ಉಳ್ಳಾಲ: “ಬಯಸಿದ್ದು ಎಲ್ಲರಿಗೂ ಸಿಗುವುದು ಕಡಿಮೆ, ಆದರೆ ಹಲವು ವರ್ಷಗಳ ಪ್ರೀತಿ ಹರಿಪ್ರಿಯಾರನ್ನು ಭಗವಂತ ಕೊಟ್ಟಿದ್ದಾನೆ. ಅದಕ್ಕೆ ನಾನು ದೇವರಿಗೆ ಚಿರ ಋಣಿಯಾಗಿದ್ದೇನೆ. ಇದು ನವದಂಪತಿಯಾಗಿ ನಮ್ಮ ಮೊದಲ ದಸರಾ ಹಬ್ಬವಾಗಿದೆ. ಇದನ್ನು ನಾವು ಕರಾವಳಿಯಲ್ಲೇ ಆಚರಿಸಿಕೊಂಡಿದ್ದೇವೆ” ಎಂದು ವಸಿಷ್ಠ ಸಿಂಹ (Vasishta Simha) ಹೇಳಿದ್ದಾರೆ. ಅ.25ರಂದು ಮಂಗಳೂರಿನ ಕಲ್ಲಾಪು ಕೊರಗಜ್ಜ ಸ್ಥಾನಕ್ಕೆ ಭೇಟಿ ನೀಡಿದ್ದ ದಂಪತಿ ಕರಾವಳಿಯಲ್ಲಿ ಕಳೆದ ದಸರಾ ಅನುಭವವನ್ನು ಹಂಚಿಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ಮಂಗಳೂರು ಹಾಗೂ ಉಡುಪಿಯಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ಇರುವ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ದಂಪತಿ ಇಂದು ಕಲ್ಲಾಪು ಬುರ್ದುಗೋಳಿ ಕ್ಷೇತ್ರಕ್ಕೆ ಭೇಟಿ ನೀಡಿ ಕೊರಗತನಿಯನ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ʻʻದಕ್ಷಿಣ ಕನ್ನಡ ಜಿಲ್ಲೆಗೆ ಬಂದಾಗ ಕೊರಗಜ್ಜನ ದರ್ಶನ ಮಾಡದೇ ಇದ್ದಲ್ಲಿ ವಾಪಸ್ಸು ತೆರಳುವಾಗ ಹೊರೆ ಹೊತ್ತಂಥ ಅನುಭವ ಆಗುತ್ತದೆ. ಮುಂದೆ ಲವ್ಲೀ ಚಿತ್ರ ಬಿಡುಗಡೆಯಾಗಲಿದ್ದು, ಬಹುತೇಕ ಶೂಟಿಂಗ್ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಆಗಿದೆ. ಶೂಟಿಂಗ್ ನಟೆದ ದೇವಸ್ಥಾನಕ್ಕೆ ಭೇಟಿ ನೀಡಲು ಬಯಸಿದ್ದೆ, ಸಾಧ್ಯವಾಗಿರಲಿಲ್ಲ. ಶೂಟಿಂಗ್‌ನಿಂದ ಸಾಧ್ಯವಾಯಿತುʼʼ ಎಂದರು ವಸಿಷ್ಠ ಸಿಂಹ.
ನಟಿ ಹರಿಪ್ರಿಯಾ ಮಾತನಾಡಿ, ʻʻತನ್ನ ಮೊದಲ ನಟನೆ ಕರಾವಳಿಯಿಂದಲೇ ಆರಂಭವಾಯಿತು. ʻಬದಿʼ ಎನ್ನುವ ತುಳು ಚಿತ್ರದಲ್ಲಿ ಪ್ರಥಮವಾಗಿ ನಟಿಸಿದ್ದೆ. ದಸರಾ ವಾರ ವಿಶೇಣವಾಗಿತ್ತು. ವಶಿಷ್ಠ ಅವರ ಹುಟ್ಟುಹಬ್ಬವನ್ನು ಇಲ್ಲೇ ಆಚರಿಸಿದ್ದು, ನಾನೇ ಅವರಿಗೆ ಹುಟ್ಟುಹಬ್ಬದ ಗಿಫ್ಟ್ ಆಗಿರುವೆ. ವಾರದುದ್ದಕ್ಕೂ ಕರಾವಳಿಯ ಎಲ್ಲಾ ದೇವಸ್ಥಾನಗಳ ಸಂದರ್ಶನ ನಡೆಸಿ ಕೃತಾರ್ಥರಾದೆವುʼʼ ಎಂದರು.
ಇದನ್ನೂ ಓದಿ: Actress Haripriya: ತೆಲಂಗಾಣದಲ್ಲಿ ವಸಿಷ್ಠ ಸಿಂಹಗೆ ಹರಿಪ್ರಿಯಾ ನೀಡಿದ ಸರ್‌ಪ್ರೈಸ್ ಏನು?
ಅ.23ರಂದು ದಂಪತಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ನೆಲಭೋಜನ ಹರಕೆಯನ್ನು ತೀರಿಸಿದ್ದರು. ಇದಾದ ಬಳಿಕ ಮಂತ್ರಾಲಯಕ್ಕೆ ಹೋಗಿದ್ದರು. ರಾಯರ ದರ್ಶನ ಪಡೆದ ಬಳಿಕ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದು, ದೇವರ ದರ್ಶನ ಪಡೆದಿದ್ದರು.
ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜನವರಿ 26ರಂದು ಗಣರಾಜ್ಯ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಇಬ್ಬರ ಮದುವೆ ಸಮಾರಂಭ ನಡೆದಿತ್ತು. ಇಬ್ಬರು ಸರಳವಾಗಿ ಹಸೆಮಣೆ ಏರಿದ್ದು ಫೋಟೋಗಳು ಎಲ್ಲಾ ಕಡೆ ವೈರಲ್ ಆಗಿತ್ತು.