ಬೆಂಗಳೂರು : ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ ಸಿನಿಮಾ (Kantara Movie ) ಈಗಾಗಲೇ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಿದೆ. ಒಟಿಟಿಯಲ್ಲಿ ಬಿಡುಗಡೆಯಾಗಿರುವ ಕಾಂತಾರ ಸಿನಿಮಾದಲ್ಲಿ ʻವರಾಹ ರೂಪಂʼ ಹಾಡಿನ ಟ್ಯೂನ್ ಕಂಪ್ಲೀಟ್ ಚೇಂಜ್ ಆಗಿದೆ. ಹಾಡನ್ನೇ ಕೇಳಿಸಿಕೊಳ್ಳಬೇಕು ಎಂದು ಸಿನಿಮಾ ನೋಡಿದವರಿಗೆ ಬೇಸರ ಮೂಡಿಸಿದೆ. ಈ ಬಗ್ಗೆ ನೋಡುಗರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದರ ಮೂಲಕ ಬೇಸರ ಹೊರಹಾಕುತ್ತಿದ್ದಾರೆ.
ಕಾಂತಾರ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ನವೆಂಬರ್ 24ರಂದು ಬಂದಿದ್ದು, ʻವರಾಹ ರೂಪಂʼ ಹಾಡಿನ ಕುರಿತಾಗಿ ಸಖತ್ ಚರ್ಚೆಯಲ್ಲಿದೆ. ಈಗಾಗಲೇ ʻವರಾಹ ರೂಪಂʼ ಹಾಡಿನ ವಿವಾದ ಎಲ್ಲರಿಗೂ ಗೊತ್ತೇ ಇದೆ. ಈ ಟ್ಯೂನ್ ಅನ್ನು ಮಲಯಾಳಂ ಆಲ್ಬಂ ಸಾಂಗ್ನಿಂದ ಕದ್ದಿದ್ದಾರೆ ಎಂದು ಹೇಳಲಾಗಿತ್ತು. ಕೇರಳ ಹೈ ಕೋರ್ಟ್ ಈ ಹಾಡನ್ನು ಕಾಂತಾರ ಸಿನಿಮಾದಲ್ಲಿ ಬಳಸದಿರುವಂತೆ ತೀರ್ಪು ನೀಡಿತ್ತು. ಹೀಗಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಕಾಂತಾರ ಸಿನಿಮಾದಲ್ಲಿ ʻವರಾಹ ರೂಪಂʼ ಹಾಡಿನ ಟ್ಯೂನ್ ಬದಲಾಯಿಸಿದೆ ಚಿತ್ರತಂಡ. ವರಾಹ ರೂಪಂ ಹಾಡಿದ್ದರೂ ಟ್ಯೂನ್ ಮಾತ್ರ ಚೇಂಜ್ ಮಾಡಲಾಗಿದೆ. ಹೊಸ ಹಾಡನ್ನು ರೆಕಾರ್ಡ್ ಮಾಡಲಾಗಿದೆ.
ಇದನ್ನೂ ಓದಿ | Kantara Movie | ನಾಳೆಯಿಂದ ಒಟಿಟಿಯಲ್ಲಿ ಶುರುವಾಗಲಿದೆ ಕಾಂತಾರ ಅಬ್ಬರ!
ಕಾಂತಾರ ಸಿನಿಮಾ ಭಾರತೀಯ ಸಿನಿ ರಂಗದ ದಿಗ್ಗಜರಾದ ಸೂಪರ್ ಸ್ಟಾರ್ ರಜನಿಕಾಂತ, ಬಿಗ್ ಬಿ ಅಮಿತಾಭ್ ಸೇರಿದಂತೆ ಖ್ಯಾತ ನಟ, ನಟಿಯರು ಮತ್ತು ವಿಮರ್ಶಕರಿಂದ ಉತ್ತಮ ಪ್ರಶಂಸೆ ಪಡೆದುಕೊಂಡಿದೆ. ಕೆಜಿಎಫ್ ೧ ಹಾಗೂ ಚಾಪ್ಟರ್ ೨ ಹೊಂಬಾಳೆ ಫಿಲ್ಸ್ಮ್ ನಿರ್ಮಾಣ ಮಾಡಿತ್ತು. ಅದೇ ಸಿನಿಮಾ ಸಂಸ್ಥೆ ಮಾಡಿರುವ ಕಾಂತಾರ ಕೂಡ ಅಷ್ಟೇ ಖ್ಯಾತಿಯನ್ನು ಗಳಿಸಿಕೊಂಡಿದೆ.
ಏನಿತ್ತು ಕೋರ್ಟ್ ಆದೇಶ?
ಈ ಹಿಂದೆ ವರಾಹ ರೂಪಂ ಹಾಡಿನ ಪ್ರಸಾರಕ್ಕೆ ಕೇರಳದ ಕಲ್ಲಿಕೋಟೆಯ ಸೆಷನ್ಸ್ ಕೋರ್ಟ್ ತಡೆ ನೀಡಿತ್ತು. ಕಾಂತಾರದ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕ ಹಾಡು ಪ್ರಸಾರ ಮಾಡುತ್ತಿರುವ ಅಮೆಜಾನ್, ಯುಟ್ಯೂಬ್, ಸ್ಪೋಟಿಫೈ, ವಿಂಕ್, ಜಿಯೋ ಸಾವನ್ ಸೇರಿದಂತೆ ಇನ್ನಿತರ ಆನ್‌ಲೈನ್ ವೇದಿಕೆಗಳಿಗೆ ಆದೇಶ ಹೊರಡಿಸಿತ್ತು.
ಬ್ಲಾಕ್‌ಬಸ್ಟರ್ ಸಿನಿಮಾ ಕಾಂತಾರದ ವರಾಹ ರೂಪಂ ಹಾಡು ನಾವು ಐದು ವರ್ಷದ ಹಿಂದೆ ರಚಿಸಿ ಬಿಡುಗಡೆ ಮಾಡಿದ್ದ ನವರಸಂ ಹಾಡಿನ ಕಾಪಿ ಎಂಬುದಾಗಿ ತೈಕುಡಂ ಬ್ರಿಡ್ಜ್ ಎಂಬ ಸಂಸ್ಥೆ ಕೋರ್ಟ್ ಮೊರೆ ಹೋಗಿತ್ತು. ಅಂತೆಯೇ ವಿಚಾರಣೆ ನಡೆಸಿದ ಕೋರ್ಟ್ ಹಾಡಿನ ಪ್ರಸರಣವನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು. ತಡೆಯಾಜ್ಞೆ ತಂದಿರುವ ವಿಚಾರವನ್ನು ತೈಕುಡಂ ಬ್ರಿಜ್ ಮ್ಯೂಸಿಕ್ ಸಂಸ್ಥೆ, ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಕೇಸ್ ದಾಖಲಾಗಿದ್ದು, ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯು ಕೋರ್ಟ್ ಮೊರೆ ಹೋಗಿತ್ತು. ಹಾಗಾಗಿ ಅರ್ಜಿಯ ವಿಚಾರಣೆ ನಡೆಸಿರುವ ಪಾಲಕ್ಕಾಡ್ ಕೋರ್ಟ್ ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ ಎಂದು ತಡೆಯಾಜ್ಞೆ ನೀಡಿತ್ತು.
ʻವರಾಹ ರೂಪಂʼ ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಿಂದ ನವೆಂಬರ್ 11 ಶುಕ್ರವಾರ ಡಿಲೀಟ್ ಮಾಡಲಾಗಿತ್ತು. ಇದೀಗ ಒಟಿಟಿಯಲ್ಲಿ ಹಾಡಿನ ಟ್ಯೂನ್ ಚೇಂಜ್ ಆಗಿದ್ದು ನೋಡುಗರು ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Kantara movie | ವಿಶ್ವಾದ್ಯಂತ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಹೀಗಿದೆ