ಬೆಂಗಳೂರು: `ಮಹಿರ’ ಸಿನಿಮಾ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಸಿನಿಪ್ರೇಮಿಗಳ ಗಮನ ಸೆಳೆದವರು ಮಹೇಶ್ ಗೌಡ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದ ಮಹೇಶ್ ಗೌಡ ಈ ಬಾರಿ ವಿಭಿನ್ನ ಬಗೆಯ ಕಥಾ ಹಂದರದೊಂದಿಗೆ ಪ್ರತ್ಯಕ್ಷರಾಗಿದ್ದಾರೆ. ತೊನ್ನು (ವಿಟಿಲಿಗೋ) (vitiligo) ಸಮಸ್ಯೆಯನ್ನು ಪ್ರಧಾನವಾಗಿಟ್ಟುಕೊಂಡು ʻಬಿಳಿ ಚುಕ್ಕಿ ಹಳ್ಳಿ ಹಕ್ಕಿʼ ಎಂಬ ಚಿತ್ರ ನಿರ್ದೇಶಿಸಿ, ನಟಿಸುತ್ತಿದ್ದಾರೆ. ಇನ್ನು ಮಹೇಶ್‌ಗೆ ಜೋಡಿಯಾಗಿ ʻಅಗ್ನಿಸಾಕ್ಷಿʼ ಹಾಗೂ ʻಸೀತಾರಾಮʼ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಗೌಡ (Vaishnavi Gowda) ಹಳ್ಳಿ ಹುಡುಗಿಯಾಗಿ ಕವಿತಾ ಪಾತ್ರದಲ್ಲಿ ನಟಿಸಿದ್ದಾರೆ.
ಈ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಸಿದ್ದಿ ವಿನಾಯಕ ದೇಗುಲದಲ್ಲಿ ಆಗಸ್ಟ್ 25ರಂದು ನೆರವೇರಿದೆ. ವಿಟಿಲಿಗೋ ಸಮಸ್ಯೆ ಇರುವ ಅನುಷಾ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದಾರೆ. ಮಹೇಶ್ ಗೌಡ ವಿಟಿಲಿಗೋ ಸಮಸ್ಯೆಗೆ ಕಾಮಿಡಿ ಹಾಗೂ ರೊಮ್ಯಾಂಟಿಕ್ ಟಚ್ ಕೊಟ್ಟು ಬಿಳಿ ಚುಕ್ಕಿ ಹಳ್ಳಿ ಹಕ್ಕಿ (bili chukki halli hakki) ಕಥೆ ರೂಪಿಸಿದ್ದಾರೆ. ಹೊನ್ನುಡಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ, ಮಹೇಶ್ ಗೌಡ ನಿರ್ದೇಶನದ ಸಿನಿಮಾ `ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜತೆಗೆ ಶಿವ ಎಂಬ ಪಾತ್ರಕ್ಕೆ ನಿರ್ದೇಶಕ ಮಹೇಶ್ ಜೀವ ತುಂಬಿದ್ದಾರೆ.
ಇದನ್ನೂ ಓದಿ: Kannada Serials TRP: ʻಗೀತಾʼ ಧಾರಾವಾಹಿಯ ಓಟ ಶುರು; ಎರಡನೇ ಸ್ಥಾನದಲ್ಲಿ ʻಸೀತಾ ರಾಮʼ!
ಶಿವನ ಸಮಸ್ಯೆ ಗೊತ್ತಿದ್ದರೂ ಬಾಳ ಸಂಗಾತಿಯಾಗಿ ಕವಿತಾ ಬರುತ್ತಾಳೆ. ಸಮಸ್ಯೆ ಗೊತ್ತಿದ್ದರೂ ಕವಿತಾ ತನ್ನನ್ನು ಯಾಕೆ ಮದುವೆ ಆಗಿದ್ದಾಳೆ ಎನ್ನುವ ಗೊಂದಲದಲ್ಲಿರುವ ನಾಯಕನ ಕಥೆ ಇದು. ಈ ಗೊಂದಲದ ಮಧ್ಯೆಯೇ ಸಾಗುವ ಒಂದು ಮುದ್ದಾದ ಲವ್ ಸ್ಟೋರಿ ʼಬಿಳಿ ಚುಕ್ಕಿ ಹಳ್ಳಿ ಹಕ್ಕಿʼ. ವರ ಮಹಾಲಕ್ಷ್ಮೀ ಆಶೀರ್ವಾದದೊಂದಿಗೆ ಚಿತ್ರತಂಡ ಶೂಟಿಂಗ್ ಶುರು ಮಾಡಿದೆ. ಕಿರಣ್ ಸಿಎಚ್ಎಂ ಕ್ಯಾಮೆರಾ, ರಿಯೋ ಆಂಟೋನಿ ಸಂಗೀತ ಸಿನಿಮಾಕ್ಕಿದೆ. ಕೊಪ್ಪ, ಶೃಂಗೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.