Site icon Vistara News

Vasishta Simha | ʻಧರಣಿ ಮಂಡಲ ಮಧ್ಯದೊಳಗೆʼ ಟ್ರೈಲರ್‌ ಔಟ್‌: ನಟ ವಸಿಷ್ಠ ಸಿಂಹ ಸಾಥ್

Vasishta Simha (dharanimandalamadhyadolage)

ಬೆಂಗಳೂರು : ಟೀಸರ್, ಹಾಡುಗಳ ಮೂಲಕ ಸೌಂಡ್‌ ಮಾಡಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ಟ್ರೈಲರ್‌ ಬಿಡುಗಡೆಯಾಗಿದೆ. ಚಿತ್ರದ ಟ್ರೈಲರ್‌ ಅನ್ನು ನಟ ವಸಿಷ್ಠ ಸಿಂಹ (Vasishta Simha ) ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಡಿಸೆಂಬರ್ 2ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಸಿನಿಮಾದ ಕ್ಯೂರಿಯಾಸಿಟಿ ಹೊತ್ತ ಟ್ರೈಲರ್‌ ಬಿಡುಗಡೆಯಾಗಿದೆ. ಗುಲ್ಟು ಖ್ಯಾತಿಯ ನಟ ನವೀನ್ ಶಂಕರ್, ಐಶಾನಿ ಶೆಟ್ಟಿ ನಟಿಸಿರುವ ಈ ಚಿತ್ರವನ್ನು ಶ್ರೀಧರ್ ಶಿಕಾರಿಪುರ ನಿರ್ದೇಶನ ಮಾಡಿದ್ದಾರೆ.

ಟ್ರೈಲರ್‌ ಬಿಡುಗಡೆ ಮಾಡಿ ಮಾತನಾಡಿದ ನಟ ವಸಿಷ್ಠ ಸಿಂಹ ʻʻಚಿತ್ರದಲ್ಲಿ ಪ್ರತಿಯೊಂದು ಅಂಶಗಳು ಕೂಡ ಗಮನ ಸೆಳೆಯುತ್ತಿದೆ. ಯಂಗ್ ಟೀಂ ಸೇರಿಕೊಂಡು ಇಷ್ಟು ಒಳ್ಳೆಯ ಸಿನಿಮಾವನ್ನು ಕಟ್ಟಿಕೊಟ್ಟಿದೆ ಎಂದರೆ ತುಂಬಾ ಖುಷಿಯ ವಿಚಾರ. ಟ್ರೈಲರ್‌ ಬಹಳ ಖುಷಿ ಕೊಟ್ಟಿದೆ. ಮ್ಯೂಸಿಕ್, ಡೈಲಾಗ್, ಕ್ಯಾಮೆರಾ ವರ್ಕ್ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿʼʼ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದನ್ನೂ ಓದಿ | Kannada New Movie | ನಟ ಶರಣ್‌ ಹಾಡಿರುವ ʻಧರಣಿ ಮಂಡಲ ಮಧ್ಯದೊಳಗೆʼ ಚಿತ್ರದ ಸಾಂಗ್ ರಿಲೀಸ್‌!

ಚಿತ್ರದ ನಿರ್ದೇಶಕ ಶ್ರೀಧರ್ ಶಿಕಾರಿಪುರ ಮಾತನಾಡಿ, ʻʻಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ನಮ್ಮ ಸುತ್ತಮುತ್ತ ಇರುವವರ ಕಥೆಯೇ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ. ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ ಕಥಾಹಂದರದ ಸಿನಿಮಾವಿದು. ಬಾಕ್ಸಿಂಗ್‌ನಲ್ಲಿ ಅಪಾರ ಆಸಕ್ತಿ ಇರುವ ಹುಡುಗನ ಬದುಕಿನಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆಯಲಾದ ಕಥೆ ಚಿತ್ರದಲ್ಲಿದೆ. ಪ್ರೀತಿ, ಸೆಂಟಿಮೆಂಟ್ ಎಳೆಯನ್ನೂ ಹೊತ್ತ ಈ ಚಿತ್ರ ಖಂಡಿತ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆʼʼ ಎಂದು ತಿಳಿಸಿದರು.

ʻʻಗುಳ್ಟು ನಂತರ ಕೇಳಿದ ಇಂಟ್ರಸ್ಟಿಂಗ್ ಸಬ್ಜೆಕ್ಟ್ ಇರುವ ಕಥೆ ಇದಾಗಿದೆ. ಚಿತ್ರದಲ್ಲಿ ಆದಿ ಪಾತ್ರವನ್ನು ನಿರ್ವಹಿಸಿದ್ದೇನೆ. ಬಾಕ್ಸಿಂಗ್‌ನಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿರುವ ಹುಡುಗನ ಪಾತ್ರ. ಗುಳ್ಟು ಸಿನಿಮಾಗಿಂತ ಡಿಫರೆಂಟ್ ಆದ ಪಾತ್ರವನ್ನು ಇಲ್ಲಿ ನಿರ್ವಹಿಸಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಡಿಸೆಂಬರ್ 2ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿʼʼ ಎಂದು ನಾಯಕ ನಟ ನವೀನ್ ಶಂಕರ್ ತಿಳಿಸಿದರು.

ಚಿತ್ರದಲ್ಲಿ ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಒಳಗೊಂಡ ತಾರಾಗಣವಿದೆ. ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಡಿ ಒಂಕಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವೀರೇಂದ್ರ ಕಂಚನ್, ಗೌತಮಿ ರೆಡ್ಡಿ ಸಹ ನಿರ್ಮಾಣವಿದೆ. ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ. ಡಿಸೆಂಬರ್ 2ರಂದು ಪ್ರೇಕ್ಷಕರ ಮನಗೆಲ್ಲಲು ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

ಇದನ್ನೂ ಓದಿ | Kannada New Movie | ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ ಬಿಡುಗಡೆ ದಿನಾಂಕ ಪ್ರಕಟ

Exit mobile version