ಬೆಂಗಳೂರು: ಇರಾನ್ ಮಹಿಳೆಯರು ಹಿಜಾಬ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ವಿವಿಧ ದೇಶಗಳ ಮಹಿಳೆಯರೂ ಇದಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ತಲೆ ಕೂದಲನ್ನು ಕತ್ತರಿಸಿಕೊಳ್ಳುವುದರ ಮೂಲಕ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
”ಮಹ್ಸಾ ಅಮಿನಿ ಹತ್ಯೆ ನಂತರ ಶುರುವಾದ ಹಿಜಾಬ್ ವಿರುದ್ಧದ ಹೋರಾಟದಲ್ಲಿ ಭಾಗಿಯಾದ, ಬೆಂಬಲ ನೀಡಿದ ಹಲವು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ. ಹೀಗೆ ಮಡಿದ ಮಹಿಳೆಯರಿಗೆ ಬೆಂಬಲ ನೀಡಲು ಹಾಗೂ ಉತ್ತರಾಖಂಡದ 19ರ ಪ್ರಾಯದ ಯುವತಿ ಅಂತಿಕಾ ಭಂಡಾರಿ ಸಲುವಾಗಿ ನಾನು ನನ್ನ ಕೂದಲನ್ನು ಕತ್ತರಿಸಿಕೊಂಡಿದ್ದೇನೆ. ಪ್ರಪಂಚದಾದ್ಯಂತ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಮೂಲಕ ಇರಾನ್ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಮಹಿಳೆಯರನ್ನು ಗೌರವಿಸಿ, ಇದು ಮಹಿಳಾ ಕ್ರಾಂತಿಯ ಜಾಗತಿಕ ಸಂಕೇತ. ಕೂದಲನ್ನು ಮಹಿಳೆಯರ ಸೌಂದರ್ಯದ ಸಂಕೇತವಾಗಿ ನೋಡಲಾಗುತ್ತದೆ. ಹೇಗೆ ಬಟ್ಟೆ ಹಾಕಬೇಕು, ಹೇಗೆ ನಡೆದುಕೊಳ್ಳಬೇಕು, ಹೇಗೆ ಬದುಕಬೇಕು ಎಂಬುದನ್ನು ಬೇರೆ ಯಾರೋ ನಿರ್ಧರಿಸಲು ಬಿಡಬೇಡಿ.ಒಮ್ಮೆ ಮಹಿಳೆಯರು ಒಗ್ಗೂಡಿ ಒಂದು ಮಹಿಳೆಯ ಸಮಸ್ಯೆಯನ್ನು ಇಡೀ ಮಹಿಳೆಯ ಸಮಸ್ಯೆ ಎಂದು ಪರಿಗಣಿಸಿದರೆ, ಸ್ತ್ರೀವಾದವು ಹೊಸ ಚೈತನ್ಯವನ್ನು ಪಡೆಯುತ್ತದೆʼʼ ಎಂದು ಊರ್ವಶಿ ಪೋಸ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮಗೂ ದೌರ್ಜನ್ಯ ಆಗಿದೆ ಎಂದು ಇತ್ತೀಚೆಗೆ ಊರ್ವಶಿ ರೌಟೇಲಾ ಹೇಳಿದ್ದರು.
ಇದನ್ನೂ ಓದಿ | Hijab Row | ಹಿಜಾಬ್ ಕುರಿತು ಭಿನ್ನ ತೀರ್ಪು ಆಯ್ತು, ಮುಂದೇನಾಗಲಿದೆ? ಹೇಗಿರಲಿದೆ ಪ್ರಕ್ರಿಯೆ?
ಈ ಹಿಂದೆ ಸೇಕ್ರೆಡ್ ಗೇಮ್ಸ್‌ನ ನಟಿ ಎಲ್ನಾಜ್ ನೊರೌಜಿ ಸಹ ಹೋರಾಟಕ್ಕೆ ಕೈಜೋಡಿಸಿದ್ದರು. ಹಿಜಾಬ್ ವಿರೋಧಿಸಿ ಹಾಗೂ ನೈತಿಕ ಪೊಲೀಸ್ ಗಿರಿಯ ವಿರುದ್ಧ ನಟಿ ಆಕ್ರೋಶ ವ್ಯಕ್ತಪಡಿಸಿ, ಕ್ಯಾಮೆರಾ ಎದುರು ಅರೆ ಬೆತ್ತಲಾಗಿದ್ದರು. ನಟಿ ಈ ವಿಡಿಯೊವನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದರು.
ಮಾಡೆಲ್, ನಟಿ ಆಗಿರುವ ಊರ್ವಶಿ ರೌಟೇಲಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಹಲವು ಪ್ರತಿಷ್ಠಿತ ಬ್ರ್ಯಾಂಡ್‌ಗಳಿಗೆ ರಾಯಭಾರಿ ಆಗಿದ್ದಾರೆ.
ಇದನ್ನೂ ಓದಿ | Hijab Row | ಹಿಜಾಬ್ ಧರಿಸುವ ಮುಸ್ಲಿಂ ಮಹಿಳೆ ದೇಶದ ಪ್ರಧಾನಿ ಆಗ್ತಾರೆ ಎಂದ ಓವೈಸಿ