–ಯಶಸ್ವಿ ದೇವಾಡಿಗ, ಬೆಂಗಳೂರು
ಸಿನಿಮಾ: ದರ್ಬಾರ್
ನಿರ್ದೇಶನ: ವಿ. ಮನೋಹರ್
ನಿರ್ಮಾಪಕರು: ಬಿ. ಎನ್ ಶಿಲ್ಪಾ
ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ: ಸತೀಶ್
ಛಾಯಾಗ್ರಹಣ: ಎಸ್ .ಸಾಮ್ರಾಟ್
ಸಂಗೀತ: ವಿ. ಮನೋಹರ್
ತಾರಾಗಣ: ಎಂ.ಎನ್.ಲಕ್ಷ್ಮಿದೇವಿ, ಅಶೋಕ್, ಜಾಹ್ನವಿ, ಹುಲಿ ಕಾರ್ತಿಕ್, ಸತೀಶ್, ಸಂತು ಕಾರ್ತೀಕ್, ನವೀನ್ ಪಡಿಲ್, ಸಾಧು ಕೋಕಿಲ ಇತರರು.
23 ವರ್ಷಗಳ ನಂತರ, ಸಂಗೀತ ನಿರ್ದೇಶಕ ವಿ. ಮನೋಹರ್ ಮತ್ತೆ ನಿರ್ದೇಶನಕ್ಕೆ ʻದರ್ಬಾರ್ʼ ಸಿನಿಮಾ ಮೂಲಕ ಕೈ ಹಾಕಿದ್ದಾರೆ. ಒಂದೊಳ್ಳೆಯ ಕಂಟೆಂಟ್ ಸಿನಿಮಾ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ರಾಜಕೀಯ ವಿಡಂಬನಾತ್ಮಕ ಕಥಾಹಂದರವಿದೆ. ಜೂನ್ 9ರಂದು ರಾಜ್ಯಾದಂತ ತೆರೆ ಕಂಡಿದ್ದು, ಹೊಸಬರ ಪ್ರಯತ್ನಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಜನ ದುಡ್ಡು ತೆಗೆದುಕೊಂಡು ಮತ ಹಾಕಿದರೆ ಪರಿಣಾಮ ಏನಾಗಲಿದೆ ಎಂಬುದೇ ಸಿನಿಮಾದ ಒನ್‌ಲೈನ್ ಸ್ಟೋರಿ. ಈ ಸಿನಿಮಾ ಮುಖ್ಯವಾಗಿ ಪ್ರಾಮಾಣಿಕ ಅಭ್ಯರ್ಥಿಗೆ ಮತದಾರರು ಮತ ಹಾಕಬೇಕು ಎಂಬ ಸಂದೇಶವನ್ನು ನೀಡುತ್ತದೆ.
ಹಳ್ಳಿಯ ಭಾಷೆಯ ಸೊಗಡು, ಗ್ರಾಮೀಣ ಭಾಗದ ಜನರ ಸ್ಥಿತಿ ಗತಿ, ಅವರ ಮುಗ್ದತೆ ಅಷ್ಟೇ ಅಲ್ಲದೇ ಸಿನಿಮಾದ ಹಿನ್ನೆಲೆ ಧ್ವನಿ ಈ ಎಲ್ಲ ಅಂಶಗಳನ್ನು ಉಳಿಸಿಕೊಳ್ಳುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಕಾಮಿಡಿ ಕಿಲಾಡಿಯಿಂದ ಬಂದ ಸಂತು ಹಾಗೂ ಹುಲಿ ಕಾರ್ತಿಕ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈ ಬಾರಿ ಇಡೀ ಸಿನಿಮಾದಲ್ಲಿ ಹುಲಿ ಕಾರ್ತಿಕ್ ಅಭಿನಯ ಅಮೋಘವಾಗಿತ್ತು. ಇದೇ ಮೊದಲ ಬಾರು ಹುಲಿ ಕಾರ್ತಿಕ್ ವಿಲನ್ ಪಾತ್ರವನ್ನು ಮಾಡಿದ್ದಾರೆ. ಸಿನಿಮಾ ಮುಗಿಯವರೆಗೂ ಅವರ ನಾಗನ ಪಾತ್ರ ಪ್ರೇಕ್ಷಕರು ಮರೆಯುವಂತಿಲ್ಲ.
ಹೊಸಬರ ಪ್ರಯತ್ನ!
ಸಿನಿಮಾದಲ್ಲಿ ಹೊಸ ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಾಮಿಡಿ ಕಿಲಾಡಿ ಸಂತು ನಾಯಕನ ಜತೆಗೆ ಸದಾ ಬೆನ್ನೆಲುಬಾಗಿ ಇರುವನು. ಮೊದಲಾರ್ಧದಲ್ಲಿ ನಾಯಕ ಸತೀಶ್ ಅವರ ಮೇಲೆ ಕಥೆ ಸಾಗಿದ್ದು, ಬಳಿಕ ಖಳನಾಯಕ ಹುಲಿ ಕಾರ್ತಿಕ್ ಮೇಲೆ ಕಥೆ ಸಾಗುತ್ತದೆ. ಸಂತು ಪಾತ್ರ ತುಂಬಾ ನಗಿಸುತ್ತದೆ. ಸಂತು ಅವರ ಒಂದೊಂದು ಪಂಚಿಂಗ್ ಲೈನ್‌ಗೆ ಪ್ರೇಕ್ಷಕರು ಬಿದ್ದು ಬಿದ್ದು ನಗುವುದಂತೂ ಗ್ಯಾರಂಟಿ. ಹುಲಿ ಕಾರ್ತಿಕ್ ಕಾಮಿಡಿ ಬಿಟ್ಟು ಇದೇ ಮೊದಲ ಬಾರಿ ವಿಲನ್ ರೋಲ್ ಮಾಡಿದ್ದಾರೆ. ನಾಯಕ ಸತೀಶ್ ತಾವೊಬ್ಬರೇ ಸ್ಕ್ರೀನ್ ಮೇಲಿರಬೇಕು ಎಂದು ಯೋಚಿಸದೆ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದಾರೆ. ಅದಕ್ಕೆ ಉದಾಹರಣೆಯೇ ಹುಲಿ ಕಾರ್ತಿಕ್. ಪ್ರತಿ ಪಾತ್ರಕ್ಕೂ ನುರಿತ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು.
ಇದನ್ನೂ ಓದಿ: V Manohar: 23 ವರ್ಷಗಳ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟ ವಿ.ಮನೋಹರ್
ನಿರ್ದೇಶಕ ವಿ. ಮನೋಹರ್ ಓ ಮಲ್ಲಿಗೆ ನಂತರ ನಿರ್ದೇಶನ ಮಾಡಿರುವ ಚಿತ್ರ ದರ್ಬಾರ್. ಸಿನಿಮಾದಲ್ಲಿ ಮೂರು ಹಾಡುಗಳು ಇದ್ದು, ಟೈಟಲ್ ಸಾಂಗ್‌ವನ್ನು ಚಂದನ್ ಶೆಟ್ಟಿ ಹಾಡಿದ್ದಾರೆ, ರಾಜಕೀಯ ಹಾಡನ್ನು ಉಪೇಂದ್ರ ಹಾಡಿದ್ದಾರೆ, ಇನ್ನು ಡ್ಯುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ನಿರ್ದೇಶಕ ವಿ. ಮನೋಹರ್ ಕಥೆಯ ಪ್ರಸ್ತುತ ಪಡಿಸಿದ ರೀತಿ ಚೆನ್ನಾಗಿಯೇ ಇದೆ. ಆದರೆ ಸಿನಿಮಾದ ಮೊದಲಾರ್ಧ ಭಾಗ ಸಿನಿಮಾ ಲ್ಯಾಗ್ ಆಗಿದ್ದು, ಎರಡನೇ ಭಾಗ ಹಾಗೇ ಪ್ರೇಕ್ಷಕರನ್ನು ಆರಾಮದಾಯಕವಾಗಿ ನೋಡಿಸಿಕೊಂಡು ಹೋಗಿದೆ. ಇನ್ನು ವಿ. ಮನೋಹರ್ ಸಂಗೀತ ಬಗ್ಗೆ ಮಾತಿಲ್ಲ. ಸಾಧು ಕೋಕಿಲ್, ನವೀನ್ ಪಡೀಲ್ ಜೋಡಿ ಕ್ಲೈಮ್ಯಾಕ್ಸ್ ಹಂತದಲ್ಲಿ ನೋಡುಗರನ್ನು ರಂಜಿಸಿತು.
ಸಿನಿಮಾ ಮೇಕಿಂಗ್ ಜತೆಗೆ ಫೈಟಿಂಗ್ ಸೀನ್‌ಗಳು ಮಿಶ್ರವಾಗಿದೆ. ಒಟ್ಟಾರೆ ಸಿನಿಮಾದಲ್ಲಿ ಹುಲಿ ಕಾರ್ತಿಕ್, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ದರ್ಬಾರ್ ಪ್ರೊಡಕ್ಷನ್ಸ್ ಮೂಲಕ ಬಿ.ಎನ್. ಶಿಲ್ಪ ಅವರು ನಿರ್ಮಾಣ ಮಾಡಿದ್ದಾರೆ. ಮಾಸ್ ಮಾದ, ವಿನೋದ್ ಸಾರಥ್ಯದ 3 ಸಾಹಸ ದೃಶ್ಯಗಳು ಚಿತ್ರದಲ್ಲಿವೆ.