ತನಿಖೆ ನಡೆಯುತ್ತಿದ್ದು, ಇನ್ಸ್‌ಪೆಕ್ಟರ್‌ ವೇಷ ಧರಿಸಿದ್ದವನನ್ನು ಬಂಧಿಸಲಾಗಿದೆ ಮತ್ತು ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಸೆಕ್ಷನ್ 171 ಮೋಸದ ಉದ್ದೇಶದಿಂದ ಸಾರ್ವಜನಿಕ ಸೇವಕರು ಬಳಸುವ ಉಡುಪನ್ನು ಧರಿಸುವುದನ್ನು ಮತ್ತು ಸೆಕ್ಷನ್ 419 ವ್ಯಕ್ತಿಗತವಾಗಿ ಮೋಸ ಮಾಡುವುದನ್ನು ಸೂಚಿಸುತ್ತದೆ. ತಮಾಷೆ ಮಾಡಲು ಹೋಗಿ ಇದೀಗ ಉರ್ಫಿ ಜಾವೇದ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉರ್ಫಿ ಜಾವೇದ್‌ ತೊಂದರೆಗೆ ಸಿಲುಕುತ್ತಿರುವುದು ಇದೇ ಮೊದಲ ಸಲವಲ್ಲ. ಕಳೆದ ತಿಂಗಳು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಉರ್ಫಿ ವಿರುದ್ಧ ಆಕೆ ಧರಿಸುವ ಬಟ್ಟೆ ವಿಚಾರದಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ: Urfi Javed: ಪೊಲೀಸ್‌ ಕಸ್ಟಡಿಗೆ ಉರ್ಫಿ ಜಾವೇದ್‌; ವಿಡಿಯೊ ವೈರಲ್‌!

ವಿಡಿಯೊದಲ್ಲೇನಿದೆ?

ವೈರಲ್‌ ಆದ ವೀಡಿಯೊದಲ್ಲಿ ಉರ್ಫಿ ಜಾವೇದ್‌ ಅವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿ ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿತ್ತು. ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮೊಂದಿಗೆ ಪೊಲೀಸ್ ಠಾಣೆಗೆ ಬರುವಂತೆ ಹೇಳುತ್ತಾರೆ. ʼʼಈ ರೀತಿ ತುಂಡು ತುಂಡು ಬಟ್ಟೆಯನ್ನು ಹಾಕಿಕೊಂಡು ಯಾರು ಓಡಾಡುತ್ತಾರೆ?ʼʼ ಎಂದು ಅಧಿಕಾರಿ ಉರ್ಫಿಗೆ ಪ್ರಶ್ನೆ ಕೇಳುತ್ತಾರೆ. ಇದಾದ ಬಳಿಕ ಅಧಿಕಾರಿಗಳು ಏನು ಹೇಳಬೇಕೆಂದರೂ ಪೊಲೀಸ್ ಠಾಣೆಯಲ್ಲಿ ಹೇಳಬಹುದು ಎಂದು ವಾದ ವಿವಾದದ ನಂತರ ಉರ್ಫಿಯನ್ನು ಕಸ್ಟಡಿಗೆ ಕರೆದೊಯ್ಯುತ್ತಾರೆ. ವಿಡಿಯೊದಲ್ಲಿ ಉರ್ಫಿ ಒಂದು ಜೊತೆ ಡೆನಿಮ್ ಪ್ಯಾಂಟ್‌ನೊಂದಿಗೆ ಬ್ಯಾಕ್‌ಲೆಸ್‌ ಕೆಂಪು ಟಾಪ್ ಧರಿಸಿದ್ದರು.

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೊ ಸತ್ಯಾಸತ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಕೆಲವರು ಇಂದು ʻʻತಮಾಷೆಯಾಗಿ ತೋರುತ್ತಿದೆ” ಎಂದು ಕಮೆಂಟ್‌ ಮಾಡಿದ್ದರು. ಇದೀಗ ಪೊಲೀಸರು ಈ ವಿಡಿಯೊ ಫೇಕ್‌ ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಉರ್ಫಿ ಜಾವೇದ್ ʼಬಿಗ್ ಬಾಸ್ ಒಟಿಟಿ’ಯಲ್ಲಿ ಭಾಗವಹಿಸಿದ ನಂತರ ಖ್ಯಾತಿ ಗಳಿಸಿದರು. ಹಲವಾರು ಟಿವಿ ಶೋಗಳಲ್ಲಿಯೂ ನಟಿಸಿದ್ದಾರೆ. ಅವರು ‘ಬಡೆ ಭಯ್ಯಾ ಕಿ ದುಲ್ಹನಿಯಾ’ ಚಿತ್ರದಲ್ಲಿ ಅವ್ನಿ ಪಾತ್ರವನ್ನು ಮರು ಸೃಷ್ಟಿಸುವ ಮೂಲಕ ಪ್ರವರ್ದಮಾನಕ್ಕೆ ಬಂದಿದ್ದರು. ಜತೆಗೆ ಹಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಎಂಟಿವಿ ಸ್ಪಿಲ್ಟ್‌ವಿಲ್ಲಾ ಸೀಸನ್‌-14 (MTV Splitsvilla-season 14)ರಲ್ಲಿ ಕಾಣಿಸಿಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version