ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ (Vasishta Simha and Haripriya) ಮದುವೆ ಇಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸರಳವಾಗಿ ವಿವಾಹವಾಗಲಿದ್ದು, ಜನವರಿ 28ಕ್ಕೆ ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ. ಮುಂಜಾನೆಯಿಂದಲೇ ಈ ಜೋಡಿಯ ಮದುವೆ ಆಚರಣೆಗಳು ನಡೆಯುತ್ತಿವೆ. ನಿನ್ನೆ ಸಂಜೆ ಹರಿಪ್ರಿಯಾ-ವಸಿಷ್ಠ ಸಿಂಹ ಅರಿಶಿಣ ಶಾಸ್ತ್ರ ಅದ್ಧೂರಿಯಾಗಿ ನಡೆದಿದ್ದು, ಇವರಿಬ್ಬರೂ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡು ‘ಅರಿಶಿಣ ಶಾಸ್ತ್ರದ ಅಪೂರ್ವ ಕ್ಷಣಗಳು’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಜೋಡಿ ಬಿಳಿ ಬಟ್ಟೆ ಧರಿಸಿ, ಪರಸ್ಪರ ಅರಿಶಿಣ ಬಳಿದುಕೊಂಡಿರುವ ಫೋಟೋಗಳನ್ನು ನೋಡಬಹುದು.
ಹರಿಪ್ರಿಯಾ-ವಸಿಷ್ಠ (haripriya husband name) ಸಿಂಹ ಈಗಾಗಲೇ ಅಭಿಮಾನಿಗಳ ಪಾಲಿಗೆ ಸಿಂಹಪ್ರಿಯಾ ಆಗಿ ಬದಲಾಗಿದ್ದಾರೆ. ಇವರಿಬ್ಬರ ಮದುವೆಯನ್ನು ಅಭಿಮಾನಿಗಳೂ ಭರ್ಜರಿಯಾಗಿಯೇ ಸಂಭ್ರಮಿಸುತ್ತಿದ್ದಾರೆ. ‘ಹ್ಯಾಪಿ ಮ್ಯಾರೀಡ್ ಲೈಫ್’ ಎಂಬ ಶುಭ ಹಾರೈಕೆಗಳ ಸುರಿಮಳೆಯೇ ಸುರಿಯುತ್ತಿದೆ. ಮೈಸೂರಿನಲ್ಲಿ ನಡೆಯುತ್ತಿರುವ ಮದುವೆಗೆ ಅವರ ಆಪ್ತರು, ಬಂಧುಗಳಿಗೆ ಮಾತ್ರ ಆಹ್ವಾನವಿದ್ದು, ಜ.28ರಂದು ಆರತಕ್ಷತೆ ಭರ್ಜರಿಯಾಗಿ ನಡೆಯಲಿದೆ.
ಹರಿಪ್ರಿಯಾ-ವಸಿಷ್ಠ ಸಿಂಹ ಪ್ರೀತಿಸುತ್ತಿದ್ದಾರೆ, ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಹರಿಪ್ರಿಯಾರಿಗೆ ಮೂಗು ಚುಚ್ಚಿಸುವ ಸಂಪ್ರದಾಯದ ವೇಳೆ ವಸಿಷ್ಠ ಸಿಂಹ ಇದ್ದ ವಿಡಿಯೊ ವೈರಲ್ ಆಗಿತ್ತು. ಬಳಿಕ ಡಿಸೆಂಬರ್ 2ರಂದು ಇವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡು, ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ್ದರು. ಈ ಹಿಂದೆ ಈ ಜೋಡಿ ತಮ್ಮ ಉಂಗರುಗಳ ವಿಶೇಷತೆ ಬಗ್ಗೆ ಹೇಳಿಕೊಂಡಿದ್ದರು. ʻʻಸಾಮಾನ್ಯಕ್ಕಿಂತ ವಿಭಿನ್ನವಾಗಿರುವುದು ನನ್ನ ಆಯ್ಕೆ ಆಗಿರುತ್ತದೆ. ಸಿಂಹದ ಚಿಹ್ನೆ ನನ್ನ ಎಂಗೇಜ್‌ಮೆಂಟ್ ರಿಂಗ್ ಮೇಲೆ ಇರಬೇಕು ಎಂಬುದು ನನ್ನ ಆಯ್ಕೆ ಆಗಿತ್ತು. ಜೀವನ ಪೂರ್ತಿ ನಮ್ಮ ಜತೆಯಿರುವ ಉಂಗುರ ಇದಾಗಲಿದೆ. ಡಿಸೈನರ್‌ಗಳ ಜತೆ ಸೇರಿಕೊಂಡು ನಾವು ಈ ವಿಶಿಷ್ಟ ವಿನ್ಯಾಸ ಮಾಡಿಸಿದ್ದೇವೆ. ಅಷ್ಟಭುಜಾಕೃತಿಯಿಂದ ಕೂಡಿದೆ ಈ ಉಂಗುರ. ಈ ರೀತಿ ಮೂಡಿ ಬಂದಿರುವುದಕ್ಕೆ ತುಂಬಾನೇ ಖುಷಿಯಿದೆʼʼ ಎಂದು ಹರಿಪ್ರಿಯಾ ಬರೆದುಕೊಂಡಿದ್ದರು.
ಇದನ್ನೂ ಓದಿ: Actress Haripriya | ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥದ ಫೋಟೊಗಳು ವೈರಲ್!