ಬೆಂಗಳೂರು: ಟಾಲಿವುಡ್ ನಟ ವರುಣ್ ತೇಜ್ (Varun Tej) ಮತ್ತು ಲಾವಣ್ಯ ತ್ರಿಪಾಠಿ ಜೋಡಿ (Varun Tej-Lavanya Tripathi) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ನಾಯಕಿ ಲಾವಣ್ಯ ತ್ರಿಪಾಠಿ ಜತೆ ಲವ್ ಟ್ರ್ಯಾಕ್ನಲ್ಲಿದ್ದ ವರುಣ್ ಕೊನೆಗೂ ಮದುವೆಯಾಗುತ್ತಿದ್ದಾರೆ. ಈ ಜೋಡಿಯ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ನಾಗಬಾಬು ಅವರ ನಿವಾಸದಲ್ಲಿ ಜೂನ್ 9ರಂದು ನಿಶ್ಚಿತಾರ್ಥ ನೆರವೇರಿತು. ಇದೀಗ ನಟ ವರುಣ್ ತೇಜ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿಶ್ಚಿತಾರ್ಥ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ.
ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥದ ಬಗ್ಗೆ ಕಳೆದ ಕೆಲವು ವಾರಗಳಿಂದ ಸುದ್ದಿಗಳು ಹರಿದಾಡುತ್ತಿತ್ತು. ಇದೇ ವರ್ಷಾಂತ್ಯದಲ್ಲಿ ಇವರಿಬ್ಬರ ಮದುವೆ ನಡೆಯಲಿದೆ ಎನ್ನಲಾಗಿದೆ. ಆತ್ಮೀಯ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅಲ್ಲು ಮತ್ತು ಮೆಗಾ ಕುಟುಂಬವನ್ನು ಒಳಗೊಂಡ ವರುಣ್ ತೇಜ್ ಅವರ ಸೋದರಸಂಬಂಧಿಗಳು ಹಾಜರಿದ್ದರು. ರಾಮ್ ಚರಣ್, ಅಲ್ಲು ಅರ್ಜುನ್, ಸಾಯಿ ಧರಮ್ ತೇಜ್, ಪಂಜಾ ವೈಷ್ಣವ್ ತೇಜ್ ಮತ್ತು ಅಲ್ಲು ಅರವಿಂದ್ ಸೇರಿದಂತೆ ಇತರರು ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರು. “ಫೈಂಡ್ ಮೈ ಲವ್!ʼʼ ಎಂಬ ಕ್ಯಾಪ್ಷನ್ ಜತೆ ಫೋಟೊಗಳನ್ನು ನಟ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Varun Tej: ನಟಿ ಲಾವಣ್ಯ ತ್ರಿಪಾಠಿ ಜತೆಗೆ ವರುಣ್ ತೇಜ್ ಎಂಗೇಜ್ಮೆಂಟ್? ಮೆಗಾ ಫ್ಯಾಮಿಲಿಯಿಂದ ಫ್ಯಾನ್ಸ್ಗೆ ಗುಡ್ ನ್ಯೂಸ್!
ವರುಣ್ ತೇಜ್ ಅವರು ರಾಮ್ ಚರಣ್ ಅವರ ಮೊದಲ ಸೋದರಸಂಬಂಧಿ. ಕೊನಿಡೆಲ ನಾಗೇಂದ್ರ, ನಾಗ ಬಾಬು ಅವರು ಮೆಗಾಸ್ಟಾರ್ ಚಿರಂಜೀವಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಹೋದರರಾಗಿದ್ದಾರೆ. ನಾಗ ಬಾಬು ಅವರು ವರುಣ್ ತೇಜ್ ಅವರ ತಂದೆ. ತೆಲುಗು ಚಿತ್ರರಂಗದಲ್ಲಿ ನಟ ಮತ್ತು ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.
ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ʻಮಿಸ್ಟರ್ʼ, ʻಅಂತರಿಕ್ಷಂʼ ನಂತಹ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. 2017ರಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. 2014ರಲ್ಲಿ ‘ಮುಕುಂದ’ ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟರು ವರುಣ್ ತೇಜ್. ಆನಂತರ ‘ಕಂಚೆ’, ‘ಫಿದಾ’, ‘ತೊಲಿ ಪ್ರೇಮ’, ‘ಎಫ್2’, ‘ಎಫ್3’ ಥರದ ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ‘ಗಾಂಡೀವಧಾರಿ ಅರ್ಜುನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಲಾವಣ್ಯ ತ್ರಿಪಾಠಿ ‘ಅಂಡಲಾ ರಾಕ್ಷಸಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ನೀಡಿದರು. ಕೆಲ ತಮಿಳು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಗೆ ಬಂದ ‘ಹ್ಯಾಪಿ ಬರ್ತ್ಡೇ’ ನಂತರ ಯಾವುದೇ ತೆಲುಗು ಸಿನಿಮಾಗಳಲ್ಲೂ ಲಾವಣ್ಯ ನಟಿಸುತ್ತಿಲ್ಲ.